ಡಾ. ಮೀನಾಕ್ಷಿ ಪಾಟೀಲ್-ಮೃತ್ಯುಂಜಯರು

ಕಾವ್ಯ ಸಂಗಾತಿ

ಡಾ. ಮೀನಾಕ್ಷಿ ಪಾಟೀಲ್

ಮೃತ್ಯುಂಜಯರು

ಅಂತೂ ನಿರಾಳ ಉಸಿರು
ಉಸಿರುಗಟ್ಟುವ ಸುರಂಗದಡಿ
ಭಯ ಆತಂಕ
ಹಿಮಾಲಯವೇ ನಡುಗುವಂತೆ
ಅಡಿಯಲ್ಲೇ ಸಿಲುಕಿದವರ
ಕರುಣಾಜನಕ ಕಥೆ
ಯಮನ ದವಡೆಯಿಂದ
ಪಾರಾಗಿ ಬಂದವರ ಪಾಡು
ಧೈರ್ಯವಂತರು ಇವರು
ಹಿಮಾಲಯದ ಶಿವನಿಗಾಗಿ
ತಪಸ್ಸು ಕುಳಿತವರು
ಮೃತ್ಯುವನ್ನು ಗೆಲ್ಲುವಂತೆ
ಕಾಶಿಯ ವಿಶ್ವನಾಥನಲ್ಲಿ
ಮೊರೆಯಿಟ್ಟು ಬೇಡಿಕೊಂಡವರು
ಒಮ್ಮೆ ನಿರಾಸೆ
ಮತ್ತೊಮ್ಮೆ ಭರವಸೆ
ಸಾವು ಬದುಕಿನ ನಡುವೆ ಹೊಯ್ದಾಟ
ಹದಿನೇಳು ದಿನಗಳ ತಪ
ಕೈಗೂಡಿತು ಕೊನೆಗೆ
ಮೃತ್ಯುವನ್ನು ಜಯಿಸಿದ ಸಂಭ್ರಮ
ಮೃತ್ಯುಂಜಯರು ಇವರು
ಅಷ್ಟು ದಿನಗಳ ಬದುಕಿನಲ್ಲಿ
ಸೂರ್ಯ ಮರೆಯಾಗಿ ಹೋದ
ಬಾಳ ಕತ್ತಲೆಯಲಿ
ದೀವಳಿಗೆ ಬೆಳಕು ನಂದಿ ಹೋಯಿತು
ಕಾಯಕವೇ ಕೈಲಾಸ ಎಂದವರಿಗೆ
ದಾರಿ ತೋರಿಸನೇ ದೇವನು
ಒಬ್ಬ ದೇವನಲ್ಲ
ನೂರಾರು ದೇವರುಗಳು ಪ್ರತ್ಯಕ್ಷ
ಯಂತ್ರದ ತಂತ್ರಗಾರಿಕೆ
ಜನಗಳ ಹಾರೈಕೆ
ದೇವನ ಕರುಣೆ ಎಲ್ಲರಿಗೂ
ಅವನ ಪ್ರೀತಿಗೆ ಪಾತ್ರರಾದವರು
ಕೊನೆಗೂ ದೇವರು ಒಲುಮೆ ಕೈಗೂಡಲು
ದಾರಿ ತೋರಿತು ಬೆಳಕು
ಮೃತ್ಯುವನ್ನು ಗೆದ್ದು ಬಂದವರ ಸಂಭ್ರಮ
ಅಂದೆ ಅವರಿಗೆ ದೀಪಾವಳಿ
ವಿಶ್ವ ಬಾಂಧವರ ಶುಭಾಶಯಗಳು


ಡಾ. ಮೀನಾಕ್ಷಿ ಪಾಟೀಲ್

Leave a Reply

Back To Top