ಕಾವ್ಯ ಸಂಗಾತಿ
ಬದುಕಲು ಕಲಿತಿರುವೆ
ಡಾ. ಪುಷ್ಪಾ ಶಲವಡಿಮಠ
ಕಷ್ಟ ನೀಡಿದ ದಿನಗಳೆಂದು
ದೂರಲಾರೆ ನಿಮ್ಮನ್ನು
ಕಷ್ಟಗಳ ಸಹಿಸುವ ಶಕ್ತಿ
ನೀಡಿದವರು ನೀವುಗಳು.
ನಿಂದಿಸಿ ನೋಯಿಸಿದವರೆಂದು
ಜರಿದು ದೂರ ಸರಿಸಲಾರೆ ನಿಮ್ಮನು
ನೋವುಗಳ ನುಂಗಿ ಜಯಿಸಿ ಬರಲು
ಕಾರಣರಾದವರು ನೀವುಗಳು
ಬೆನ್ನ ಹಿಂದೆ ಕತ್ತಿ ಮಸೆದವರೆಂದು
ಮುನಿಸಿಕೊಳ್ಳಲಾರೆ ನಾನು
ಮೈ ಮರೆಯದಂತೆ ಜಾಗ್ರತೆಯಾಗಿರಲು
ಕಲಿಸಿದ ಮಹಾಗುರುಗಳು ನೀವುಗಳು
ಹೆಜ್ಜೆಹೆಜ್ಜೆಗೆ ಮುಳ್ಳು ಚೆಲ್ಲಿದವರೆಂದು
ನಿಮ್ಮನಗಲಿ ಇರಲಾರೇನು ನಾನು
ಮುಳ್ಳು ತುಳಿದರು ಮುಗುಳ್ನಗಲು
ಕಲಿಸಿದವರು ನೀವುಗಳು
ಅಪವಾದದ ಕಟಕಟೆಯಲಿ ನಿಲ್ಲಿಸಿದಿರೆಂದು
ಕೊರಗಲಾರೆ ನಾನು
ಒಳಗಿನ ಸತ್ಯವ ಬಹಿರಂಗಗೊಳಿಸಿ
ಪುಟಕ್ಕಿಟ್ಟ ಚಿನ್ನವಾಗಿಸಿದವರು ನೀವುಗಳು
ಬೈದವರೇ ಬಂಧುಗಳೆಂದು ಹೊಡೆದವರೇ
ಪೊರೆದವರೆಂದು ಅಣ್ಣ ಬಸವಣ್ಣನಿಂದ ಕಲಿತಿರುವೆ
ಪ್ರಭು ಯೇಸುವಿನ ಕ್ಷಮೆಯ
ಬೆಳಕಿನಲ್ಲಿ ವಿಶ್ರಮಿಸುತಿರುವೆ
ಮಮತೆಯಲಿ ಬುದ್ಧ ನಗುತಿರುವಾಗ
ಅಳುವ ಮರೆತಿರುವೆ
ಮನಸು ಕನಸುಗಳಿಲ್ಲಿ
ಜಾಜಿ ಮಲ್ಲಿಗೆಯಾಗಿರಲು
ಮನದ ಮಂಕು ಕರಗಿದೆ
ಜಗದ ಪಾಠಶಾಲೆಯಲಿ
ಅಲ್ಲಮನ ಬಯಲು ಕಂಡಿದೆ.
ಪೆಟ್ಟುಗಳ ನೀಡಿ ಮೂರ್ತಿಯಾಗಿಸಿದ
ಕೈಗಳ ಮುದ್ದಿಸುತ್ತಿರುವೆ
ಒಲವ ತೋಟದಲಿ
ಶಾಂತಿ ಮಂತ್ರವ ಪಠಿಸುತಿರುವೆ
ಬದುಕಲು ಕಲಿತಿರುವೆ.
ನಿಜಕ್ಕೂ ಮನಸ್ಸು ಸಂತೃಪ್ತ ವಾತು
ಧನ್ಯವಾದಗಳು