ಅಂಕಣ ಸಂಗಾತಿ

ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ

ಸೌಂದರ್ಯವರ್ಧಕಗಳನ್ನು

ಬಳಸುವಾಗ ಎಚ್ಚರಿಕೆ ಇರಲಿ

     ಹಾಯ್…ಹೇಗಿದ್ದೀರಿ ಎಲ್ಲರೂ? ಚಳಿಗಾಲ ಆರಂಭ ಆಗಿದೆ. ಒಳಗೆ ಬೆಚ್ಚನೆ ಕುಳಿತಿದ್ದ ಸ್ವೆಟರ್, ಕ್ಯಾಪ್, ಶೂಸ್, ಇವನ್ನೆಲ್ಲ ತೆಗೆದುಕೊಂಡು ಬೆಳಗ್ಗೆ ವಾಕಿಂಗ್ ಹೋಗುವಾಗಲೂ ಅದನ್ನು ತೊಟ್ಟುಕೊಂಡೆ ಹೋಗಬೇಕಾದ ಅನಿವಾರ್ಯತೆ ಬಂದಿದೆ. ಈ ಚಳಿಯ ಸಮಯದಲ್ಲಿ ನಮ್ಮ ಚರ್ಮವನ್ನು ಚೆನ್ನಾಗಿ ಇಟ್ಟುಕೊಳ್ಳುವುದು ಒಂದು ಚಾಲೆಂಜಿನ ಕೆಲಸವೇ ಸರಿ. ಬಿಸಿಲಿಗೆ ಹೋಗುವಾಗ ಸನ್ ಸ್ಕ್ರೀನ್ ಲೋಷನ್ ಗಳನ್ನು ಬಳಸಿಕೊಳ್ಳುವುದು ಮತ್ತು ಚರ್ಮದ ತೇವವನ್ನು  ಕಾಪಾಡಿಕೊಳ್ಳಲು ವ್ಯಾಸೆಲಿನ್ , ಲೋಷನ್, ಕ್ರೀಂ ಮಂತಾದ ಹಲವಾರು ಚರ್ಮದ ಕ್ರಿಮಿಗಳ ಮೊರೆ ಹೋಗುವುದು ಸರ್ವೇಸಾಮಾನ್ಯ. ಹಲವಾರು ಚರ್ಮದ ಕ್ರಿಮಿಗಳ ಬೆಲೆ ಅಂತ ಎಂದು ಗಗನಕ್ಕೆ ಮುಟ್ಟಿದೆ. ಸೌಂದರ್ಯವರ್ಧಕಗಳ ಹೆಸರಿನಲ್ಲಿಯೇ ಕಂಪೆನಿಗಳು ಮಹಿಳೆಯರಿಂದ ಹಲವಾರು ರೂಪಾಯಿಗಳಷ್ಟು ದೋಚಿಕೊಂಡು ಹಗಲು ದರೋಡೆ ಮಾಡುತ್ತಾ ಸಿರಿವಂತರಾಗುತ್ತಿದ್ದಾರೆ. ಮಹಿಳೆಯರೂ ಅಷ್ಟೇ , ಸೌಂದರ್ಯ ವರ್ಧಕಗಳ ಬಳಕೆಯಲ್ಲಿ ಹಿಂದೆ ಬಿದ್ದಿಲ್ಲ. ಅದೆಷ್ಟೇ ಕಂಪೆನಿಗಳು ಸೌಂದರ್ಯ ವರ್ಧಕಗಳ ಉತ್ಪಾದನೆ ಪ್ರಾರಂಭಿಸಿದರೂ ಕೂಡ ಎಲ್ಲಾ ಕಂಪನಿಯ ಸೌಂದರ್ಯ ವರ್ಧಕಗಳು ಕೂಡ ನಿತ್ಯ ಬಳಕೆಯಾಗುತ್ತಲೇ ಇವೆ.
                 ಸೌಂದರ್ಯ ವರ್ಧಕಗಳನ್ನು ಬಳಸಿಕೊಳ್ಳುವಾಗ ಅದರ ಬಗ್ಗೆ  ಯಾರು ಮಾಹಿತಿ ನೀಡಿದರು ಎಂಬ ಅಂಶವನ್ನು ಗಮನಿಸುವುದರ ಜೊತೆಗೆ ನನ್ನ ಚರ್ಮಕ್ಕೆ ಯಾವುದು ಉತ್ತಮ , ನನ್ನ ದೇಹದ ಮಾದರಿಗೆ ಯಾವುದು ಸರಿ ಹೊಂದುತ್ತದೆ ಎನ್ನುವುದನ್ನು ಮೊದಲು ನೋಡಿಕೊಳ್ಳಬೇಕು. ಇನ್ನು ಕೆಲವು ಮಹಿಳೆಯರು ಸಾವಿರಗಟ್ಟಲೆ ಹಣ ಕೊಟ್ಟು ಸೌಂದರ್ಯ ವರ್ಧಕಗಳನ್ನು ಮನೆಗೆ ತಂದುಕೊಂಡು ಬಂದು,  ಅದನ್ನು ಸರಿ ಇಲ್ಲ ಎಂದು  ಉಪಯೋಗಿಸದೆ ಅದರ ಕೊನೆಯ ಅವಧಿ ಮುಗಿಯುವವರೆಗೆ ಸುಮ್ಮನೆ ಮನೆಯಲ್ಲಿ ಇಟ್ಟುಕೊಂಡು ಮತ್ತೆ ಅದನ್ನು ಬಿಸಾಕಿ ಬಿಡುತ್ತಾರೆ. ಈ ತರಹ ಮಾಡದೆ ಸರಿಯಾದ ಸೌಂದರ್ಯದ ತಜ್ಞರ ಬಳಿ ಸಲಹೆ ಪಡೆದು,  ಅವರು ಹೇಳಿದ ಸರಿಯಾದ ಕ್ರೀಮು, ಪೌಡರ್, ಬಿಂದಿ ಇವೇ ಮುಂತಾದುವನ್ನು ತೆಗೆದುಕೊಂಡು ಉಪಯೋಗಿಸುವುದು ಒಳ್ಳೆಯದು. ಸಿಕ್ಕಿ ಸಿಕ್ಕಿದ ಕ್ರೀಮುಗಳು , ಕಾಜಲ್,  ಐ ಲೈನರ್,  ಲಿಪ್ ಸ್ಟಿಕ್, ಬೇಸ್ ಕ್ರೀಂ, ಶೇಡಿಂಗ್,  ಫೇಸ್ ವಾಶ್,  ಫೇಸ್ ಪ್ಯಾಕ್, ಪೌಡರ್, ಮಸ್ಕರಾ, ಲಿಪ್ ಲೈನರು, ಬೇಸ್ ಕ್ರೀಂ ಮೊದಲಾದ ಮೇಕಪ್ ಐಟಂಗಳು ಕಡಿಮೆ ಬೆಲೆಗೆ ಸಿಕ್ಕಿದರೂ ಕೂಡ ಅವುಗಳನ್ನು ಒಟ್ಟಾರೆಯಾಗಿ ತೆಗೆದುಕೊಳ್ಳದೆ ಸರಿಯಾದ ಸಲಹೆಯ ಪ್ರಕಾರ ತೆಗೆದುಕೊಂಡು ಬಳಸಬೇಕು. ಇಲ್ಲದೆ ಹೋದರೆ ಚರ್ಮದ ಇನ್ಫೆಕ್ಷನ್, ತೊಂದರೆಗಳು, ತುರಿಕೆ, ಕಜ್ಜಿ, ಊತ, ಕಲೆ ಉಂಟಾಗಬಹುದು.

         ಯಾರೇ ದುಡಿದಿರಲಿ ಹಣವು ಕಷ್ಟ ಪಡದೆ ಸಿಗದು ಅದನ್ನು ವ್ಯಯ ಮಾಡಬಾರದು. ಆ ಮೇಕಪ್ ಐಟಂಗಳಿಗೆ ಸುರಿಯುವ ಹತ್ತಾರು ಸಾವಿರ ರೂಪಾಯಿಗಳನ್ನು ಯಾರೋ ಬಡವರಿಗೆ ಕೊಟ್ಟರೆ ಅವರು ಒಂದು ತಿಂಗಳು ಊಟ ಮಾಡಿ ನೆಮ್ಮದಿಯಾಗಿರಬಹುದು ಎಂಬ ಮಾತನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಅಲ್ಲದೆ ತಾನು ಬಳಸುವ ಈ ವಸ್ತುವಿನಿಂದ ನಾನು ನಿಜವಾಗಿ ಅಂದ ಕಾಣುವೆನೆ, ಆ ಬಣ್ಣ ನನ್ನ ಚರ್ಮದ ಬಣ್ಣಕ್ಕೆ ಸರಿ ಹೊಂದುವುದೇ ಎಂದು ಕನ್ನಡಿಯಲ್ಲಿ ಸರಿಯಾಗಿ ನೋಡಬೇಕು. ಜೊತೆಗೆ ಒಮ್ಮೆ ಫೋಟೋ ತೆಗೆದು ನೋಡಬೇಕು. ಮನಸ್ಸಿಗೆ ಸಮಾಧಾನ ಆಗದೆ ಇದ್ದರೆ ಅದನ್ನು ಬಳಸ ಬಾರದು. ಇತರರಿಗೆ ಅಸಹ್ಯ ಹುಟ್ಟಿಸುವ ಹಾಗೆ ನಮ್ಮ ಮೇಕ್ ಅಪ್ ಇರಬಾರದು ಅಲ್ಲವೇ?ನೈಜತೆಗೆ ಹತ್ತಿರ ಇರಬೇಕು. ಹಲವಾರು ಸೌಂದರ್ಯ ವರ್ಧಕಗಳು ನಮ್ಮಲ್ಲಿ ಚರ್ಮಕ್ಕೆ ಹೊಂದಿಕೊಳ್ಳದೆ ಬೇರೆ ರೋಗಗಳು ಬರುವ ಸಾಧ್ಯತೆ ಇರುತ್ತದೆ. ಅಂತಹ ತೊಂದರೆಗೆ ನಾವೇ  ಎಡೆ ಮಾಡಿ ಕೊಡಬಾರದು. ಕೂದಲಿಗೆ ಬಣ್ಣ ಹಾಕಿ, ಅದನ್ನು ನೇರ ಮಾಡಲು ಹೋದ ಮಹಿಳೆ ಒಬ್ಬಳು ಅದನ್ನು ಸರಿ ಮಾಡಲು ಮತ್ತೆ ಐವತ್ತು ಸಾವಿರದವರೆಗೆ ಖರ್ಚು ಮಾಡಬೇಕಾಗಿ ಬಂತು. ಆದರೂ ಕೂದಲು ಚೆನ್ನಾಗಿ ಆಗಲಿಲ್ಲ. ಮುಖದಲ್ಲಿ ಕ್ರೀಂ ಹಾಕಿ ಇನ್ಫೆಕ್ಷನ್ ಆದ ಒಬ್ಬ ಮಹಿಳೆಗೆ ತನ್ನ ಮುಖ ಮೊದಲಿನಂತೆ ಆಗಲು ಒಂದು ಲಕ್ಷ ಖರ್ಚಾಯಿತು. ಕೋನ್ ಬಳಸಿ ಮದರಂಗಿ ಹಾಕಿ ಕೈಯಲ್ಲೆಲ್ಲಾ ಗುಳ್ಳೆ ಬಂದು ಅದನ್ನು ಸರಿ ಪಡಿಸಲು ಆರು ತಿಂಗಳು ಬೇಕಾಯಿತು ಮತ್ತು ಹಣವೂ ಖರ್ಚಾಯಿತು. ಕಡಿಮೆ ಟಿ ಎಫ್ ಎಂ ಪ್ರಮಾಣ ಕಡಿಮೆ ಇರುವ ಸಾಬೂನನ್ನು ಪ್ರತಿದಿನ ಹಾಕಿ ಸ್ನಾನ ಮಾಡುವುದರಿಂದ ಗರ್ಭಿಣಿ ಮಹಿಳೆಗೂ ಗರ್ಭಪಾತ ಆಗುವ ಸಂಭವ ಇದೆ ಎಂದು ಸಂಶೋಧನೆಗಳಿಂದ ದೃಢ ಪಟ್ಟಿದೆ. ಉತ್ತಮ ಗುಣಮಟ್ಟದ ಸಾಬೂನು, ಮಾರ್ಜಕಗಳನ್ನೆ ಬಳಸಬೇಕು ಎಂದು ನಮಗೆ ಇದರಿಂದ ತಿಳಿಯುತ್ತದೆ. ಕ್ರೀಂ ಗಳು ಕೂಡಾ ಹಾಗೆಯೇ ಅಲ್ಲವೇ?
             ಮನೆಯಲ್ಲಿ ಸಿಗುವಂತಹ ಹಲವಾರು ಆಯುರ್ವೇದಿಕ್ ವಸ್ತುಗಳನ್ನು ಬಳಸಿಕೊಂಡು ಸೌಂದರ್ಯವರ್ಧಕಗಳನ್ನು ತಯಾರಿಸುವುದನ್ನು ನಾವು ಕಲಿತುಕೊಳ್ಳಬೇಕು. ಯೂಟ್ಯೂಬ್ ಚಾನೆಲ್ ಗಳಲ್ಲಿ , ಟಿವಿಗಳಲ್ಲಿ ಹಲವಾರು ವೈದ್ಯರುಗಳು ಹಾಗೂ ಸೌಂದರ್ಯ ತಜ್ಞರು ಹಲವಾರು ಸಲಹೆಗಳನ್ನು ಪ್ರತಿನಿತ್ಯ ತಮ್ಮ ವಿಡಿಯೋದ ಮೂಲಕ ನೀಡುತ್ತಾ ಬಂದಿದ್ದಾರೆ. ಅವುಗಳಲ್ಲಿ ತಮಗೆ ಸರಿಹೊಂದುವ ವಸ್ತುಗಳನ್ನು ಮಾಡಿಕೊಂಡು ಅದನ್ನು ಹಚ್ಚಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಸಮಯ ಸಿಕ್ಕಾಗಲೆಲ್ಲ ಮನೆಯಲ್ಲೇ ಸಿಗುವ ಅಡುಗೆ ಮನೆಯ ಹಾಗೂ ತರಕಾರಿ ಹಣ್ಣು ಈ ರೀತಿಯ ವಸ್ತುಗಳನ್ನು ಬಳಸಿಕೊಂಡು ಸಾಧ್ಯವಾದಷ್ಟು ರಾಸಾಯನಿಕಗಳಿಂದ ದೂರವಿರುವಂತೆ ನಮ್ಮನ್ನು ನಾವೇ ನೋಡಿಕೊಳ್ಳಬೇಕು.


             ಎಲ್ಲರಿಗೂ ನಾವು ಅಂದವಾಗಿ ಕಾಣಬೇಕೆಂಬ ಆಸೆ ಇರುತ್ತದೆ. ಆದರೆ ಏನೋ ಮಾಡಲು ಹೋಗಿ ಮತ್ತಿನ್ನೇನೋ ಆಗಬಾರದು. ಅದಕ್ಕೆ ಆದಷ್ಟು ಆಯುರ್ವೇದ ವಸ್ತುಗಳನ್ನು ಬಳಸುವುದನ್ನು ಕಲಿಯಬೇಕು ಇದರಿಂದ ಯಾವುದೇ ಸೈಡ್ ಎಫೆಕ್ಟ್ ಗಳು ಇರುವುದಿಲ್ಲ. ಮನೆಯಲ್ಲಿ ವೇಸ್ಟ್ ಎಂದು ಬಿಸಾಡುವ ಹಲವಾರು ಹಣ್ಣುಗಳ ಮತ್ತು ತರಕಾರಿಗಳ ಸಿಪ್ಪೆಗಳು, ತರಕಾರಿ, ಹಣ್ಣು, ಅಡುಗೆ ಮನೆಯ ವಸ್ತುಗಳು ಇವುಗಳನ್ನೆಲ್ಲ ಬಳಸಿ ಉತ್ತಮವಾದ ರಾಸಾಯನಿಕ ವಲ್ಲದ ಹಲವಾರು ಸೌಂದರ್ಯ ವರ್ತಕಗಳನ್ನು ನಾವೇ ಮನೆಯಲ್ಲಿ ತಯಾರಿಸಿಕೊಂಡು ನಮ್ಮ ಸೌಂದರ್ಯ ಹಾಗೂ ಆರೋಗ್ಯವನ್ನು ಕೂಡ ವೃತ್ತಿಪಡಿಸಿಕೊಳ್ಳಬಹುದು. ಇದಕ್ಕೆ ಬೇಕಾದರೆ ಆಯುರ್ವೇದಿಕ್ ಹಾಗೂ ನಾಟಿ ವೈದ್ಯರ ಸಲಹೆಗಳನ್ನು ಪಡೆದುಕೊಳ್ಳಬಹುದು. ಮನೆಯಲ್ಲಿ ಹಿರಿಯರಿದ್ದರೆ ಅಜ್ಜಿ ಅಜ್ಜಂದಿರು ಅಪಾರ ಅನುಭವಗಳನ್ನು ಮತ್ತು ಜ್ಞಾನವನ್ನು  ಹೊಂದಿದವರಾಗಿರುತ್ತಾರೆ. ಅವರ ಸಲಹೆಗಳನ್ನು ಪಡೆದುಕೊಳ್ಳಬಹುದು.
          ತಾವೇ ಸ್ವತ: ಬೇರೆ ಬೇರೆ ಪುಸ್ತಕಗಳನ್ನು ಓದಿ ಅವುಗಳಿಂದ ಜ್ಞಾನವನ್ನು ಪಡೆದುಕೊಂಡು ಸರಿಯಾದ ರೀತಿಯಲ್ಲಿ ಅವುಗಳನ್ನು ಕಲಿತು ನಮ್ಮ ಸೌಂದರ್ಯ ವರ್ಧಕಗಳನ್ನು ನಾವೇ ತಯಾರು ಮಾಡಿಕೊಳ್ಳಬಹುದು. ಇದರಿಂದ ಯಾವ ರೀತಿಯ ಸಮಸ್ಯೆಯು ಉಂಟಾಗದು. ತಿಂದು ಬಿಸಾಕುವ ದಾಳಿಂಬೆ ಸಿಪ್ಪೆ, ಕಿತ್ತಳೆ ಹಣ್ಣಿನ ಸಿಪ್ಪೆ, ಮಾವಿನ ಹಣ್ಣು ಕಲ್ಲಂಗಡಿ ಹಣ್ಣು ಮೊದಲಾದ ಹಣ್ಣುಗಳ ಸಿಪ್ಪೆಗಳಿಂದ ತುಪ್ಪ ಹಾಗೂ ಜೇನುತುಪ್ಪವನ್ನು ಬಳಸಿಕೊಂಡು ಹಲವಾರು ಸೌಂದರ್ಯ ವರ್ಧಕಗಳನ್ನು ತಯಾರಿಸುತ್ತಾರೆ. ಮನೆಯ ತೋಟದಲ್ಲೇ ಬೆಳೆಯುವಂತಹ ಅಲೋವೆರಾ ಹಾಗೂ ತೆಂಗಿನೆಣ್ಣೆಯನ್ನು ಉಪಯೋಗಿಸಿಕೊಂಡು ಹಾಗೆಯೇ ದಾಸವಾಳದ ಎಲೆ ಹೂಗಳನ್ನು ಬಳಸಿಕೊಂಡು ತಲೆಯ ಸ್ನಾನಕ್ಕೆ ಬೇಕಾದ ಶಾಂಪೂವನ್ನು ತಯಾರಿಸಿಕೊಳ್ಳುತ್ತಾರೆ. ಇವೆಲ್ಲ ಹೆಚ್ಚು ಖರ್ಚು ಇಲ್ಲದೆ ಸಿಗುವಂತಹ ವಸ್ತುಗಳು. ಅಡುಗೆ ಮನೆಯಲ್ಲಿ ಇರುವಂತಹ ಕಡಲೆಹಿಟ್ಟು, ಅರಿಶಿನ,  ಕೊಬ್ಬರಿ ಎಣ್ಣೆ, ತೆಂಗಿನಕಾಯಿಯ ನೀರು ಇವುಗಳನ್ನೆಲ್ಲ ತಮ್ಮ ಅಂದವನ್ನು ಹೆಚ್ಚಿಸಲು ಉಪಯೋಗಿಸಿಕೊಳ್ಳಬಹುದು.
   ವಿವಿಧ ರೀತಿಯ ರಾಸಾಯನಿಕಗಳನ್ನು ಬಳಸಿದ ಬಾಡಿ ಸ್ಪ್ರೇಗಳು,  ಸೆಂಟುಗಳು ಅವುಗಳ ವಾಸನೆಯಿಂದಾಗಿ ನಮ್ಮನ್ನು ನೆಮ್ಮದಿಯಾಗಿರಲಿ ಬಿಡುವುದಿಲ್ಲ,  ನಮ್ಮ ಜೊತೆಗಿದ್ದವರಿಗೂ ಕೂಡ ಅದು ತಲೆನೋವನ್ನು ತರುತ್ತವೆ. ಇಂತಹ ರಾಸಾಯನಿಕಗಳನ್ನು ಮೈಗೆ ಹಚ್ಚಿಕೊಂಡು ಚರ್ಮದ ಕಾಯಿಲೆಗಳನ್ನು ಧರಿಸಿಕೊಳ್ಳುವ ಬದಲಾಗಿ ದೇಹವನ್ನು ಎಣ್ಣೆಯಿಂದ ಶುದ್ಧಗೊಳಿಸಿ ಚೆನ್ನಾಗಿ ಸ್ನಾನ ಮಾಡಿ ಚರ್ಮವನ್ನು ನೈಸರ್ಗಿಕವಾಗಿ ಹೊಳೆಯುವಂತೆ ಮಾಡಬಹುದು.
  ನಮ್ಮ ದೇಹವನ್ನು ರಾಸಾಯನಿಕಗೊಳಿಸಿಕೊಳ್ಳದೆ ಪ್ರಕೃತಿದತ್ತವಾಗಿ ಬೆಳೆಸಲು ಪ್ರಕೃತ ಅಂದವನ್ನು ಪಡೆಯಲು ಬಯಸಿ ಅಂತಹ ವಸ್ತುಗಳನ್ನು ಉಪಯೋಗಿಸಿ ಯಾವುದೇ ಕಾಯಿಲೆಗಳಿಲ್ಲದೆ ಚೆನ್ನಾಗಿ ಬಾಳೋಣ ಅಲ್ಲವೇ? ನೀವೇನಂತೀರಿ?
@ಹನಿಬಿಂದು@

ಹನಿಬಿಂದು

ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು.

Leave a Reply

Back To Top