ರೋಹಿಣಿ ಯಾದವಾಡ ಕವಿತೆ-ಒಂಟಿ ಪಯಣ”

ಕಾವ್ಯ ಸಂಗಾತಿ

ರೋಹಿಣಿ ಯಾದವಾಡ

ಒಂಟಿ ಪಯಣ”

ಸಾಗುತಿದೆ ಪಯಣ ಇಲ್ಲಿ ಗೊತ್ತು ಗುರಿಯಲಿ
ಹೆಜ್ಜೆ ಗುರುತುಗಳ ಮೂಡಿಸಿ ಮರಳಿನಲಿ
ಬರೀ ಹೆಜ್ಜೆಯಲ್ಲ ಅವು ನನ್ನ ಅಸ್ಮಿತೆಯು
ನೋವು ನಲಿವಿನ ಬದುಕ
ಗುರುತುಗಳು

ನನ್ನ ಹೆಜ್ಜೆಯಲ್ಲಿ ನಿನ್ನ ಹೆಜ್ಜೆ ಸಾಗಲಿಲ್ಲ
ವಿಧಿ ಲಿಖಿತ ಏನಿಹುದು ಅದೇ ಆಗುವುದಲ್ಲ
ಜೊತೆಗೂಡದಿರೆ ನಿಲ್ಲುವುದೇ ಹೆಜ್ಜೆಗಳು
ಒಂಟಿ ಪಯಣದಲಿ ಮೂಡಿಸಿ ಸಾಗಿ ಮುಂದೆ

ನಾ ನಡೆವ ದಾರಿಗೆ ನಿನ್ನದೆ ನೆನಪುಗಳು
ನೀನಿತ್ತ ಧೈರ್ಯ ಸ್ಥೈರ್ಯಗಳೆ ನನ್ನ ಅಸ್ತ್ರಗಳು
ಸಾಗುತಿಹೆನು ಎಡರು ತೊಡರುಗಳ ಮೆಟ್ಟಿ
ಹೆಜ್ಜೆಯ ಗುರುತು ಅಳಿಯದಂತೆ ಮಾಸಿ

ನಿರ್ಜನ ಎನಿಸುತಿದೆ ಬಾಳ ಬದುಕಿನ ಬಂಡಿ
ಸಾಗಿಹ ಮೆರವಣಿಗೆಯಲ್ಲಿ ನೆನಹುವೆಲ್ಲ ಹಳಬಂಡಿ
ಒಂಟಿ ಪಯಣಿಗರೆಂದು ನಡೆಯಬೇಕು ಇಲ್ಲಿ
ಗಟ್ಟಿಯಾಗಿ ಊರಿ ಇಡಬೇಕು ಹೆಜ್ಜೆಗಳನಿಲ್ಲಿ.

—————————-

ರೋಹಿಣಿ ಯಾದವಾಡ

Leave a Reply

Back To Top