ಭಾರತಿ ಅಶೋಕ್ ಕವಿತೆ-ಕನಕ ನಿನ್ನನರಿಯದೇ

ಕಾವ್ಯ ಸಂಗಾತಿ

ಭಾರತಿ ಅಶೋಕ್

ಕನಕ ನಿನ್ನನರಿಯದೇ

ಮನುಜ ಕುಲಕಿತ್ತ ಬುತ್ತಿಯ
ಬಿಚ್ಚಿ ಉಣ್ಣಲರಿಯದೆ
ಜಾತಿ ಬೀಜ ಬಿತ್ತಿ
ಮತದ ಕಟ್ಟೆ ಕಟ್ಟಿ
ಜಾತಿ,ಮತದ ಬೆಳೆ ತೆಗೆವರ
ಕಂಡು ಕರುಬದಿರು ಕನಕ

ಅರಿವಿನಾಲಯದಿ ನಿಂದು
ಕುಲದ ನೆಲೆಯನರಸುವ
ಪಾಮರನೆತ್ತ ಅರಿಯನು.
ಬಯಲಿಗಾವ ಕುಲ ಕನಕ

ಜ್ಞಾನ ಜ್ವಾಲೆ ಉರಿಯುತಿರಲು
ಅದಮನೊಬ್ಬ ಬೆಳಕಿನ ಕಿಡಿಯ
ಅರಸುವುದ ಕಂಡ್ಯ ಕನಕ

ಕನಕನ ರೊಟ್ಟಿಗೆ ಗೋಪಾಲನ ಬೆಣ್ಣೆ
ರೊಟ್ಟಿ ಬೆಣ್ಣೆಯ ಹದವರಿತು
ಗೆಳೆತನಕೆ ಭಾಷ್ಯ ಬರೆದುದ ಅರಿಯದೆ
ರೊಟ್ಟಿ ಎಸೆದು ಬೆಣ್ಣೆಗೆ ಮಣ್ಣಾಗುವ
ಮನುಜನೇನೆನ್ನುವೆ ಕನಕ


ಭಾರತಿ ಅಶೋಕ್

Leave a Reply

Back To Top