ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ
ಮುಚ್ಚಿದ ಬಾಗಿಲು-ತೆರೆಯದ ಕಿಟಕಿ
ಭಾಗ-4
ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ
ಮುಚ್ಚಿದ ಬಾಗಿಲು ಎಂದಿಗೂ
ತೆರೆಯದಿರಲಿ!
ರಾತ್ರಿ ಮುಚ್ಚಿದ ಬಾಗಿಲನ್ನು ಬೆಳಂಬೆಳಿಗ್ಗೆ ತೆಗೆದು, ಕಸ ಗುಡಿಸಿ ಮನೆಯ ಮುಂದೆ ನೀರು ಚಿಮುಕಿಸಿ, ರಂಗೋಲಿ ಹಾಕುವುದೆಂದರೆ ನನಗೆ ಒಂದು ಬಗೆಯ ಸಂಭ್ರಮ. ಅಂಗಳದಲ್ಲಿ ಮೊಗ್ಗು ಬಿರಿದು ಹೂವಾಗುವ ಚೆಂದ, ಚಿಲಿಪಿಲಿ ಕೂಗುತ್ತ ಹಕ್ಕಿಗಳು ಹಾರಾಡುವ ಸಡಗರ, ಮೂಡಣ ರಂಗಾಗಿಸಿ ಬರುವ ನೇಸರನ ಅಂದ…ಎಲ್ಲವುಗಳ ಮೇಲೆ ಕಿರುನೋಟ ಬೀರುವ, ತಂಗಾಳಿಗೆ ಮೈಮನ ಪುಳಕಿತವಾಗುವ ಕಾಲ ಮುಂಜಾವು. ಈಗ ಅದಕ್ಕೂ ಬಂದಿದೆ ಸಂಚಕಾರ. ಬಿಡುಬೀಸಾಗಿ ಅಂಗಳದಲ್ಲಿ ಕೆಲಸ ಮಾಡಲೂ ಭಯ. ಹೊಟ್ಟೆ ಪಾಡಿಗೆ ತರಕಾರಿ ಮಾರಲು ಬರುವವರತ್ತಲೂ ಸಂಶಯ.. ಅಯ್ಯೋ ಬದುಕೇ.. ಮತ್ತದೇ ಮುಚ್ಚಿದ ಬಾಗಿಲ ಹಿಂದೆ ಸೇರಿಕೊಂಡೆ.
‘ಅಮ್ಮಾ ಇವತ್ತು ದೋಸೆಗೆ ಪುದಿನಾ ಚಟ್ನಿ ಮಾಡು, ಶೇಂಗಾ ಚಟ್ನಿಪುಡಿ ಮಾಡು’ ಎಂದು ಒಬ್ಬೊಬ್ಬ ಮಗ ಒಂದೊಂದು ಬೇಡಿಕೆ ಇಟ್ಟರು. ಕೆಲಸ ಮಾಡುವಾಗಲೂ ಆತಂಕ. ಈಗ ಅವರು ಇಟ್ಟ ಬೇಡಿಕೆ ಪೂರೈಸಲು ಬೇಕಾದದ್ದೆಲ್ಲ ಸಿಗುತ್ತದೆ ಮುಂದೇನು ಕತೆಯೋ..ಅಯ್ಯೋ ಮುಂದಿನ ದಿನಗಳ ಭಯದಲ್ಲಿ ನಾನು ಇಂದಿನ ಖುಷಿಯನ್ನೇಕೆ ಕಳೆದುಕೊಳ್ಳುತ್ತಿದ್ದೇನೆ? ಈ ಕ್ಷಣ, ಈ ದಿನವನ್ನು ಆನಂದವಾಗಿ ಕಳೆಯುವ ಅವಕಾಶ ಇದೆಯಲ್ಲ ಅದನ್ನುಉಪಯೋಗಿಸಿಕೊಳ್ಳೋಣ ಎಂದು ನೆನಪಾದ ಹಾಡು ಗುನುಗುತ್ತ ಆನಂದದಿಂದ ಮನೆಗೆಲಸದಲ್ಲಿ ತೊಡಗಿದೆ.
ತಿಂಡಿ ತಿಂದು ಮುಗಿದೊಡನೆ ಪೇಪರ್ ಪುಟ ತಿರುಗಿಸಿದರೆ ಮದ್ಯಪಾನ ವ್ಯಸನಿಯೊಬ್ಬ ಕುಡಿಯಲು ಹೆಂಡ ಸಿಗದೇ ಇರುವುದರಿಂದ ನೇಣಿಗೆ ಶರಣಾದ ಎನ್ನುವ ಸುದ್ದಿ ಕಂಡಿತು.
ಹಳ್ಳಿಯಲ್ಲಿ ವಾಸಿಸುವ ಅಕ್ಕನಿಗೆ ಪೋನ ಮಾಡಿದಾಗ ತಂಗಿ ಈಗ ನೋಡು ನಮ್ಮ ಮನೆಗೆ ಬರುವ ಕೆಲಸಕ್ಕೆ ಬರುವ ಹೆಂಗಸರ ಖುಷಿ ನೋಡಲೆರಡು ಕಣ್ಣು ಸಾಲದು.. ಹೆಂಡದಂಗಡಿ ಬಾಗಿಲಾ ಬಂದ ಮಾಡಿರಲ್ರಾ. ಓಣಿ ಒಳಗೆ ಜಗಳ ಇಲ್ಲಾ. ಗಂಡಸರು ದುಡಿದ ದುಡ್ಡು ಮನೆ ತಂಕಾ ಬರ್ತದೆ. ಕುಡಿದು ಮಯ್ಯಿ ನುಗ್ಗಾಗು ಹಾಂಗೆ ಬಡಿಸ್ಗಳದು ತಪ್ಪೇತೆ. . ಕೊರೋನಾ ಬಂದಿದ್ದು ಒಂದ ನಮೂನಿ ಚೊಲೋನೆ ಮಾಡ್ತಾ ಐತ್ರಾ’ ಎನ್ನುತ್ತಾ ಕಿಲಕಿಲನಗುವ ಅವರ ಮಾತು ಕೇಳಲು ಮೋಜು. ಮದ್ಯಪಾನ ಮೈಮುರಿದು ದುಡಿಯುವ ವರ್ಗಕ್ಕೆ ಅಲ್ಪ ನೆಮ್ಮದಿ ತರುತ್ತದೆ ಎನ್ನುವದು ಭ್ರಮೆಯಷ್ಟೇ. ಮತ್ತಷ್ಟು ಜನ ಪ್ರೆಸ್ಟಿಜಿಗಾಗಿ ಕುಡಿಯುವವರು. ಒಟ್ಟಾರೆ ಕುಡುಕರು ಎಬ್ಬಿಸುವ ಸಾಮಾಜಿಕ ತಲ್ಲಣಗಳನ್ನು ಲೆಕ್ಕ ಹಾಕಿದರೆ
ಅದರಿಂದ ಬರುವ ಆದಾಯ
ಸರಕಾರಕ್ಕೆ ಲಾಭ ಎನ್ನುವುದೂ
ಸುಳ್ಳೆಂಬುದು ಸಾಬೀತಾಗುತ್ತದೆ.
ಎಷ್ಟೋ ಜನರ ಬಾಳನ್ನು ಹೈರಾಣಾಗಿಸುವ ದುಶ್ಚಟಗಳಿಗೆ ಖಾಯಂ ಆಗಿ ಪೂರ್ಣ ವಿರಾಮ ಇಡುವತ್ತ ಸರಕಾರ ದಿಟ್ಟ ಹೆಜ್ಜೆ ಇಟ್ಟರೆ ಅದೆಷ್ಟು ಜೀವಗಳು ಸಂತಸ ಪಡಬಹುದು. ಅದೆಷ್ಟು ಕುಟುಂಬಗಳು ನೆಮ್ಮದಿಯಿಂದ ಬದುಕಬಹುದು ಅಲ್ಲವೇ?
******
ಮುಂದುವರಿಯುವುದು…
ಮಾಲತಿ ಹೆಗಡೆ