ಹೊಸ ಬದುಕು ಕಟ್ಟಿಕೊಟ್ಟ ಕೊರೋನಾ, ವೀಣಾ ಹೇಮಂತ್ ಗೌಡ ಪಾಟೀಲ್ ಅವರ ಸಣ್ಣಕಥೆ

ಕಥಾಸಂಗಾತಿ

ವೀಣಾ ಹೇಮಂತ್ ಗೌಡ ಪಾಟೀಲ್

ಹೊಸ ಬದುಕು ಕಟ್ಟಿಕೊಟ್ಟ ಕೊರೋನಾ,

ಸಮುದ್ರದ ದಡದಲ್ಲಿ ನಿಂತ ಆಕೆ ಸೂರ್ಯಾಸ್ತವನ್ನು ನೋಡುತ್ತಿದ್ದಳು. ತಣ್ಣನೆಯ ಕುಳಿರ್ಗಾಳಿಗೆ ಆಕೆಯ ಮುಂಗುರುಳು ಹಾರಾಡುತ್ತಿತ್ತು. ಸ್ವಲ್ಪ ದೂರದಲ್ಲಿ ಹಾದು ಹೋಗುತ್ತಿದ್ದ ದಂಪತಿಗಳು ಈಕೆಯನ್ನು ನಿಟ್ಟಿಸಿ ನೋಡಿ ನೀನು ಕ್ಷಮಾ ಅಲ್ಲವಾ?? ಎಂದು ಕೇಳಿದರು. ಕೂಡಲೇ ಆಕೆ ಅಲ್ಲ ನಾನು ನವ್ಯ ಎಂದು ಹೇಳಿದಳು. ಆ ದಂಪತಿಗಳು ಓ ಹೌದೇ ನಮ್ಮ ಊರಿನಲ್ಲಿ ನಮ್ಮ ಪರಿಚಯದ  ಕ್ಷಮಾ ಎಂಬ ಹುಡುಗಿ ಇದ್ದಳು. ನಿನಗೆ ಆಕೆಯದೆ ಹೋಲಿಕೆ ಆದ್ದರಿಂದ ಕೇಳಿದೆ, ತಪ್ಪು ತಿಳಿಯಬೇಡಮ್ಮ ಎಂದು ಆ ದಂಪತಿಗಳು ಹೇಳಿದರು. ಪರ್ವಾಗಿಲ್ಲ ಬಿಡಿ ಎಂದು ಹೇಳುತ್ತಾ ನವ್ಯ ಮುನ್ನಡೆದಳು. ಹಿಂದಿನಿಂದ ಆ ದಂಪತಿಗಳು ಎಷ್ಟೊಂದು ವಿಚಿತ್ರ ಅಲ್ಲವಾ!! ಇಷ್ಟೊಂದು ಹೋಲಿಕೆಯನ್ನು ಎಲ್ಲೂ ನೋಡಿರಲಿಲ್ಲ ಎಂದು ತಮ್ಮ ತಮ್ಮಲ್ಲೇ ಮಾತನಾಡುವುದನ್ನು ಕೇಳಿದ ನವ್ಯಳ ಮನಸ್ಸು ನಾಲ್ಕು ವರ್ಷ ಹಿಂದೆ ಓಡಿತು.

ಹುಟ್ಟಿದ್ದು ಕಡುಬಡತನದ ಮನೆಯಲ್ಲಿ, ಚಿಕ್ಕಂದಿನಲ್ಲೇ ತಂದೆ ತಾಯಿಯರನ್ನು ಕಳೆದುಕೊಂಡು ಸೋದರ ಮಾವನ ಆಶ್ರಯದಲ್ಲಿ ಬೆಳೆದ ಆಕೆ ಸೌಂದರ್ಯದ ಖನಿ. ಮಾವನ ಪತ್ನಿ ಮತ್ತು ಮಕ್ಕಳ ಅಸಡ್ಡೆ, ಅನಾದರಗಳ ನಡುವೆ ಬೆಳೆದ ಆಕೆಯ ಕೈಹಿಡಿದದ್ದು ವಿದ್ಯೆಯೊಂದೇ. ಪಿಯುಸಿ ಮುಗಿದ ಕೂಡಲೇ ಆಕೆಯನ್ನು ಸೋದರ ಮಾವ ಪದವಿ ತರಗತಿಗೆ ದಾಖಲು ಮಾಡಿ ಸರ್ಕಾರದವರು ಕೊಡ ಮಾಡುವ ಹಾಸ್ಟೆಲಿನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿ ಆಗಾಗ ಬಂದು ಭೇಟಿಯಾಗುವೆ ಎಂದು ಹೇಳಿ ಹೊರಟು ಹೋದನು. ಕಾಲೇಜಿನ ಜೊತೆ ಜೊತೆಗೆ ಪಾರ್ಟ್ ಟೈಮ್ ಕೆಲಸ ಮಾಡುತ್ತಾ ಆಕೆ ತನ್ನ ಸಣ್ಣ ಪುಟ್ಟ ಖರ್ಚುಗಳನ್ನು ನಿಭಾಯಿಸಿಕೊಳ್ಳತೊಡಗಿದಳು. ಪದವಿ ಮುಗಿದ ನಂತರ
ಸಣ್ಣ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇರಿಕೊಂಡು ಖಾಸಗಿಯಾಗಿ ಬಿ.ಎಡ್. ಪದವಿ ಪೂರೈಸಿಕೊಂಡಳು.

 ಪ್ರತಿದಿನ ಶಾಲೆಗೆ ಹೋಗಿ ಬರುವ ಹಾದಿಯಲ್ಲಿ ಈಕೆಯನ್ನು ನೋಡುತ್ತಿದ್ದ ಓರ್ವ ಶ್ರೀಮಂತ ಯುವಕ ಈಕೆಯನ್ನು ಮೊದಲ ನೋಟದಲ್ಲಿಯೇ ಪ್ರೀತಿಸಿ ಆಕೆಯ ಪೂರ್ವಾಪರವನ್ನು ವಿಚಾರಿಸಿದನು. ಒಂದೇ ವಾರದಲ್ಲಿ ದೇವಸ್ಥಾನದ ಆವರಣದಲ್ಲಿ ಆಕೆಯನ್ನು ನಿಲ್ಲಿಸಿ ನಾನು ಅರುಣ್ ಎಂದು. ನನ್ನಪ್ಪ ಅಮ್ಮನಿಗೆ ನಾನು ನನ್ನ ತಮ್ಮ… ಇಬ್ಬರೇ ಮಕ್ಕಳು. ನಾನು ಎಂಬಿಎ ಮಾಡಿ ನಮ್ಮದೇ ಸ್ವಂತ ಕಂಪನಿಯನ್ನು ನೋಡಿಕೊಳ್ಳುತ್ತಿದ್ದೇನೆ. ನನಗೆ ಮೊದಲ ನೋಟದಲ್ಲಿಯೇ ನಿನ್ನ ಮೇಲೆ ಪ್ರೇಮವಾಗಿದೆ. ನೀನು ಓದಿದ ಬಿ ಎಡ್ ಕಾಲೇಜಿನ ಪ್ರಿನ್ಸಿಪಾಲರ ಮಗ ನನ್ನ ಸ್ನೇಹಿತ. ಆತನಿಂದ ನಿನ್ನ ಕುರಿತು ಎಲ್ಲ ವಿವರವನ್ನು ಪಡೆದಿದ್ದೇನೆ. ನನ್ನ ಮನಸ್ಸಿನಲ್ಲಿರುವುದನ್ನು ನಿನಗೆ ಬಿಚ್ಚಿ ಹೇಳಿದ್ದೇನೆ…. ನಿನಗೆ ನನ್ನ ಈ ಪ್ರಸ್ತಾಪ ಇಷ್ಟವಿದ್ದರೆ ನಾವು ಮುಂದುವರೆಯೋಣ ಎಂದು ಸರಳವಾಗಿ ಆದರೆ ಸ್ಫುಟವಾದ ಧ್ವನಿಯಲ್ಲಿ ಹೇಳಿದನು. ಆಕೆ ತಲೆಯೆತ್ತಿ ಅವನನ್ನು ದಿಟ್ಟಿಸಿ ನೋಡಿದಳು. ಸದೃಢ ಶರೀರದ ಕಡುಗಪ್ಪುಗೂದಲಿನ ಗೋದಿ ಬಣ್ಣದ ಆ ಯುವಕ ನೋಡಲು ಲಕ್ಷಣವಾಗಿದ್ದ. ಆತನ ಹಿನ್ನೆಲೆಯ ಬಗ್ಗೆ ಆಕೆಗೆ ಏನೂ ಅರಿವಿರದಿದ್ದರೂ ಒಂದೆರಡು ದಿನಗಳಲ್ಲಿ ಯೋಚಿಸಿ ಹೇಳುವೆ ಎಂದು ಮನೆಗೆ ತೆರಳಿದಳು.

ಮರುದಿನ ಆಕೆ ಭೇಟಿ ಮಾಡಿದ್ದು ತಾನು ಖಾಸಗಿಯಾಗಿ ಓದುತ್ತಿದ್ದ ಕಾಲೇಜಿನ ಪ್ರಿನ್ಸಿಪಾಲರನ್ನು. ಈಕೆಯನ್ನು ಕಂಡ ಕೂಡಲೇ ಪ್ರಿನ್ಸಿಪಾಲರು ಆಕೆಯನ್ನು ಕರೆದು ಕುಳ್ಳಿರಿಸಿಕೊಂಡು ಆ ಹುಡುಗನ ಎಲ್ಲ ಪ್ರವರವನ್ನು ಬಿಚ್ಚಿಟ್ಟರು. ಎಲ್ಲವೂ ಸರಿಯಾಗಿದೆ ಆಕೆ ಮುಂದುವರೆಯಬಹುದು ಎಂಬುದನ್ನು ಮನದಟ್ಟು ಮಾಡಿಕೊಂಡಳು. ಎರಡು ದಿನಗಳ ನಂತರ ಮತ್ತೆ ಅದೇ ಸ್ಥಳದಲ್ಲಿ ಭೇಟಿ ಮಾಡಿದ ಅರುಣ್. ಆಕೆಯ ಮುಖ ರಾಗರಂಜಿತವಾದದ್ದನ್ನು ನೋಡಿಯೇ ಅರಿತುಕೊಂಡ. ಅರುಣನ ತಂದೆ ತಾಯಿಯರು ಅರೆ ಮನಸ್ಸಿನಿಂದಲೇ ಈ ಮದುವೆಗೆ ಒಪ್ಪಿಗೆ ಕೊಟ್ಟಿದ್ದರು. ಹೊಸದಾಗಿ ವಿವಾಹವಾದ ದಂಪತಿಗಳ ಬಾಳು ಸಂತಸದ ಕಡಲಾಗಿತ್ತು. ಹಾಗಾಗಿ ಅತ್ತೆಯ ಅಸಹನೆ ಅಷ್ಟೇನೂ ಬಾಧಿಸಲಿಲ್ಲ ಆಕೆಗೆ. ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಜೋಡಿಗಳು ಮಲೇಶಿಯಾಗೆ ಹೋಗಿ ಬಂದರು. ಅಲ್ಲಿಂದ ಬಂದ ಮೇಲೆ ಅರುಣ್  ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಯಿತು… ಮುಂದೆ ಅದು ಕರೋನ ಮಹಾಮಾರಿ ಎಂದು ಪತ್ತೆಯಾಗುವ ಹೊತ್ತಿಗೆ ಅರುಣ್ ಇವರೆಲ್ಲರನ್ನು  ಬಿಟ್ಟು ಹೊರಟು ಹೋಗಿದ್ದ. ‘ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣ’ ಎಂಬಂತೆ ತಮ್ಮ ಮಗ ಸಾಯಲು ಕ್ಷಮಾಳ ಕಾಲ್ಗುಣವೇ ಕಾರಣ ಎಂಬ ಅತ್ತೆ ಮಾವರ ಹೀಯಾಳಿಕೆಯ ಜೊತೆ ಜೊತೆಗೆ ಮೈದುನನ  ಕಣ್ಣುಗಳಲ್ಲಿರುವ ಲಾಲಸೆ ಆಕೆಯನ್ನು ಬೆಚ್ಚಿ ಬೀಳುವಂತೆ ಮಾಡುತ್ತಿತ್ತು. ಗಂಡ ಸತ್ತ ನಂತರ ಮನೆ ಆಕೆಯ ಪಾಲಿಗೆ ನರಕವಾಗಿತ್ತು. ಮುಂದಿನ ಕೆಲವೇ ದಿನಗಳಲ್ಲಿ ಆಕೆಯೂ ಕೂಡ ಕರೋನ ಪೀಡಿತಳಾದಳು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಆಸ್ಪತ್ರೆಯ ವಾಹನ ಬಂದು ನಿಂತಾಗ ಮನೆಯವರಾರೂ ಹೊರ ಬರಲಿಲ್ಲ. ಈಗಾಗಲೇ ಮಾನಸಿಕವಾಗಿ ಸಾಕಷ್ಟು ನೊಂದಿದ್ದ ಆಕೆ ಕೂಡಲೇ ತನ್ನ ಬಟ್ಟೆ ಬರೆಗಳ ಜೊತೆಗೆ ತನ್ನ ಎಲ್ಲಾ ಸರ್ಟಿಫಿಕೇಟ್ಗಳನ್ನು ಕೂಡ ಜೋಡಿಸಿಕೊಂಡಳು. ಆಕೆಯ ತಲೆಯಲ್ಲಿದ್ದು ಒಂದೇ…. ಕರೋನಾದಿಂದ ಸತ್ತರೆ ಮರಳಿ ಬರುವುದಿಲ್ಲ ನಿಜ ಆದರೆ ಬದುಕಿ ಬಂದರೆ … ಎಲ್ಲರಿಂದ ದೂರಾಗಿ ಹೊಸ ಬದುಕನ್ನು ಕಟ್ಟಿಕೊಳ್ಳುವ ತವಕ. ಅಂತೆಯೇ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಸಮಯವನ್ನು ಪೂರೈಸಿದ ಆಕೆ ವೈದ್ಯರ ಸಹಾಯದಿಂದ ದೂರದ ಈ ಊರಿಗೆ ಬಂದು ಸೇರಿದಳು.ದೂರದ ಈ ಹೊಸ ಊರು, ಹೊಸ ಜಾಗದಲ್ಲಿ ಆಕೆ ತನ್ನ ಅಂದಗೆಟ್ಟ ಬದುಕಿಗೆ ವಿದಾಯ ಹೇಳಿ   ಸ್ಥಳೀಯ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇರಿಕೊಂಡಳು. ತನ್ನದೇ ಆದ ಸುರಕ್ಷಿತ ವಲಯವನ್ನು ಸೃಷ್ಟಿಸಿಕೊಂಡು ಬದುಕನ್ನು ನಡೆಸುತ್ತಿದ್ದಾಳೆ. ಬದುಕು ಒಂದು ನಿಲುಗಡೆಗೆ ಬರುತ್ತಿದೆ. ಕೇವಲ ಒಂದೇ ವರ್ಷ ಆಕೆಯೊಂದಿಗೆ ಸಂಸಾರ ಮಾಡಿದರೂ ಅಪಾರ ಪ್ರೀತಿಯ ಹೊನಲನ್ನು ಹರಿಸಿದ ಪತಿಯ ನೆನಪಿನಲ್ಲಿ ಬದುಕನ್ನು ಸಾಗಿಸುತ್ತಿದ್ದಾಳೆ.

ಎಲ್ಲವನ್ನು ಮತ್ತೊಮ್ಮೆ ನೆನೆದ ಆಕೆ ನಿಟ್ಟುಸಿರು ಬಿಟ್ಟು ನಿಧಾನವಾಗಿ ಎದ್ದು ತನ್ನ ಹಿಂದಿನ ಬದುಕನ್ನು ತೊಡೆದಂತೆಯೇ ಸೀರೆ ಮತ್ತು ಕೈಗಳಿಗೆ ಅಂಟಿದ ಉಸುಕನ್ನು ತೊಡೆದು ಮುಂದೆ ಸಾಗಿದಳು.


ವೀಣಾ ಹೇಮಂತ್ ಗೌಡ ಪಾಟೀಲ್ 

2 thoughts on “ಹೊಸ ಬದುಕು ಕಟ್ಟಿಕೊಟ್ಟ ಕೊರೋನಾ, ವೀಣಾ ಹೇಮಂತ್ ಗೌಡ ಪಾಟೀಲ್ ಅವರ ಸಣ್ಣಕಥೆ

Leave a Reply

Back To Top