ಹೊತ್ತಾರೆ

Image result for photos of indian village boys playing chinni dandu game

ಅಮೇರಿಕಾದಿಂದ ಅಶ್ವಥ್ ಬರೆಯುತ್ತಾರೆ

ಅಶ್ವಥ್

ಅಕ್ಕಯ್ಯನೆಂಬ ಯಶೋಧೆ

ನಾನು ಆಗತಾನೇ ಬೈಕಿನಿಂದಿಳಿದು ಹೆಲ್ಮೆಟ್ ತೆಗೆಯುತ್ತಿದ್ದೆ. ಹೊಲದ ಕಡೆ ಹೊರಟಿದ್ದ ರಂಗಪ್ಪಣ್ಣ ನನ್ನನ್ನು ನೋಡಿ ತಕ್ಷಣ ಗುರುತಿಸಲಾಗದೇ, ಹಾಗೆಯೇ ಸ್ವಲ್ಪ ಹೊತ್ತು ನಿಂತರು. “ ಓಹೋಹೋಹೋಹೋ… ಏನ್ ಅಳಿಮಯ್ಯಾ, ಅಪ್ರೂಪದಂಗೆ….. ಎಷ್ಟೊಂದ್ ವರ್ಷ ಆಗಿತ್ತಲ್ಲ ನಿಮ್ಮನ್ನ ನೋಡಿ, ಹಾಂ?” ಅಂತ ತನ್ನದೇ ರಾಗದಲ್ಲಿ ರಂಗಪ್ಪಣ್ಣ ಮಾತಾಡಿಸಿ ಹೆಗಲಮೇಲೆ ಹೊತ್ತಿದ್ದ ನೇಗಿಲನ್ನೂ ಇಳಿಸದಂತೆ ಹಾಗೆಯೇ ನೋಡುತ್ತಾ ನಿಂತರು.

“ಏನ್ ಮಾಡೋದು ರಂಗಪ್ಪಣ್ಣ? ಹೊಟ್ಟೆಪಾಡು, ಊರುಬಿಟ್ಟು ಊರಿಗೆ ಹೋದ ಮೇಲೆ ಅಪರೂಪವೇ ಆಗಬೇಕಲ್ಲ” ಎನ್ನುತ್ತಾ, ನಾನು ಅವರಿದ್ದ ಕಡೆ ನಡೆದು, ಊರಲ್ಲಿದ್ದಾಗ ಮಾತನಾಡುವ ಧಾಟಿಯಲ್ಲಿಯೇ ಸ್ವಲ್ಪ ದೈನ್ಯತೆಯಿಂದ ಹೇಳಿದೆ. ಊರಲ್ಲಿರುವಾಗ ನಾನು ಚಡ್ಡಿ ಹಾಕಿ ಗೋಲಿ, ಬುಗುರಿಗಳನ್ನು ಆಡುತ್ತಿದ್ದ ವಯಸ್ಸು. ಆಗೆಲ್ಲ ರಂಗಪ್ಪಣ್ಣನಂತಹವರು ನಮ್ಮನ್ನು ಚಿಕ್ಕವರಾಗಿ ನೋಡಿ ಮಾತನಾಡಿಸಿದ್ದವರು, ಇದ್ದಕ್ಕಿದ್ದ ಹಾಗೆಯೇ ಗೌರವದಿಂದ ನೀವು, ತಾವು, ಹೇಗಿದ್ದೀರಾ ಅಂದರೆ ಅದು ಅಷ್ಟಾಗಿ ಸ್ವಾಭಾವಿಕವೆನಿಸುತ್ತಿರಲಿಲ್ಲ. ಯಾವ ಕಾರಣಕ್ಕಾಗಿ ಗುಣವಿಶೇಷಣವನ್ನು ಸೇರಿಸಿದಂತೆ ಗೌರವಿಸುತ್ತಿದ್ದಾರಿವರು ಅನ್ನಿಸಿ ಇರಿಸುಮುರಿಸೆನಿಸಿತು.

“ಏನೋ, ಚೆನ್ನಾಗಿದಿಯೇನಪ್ಪಾ ಒಟ್ನಲ್ಲಿ? ಯಾವ್ದೋ ದೂರುದ್ ದೇಶಕ್ ಹೋದೆ ಅಂತ ಕೇಳಿದ್ದೆ”

“ಹುಂ, ನಾನ್ ಚೆನ್ನಾಗಿದ್ದೀನಿ ನೀವೆಲ್ಲ ಚೆನ್ನಾಗಿದ್ದೀರಲ್ಲ? ಬರ್ತಿದ್ದ ಹಾಗೇ ಊರು ಬದಲಾಗಿರುವುದು ಗೊತ್ತಾಗುತ್ತೆ. ಅಲ್ಲಿ ಹಲಸಿನ ಮರ ಇಲ್ಲ, ಇಲ್ಲಿ ಕರಿಬೇವಿನ ಗಿಡ ಇಲ್ಲ, ಇನ್ನು ಆ ಮೂರು ಮನೆಗಳು ಹೊಸದಾಗಿ ಕಟ್ಟಿರೋದು” ಎನ್ನುತ್ತಾ ಸುತ್ತ ಕೈಯಾಡಿಸಿದೆ.

ಅಷ್ಟರಲ್ಲಿ ಪಕ್ಕದ ಮನೆಯ ಜಗುಲಿ ಮೇಲೆ ಕುಳಿತು ಮಾತನಾಡುತ್ತಿದ್ದ ಮೂರ್ನಾಲ್ಕು ಜನ, ನಮಗೆ ಮರೆಯಾಗಿದ್ದವರಲ್ಲಿ ಒಬ್ಬರು ನಮ್ಮ ಕಡೆ ಇಣುಕಿ… “ಯಾವಾಗ್ ಬಂದ್ಯಪ್ಪಾ, ಬಾರೋ ಈ ಕಡೀಕೆ” ಅಂದರು.

“ಈಗತಾನೇ ಬರ್ತಿದ್ದೀನಿ. ರಂಗಪ್ಪಣ್ಣ ನೋಡಿ ನಿಂತುಕೊಂಡ್ರು. ಮಾತಾಡಿಸ್ತಿದ್ದೆ”
ಅಷ್ಟರಲ್ಲಿ ರಂಗಪ್ಪಣ್ಣ, “ಸರಿ, ಇರ್ತಿಯಾ ಒಂದೆರಡು ದಿನಾ ಇಲ್ಲ ಈಗ್ಲೇ ಬಂಡಿ ತೆಗಿತೀಯಾ? ಹೊಲ್ತಾಕ್ ಹೋಗಬೇಕು. ಕೆಲ್ಸ ಮುಗಿಸಿ ಬತ್ತೀನಿ. ಸಿಕ್ತಿಯಲ್ಲಾ? ಬಾ ಮತ್ತೆ ನಮ್ಮನೆ ಕಡೀಕೆ” ಅಂದರು.

“ ಇಲ್ಲ, ಹೀಗೇ ಎಲ್ಲರನ್ನೂ ನೋಡಿ ಹೊರಟುಬಿಡ್ತೀನಿ ರಂಗಪ್ಪಣ್ಣ. ಕೆಲಸ ಜಾಸ್ತಿಯಿದೆ ಈ ಸಾರ್ತಿ. ಮತ್ತೆ ಮುಂದಿನ ವರ್ಷ ಬಿಡುವು ಮಾಡ್ಕೊಂಡು ಬಂದಾಗ ಒಂದೆರಡು ದಿನ ಇರೋ ಪ್ಲಾನ್ ಮಾಡ್ತೀನಂತೆ. ನೀವು ಹೊರಡಿ, ನೇಗಿಲು ಹೊತ್ಕೊಂಡು ಎಷ್ಟೊತ್ತು ನಿಂತ್ಕೊಂಡಿರ್ತಿರಾ” ಅಂದೆ.

“ ಸರಿ ಬತ್ತಿನಪ್ಪಾ, ಹಿಂಗ್ ಬಂದ್ ಹಂಗ್ ಹೋಯ್ತೀಯಾನ್ನು? ಇನ್ನು ಮಾತೆತ್ತಿದ್ರೆ ಮುಂದಿನವರ್ಷ ಅಂತೀಯ. ಹೆಂಗೋ ಚೆನ್ನಾಗಿರು. ಬರ್ಲಾ?”
“ಆಗಲಿ, ಸಿಗ್ತೀನಿ ಮತ್ತೆ”
ಅಷ್ಟರಲ್ಲಿ ಜಗುಲಿಯ ಮೇಲಿದ್ದವರೆಲ್ಲಾ ಒಮ್ಮೆ ಇಣುಕಿಯಾಯ್ತು. ಇನ್ನು ನಾನು ಅಲ್ಲಿಗೇ ಹೋಗಿ
“ಚೆನ್ನಾಗಿದ್ದೀರಾ ಎಲ್ಲರೂ?” ಅಂದೆ. “ನಾವೆಲ್ಲ ಇದ್ಹಂಗೇ ಇದೀವಿ, ನಮ್ದೇನೂ ಹೊಸಾದಿಲ್ಲ. ಅದೇ ಹಳೇದು ಊರಲ್ಲಿ, ನಿನ್ ಸಮಾಚಾರ ಹೇಳಪ್ಪಾ” ಅಂದವರೇ, ಒಬ್ಬೊಬ್ಬರೂ ನನ್ನನ್ನು ವಿಚಾರಿಸಿಕೊಂಡರು, ಎಲ್ಲಿದ್ದೀನಿ, ಏನು ಕೆಲಸ, ಎಷ್ಟು ಸಂಬಳ, ದೂರದೇಶದ ಸಂಪಾದನೆ ನಮ್ಮ ದೇಶದ ಎಷ್ಟು ರೂಪಾಯಿಗೆ ಸಮ.. ಹೀಗೆ ತಮ್ಮ ಕುತೂಹಲ ಇರುವುದನ್ನೆಲ್ಲಾ ಕೇಳುತ್ತಾ ಮಾತು ಮುಂದುವರಿಸಿದರು. ಅಷ್ಟರಲ್ಲಿ ಫೋನ್ ರಿಂಗಾಯಿತು.

ಯಾವುದೋ ಗೊತ್ತಿಲ್ಲದ ನಾಲ್ಕಂಕಿಯ ನಂಬರು. ಫೋನ್ ರಿಸೀವ್ ಮಾಡದೇ ಹಾಗೆಯೇ ಕಟ್ ಮಾಡಿದೆ.

“ಅಲ್ಲೆಲ್ಲೇ!… ನೋಡ್ರಲೇ, ರಾಜಣ್ಣನ ಇಟ್ಕಂಡವ್ನೆ ಫೋನಲ್ಲಿ… ಇನ್ನೂ ನೆನಪೈತಾ ಇಲ್ಲಿಂದೆಲ್ಲಾ? ಹಳೇ ಪಿಚ್ಚರೆಲ್ಲ ನೋಡ್ತೀಯಾ ಅನ್ನು” ಅಂದರು.

“ನಾನೂ ನಿಮ್ ತರಾನೇ ಕನ್ನಡದವನೇ ಅಲ್ವಾ? ನಿಮ್ಮ ಜೊತೆಯಲ್ಲೇ ಭಾನುವಾರ ನಾಲಕ್ ಗಂಟೆಗೆ ಬರೋ ಬ್ಲಾಕ್ ಅಂಡ್ ವೈಟ್ ಸಿನಿಮಾ, ಮತ್ತೆ ವಿಸಿಪಿ ತಂದು ನೋಡ್ತಿದ್ದ ಸಿನಿಮಾ.. ಇವೆಲ್ಲ ಹೆಂಗ್ ಮರೆಯಕ್ಕಾಗುತ್ತೆ? ಆ ಮಟ್ಟಿಗೆ ಮರೆವು ಬಂದ್ರೆ ನನ್ನನ್ನೇ ನಾನು ಮರೆಯುವಂಥಾ ಯಾವುದೋ ಖಾಯಿಲೆ ಬಂದಿದೆ ಅಂತಲೇ ಅರ್ಥ” ಅಂದೆ.

ಮಾತು ಹಾಗೆಯೇ ಇನ್ನೂ ಸುಮಾರು ಹತ್ತು ಹದಿನೈದು ನಿಮಿಷ ಮುಂದುವರಿಯಿತು. ಅಲ್ಲಿಯವರೆಗೂ ಜಗುಲಿಯ ಮೇಲೆ ಕೂತಿದ್ದವರ ಜೊತೆ ಮಾತನಾಡುತ್ತಾ ಒಂದೇ ಕಡೆ ಇದ್ದವನನ್ನು ನಿಂಗಪ್ಪಮಾವನ ಮನೆ ಅತ್ತೆ ನಾನು ಬಂದು ಮಾತನಾಡುತ್ತಿದ್ದು ನೋಡಿದವರೇ ಟೀ ಮಾಡಿ ತಂದು, “ಚೆನ್ನಾಗಿದಿಯೇನಪ್ಪಾ? ನಾವೆಲ್ಲಾ ಜ್ಞಾಪಕದಲ್ಲಿದ್ದೀವಾ” ಅನ್ನುತ್ತಾ ಟೀ ಮುಂದೆ ಹಿಡಿದರು. “ನಾನು ಟೀ ಕುಡಿಯಲ್ಲ… ಇಷ್ಟೊತ್ತಲ್ಲಿ ಯಾಕ್ ಮಾಡಾಕ್ ಹೋದ್ರಿ ಅತ್ತೆ, ಎಲ್ಲಿ ಒಂಚೂರ್ ಕೊಡಿ” ಅಂತ ಒಂದು ಗ್ಲಾಸ್ ನಿಂದ ಇನ್ನೊಂದಕ್ಕೆ ಅರ್ಧದಷ್ಟು ಸುರಿದು ಸ್ವಲ್ಪವೇ ಹಿಡಿದು ನಿಂತೆ. ಹಾಗೆ ತಿರುಗುತ್ತಲೇ ಜಗುಲಿಯ ತುದಿಯಲ್ಲಿ ಒಂದು ಮುಖ ನನ್ನನ್ನೇ ದಿಟ್ಟಿಸುತ್ತಾ ನಿಂತಿದೆ.

“ಅಕ್ಕಯ್ಯಾ!!! ನೀನ್ ಯಾವಾಗಿಂದ ನಿಂತಿದ್ದಿಯಾ ಇಲ್ಲಿ “ ಅನ್ನುತ್ತಲೇ, ಸರಸರನೆ ಟೀ ಹೀರಿ ಗ್ಲಾಸ್ ಹಾಗೆಯೇ ಇರಿಸಿ ಬರ್ತೀನಿ ಮತ್ತೆ ಅಂದವನೇ, ಅಕ್ಕಯ್ಯನ ಕಡೆ ದೌಡಾಯಿಸಿದೆ.

“ನೋಡ್ತಾನೆ ಇದಿನಿ, ಈಗ ತಿರುಗ್ತಾನಾ, ಈಗ ತಿರುಗ್ತಾನಾ ಅಂತ ಆಗ್ಲಿಂದಾ… ಮರೆತೇ ಹೋದಂಗಾಗಿ ಮನೆ ಕಡೆ ಬರದೇ ಹೋದರೆ ಅಂತ ಕಾಯ್ತಾ ಇದಿನಿ ಕಾಣಪ್ಪಾ… ದೊಡ್ಡೋವರಾಗಿದ್ದೀರಾ ಈಗ, ನಾವೆಲ್ಲಾ ಕಾಣುಸ್ತೀವಾ ನಿಮ್ ಕಣ್ಣಿಗೆ?” ಅನ್ನುವ ತನ್ನದೇ ಸ್ವಂತಿಕೆಯ ಆಕ್ರಮಣಕಾರಿ ಚುಚ್ಚುಮಾತು ಬಿಸಾಕಿದರು ಅಕ್ಕಯ್ಯ.

ಅಕ್ಕಯ್ಯನೆಂದರೆ ನನ್ನ ತಾಯಿಗಿಂತಲೂ ಹಿರಿಯ ಆದರೆ ನನ್ನ ಅಜ್ಜಿಗಿಂತ ಕಿರಿಯ ಜೀವ. ಬಂಡೆಕೊಪ್ಪಲು ಅವರ ತವರಾದ್ದರಿಂದ ಕೊಪ್ಪಲು ಅಕ್ಕಯ್ಯ ಅಂತಲೇ ಕರೆಯುತ್ತಿದ್ದೆವು. ಅಕ್ಕಯ್ಯನೆಂದರೆ ನನ್ನ ಓರಗೆಯಿಂದ ಶುರುವಾಗಿ ನನಗಿಂತಲೂ ಹದಿನೈದು ವರ್ಷ ಚಿಕ್ಕ ವಯಸ್ಸಿನ ನನ್ನ ಮಾವನ ಮಕ್ಕಳೆಲ್ಲರಿಗೂ ಅವರು ಅಕ್ಕಯ್ಯನೇ… ನಾನು ಚಿಕ್ಕ ಮಗುವಾಗಿದ್ದಾಗಿನ ನನ್ನ ಜೀವನದ ಚಿತ್ರವನ್ನು ಅಕ್ಕಯ್ಯನಷ್ಟು ಸವಿಸ್ತಾರವಾಗಿ ಕ್ಷಣಕ್ಷಣವನ್ನೂ ಎಳೆಯಾಗಿ ಇನ್ಯಾರೂ ಹೇಳಿಲ್ಲ, ಹೇಳಲಾರರೂ ಕೂಡ. ನಾವು ಬೆಳೆಯುತ್ತಿದ್ದ ವಯಸ್ಸಿನಲ್ಲಿ ಅಮ್ಮ ಅಜ್ಜಿಯರ ಜೊತೆ ಇದ್ದಷ್ಟೇ ಹೊತ್ತು ಅಕ್ಕಯ್ಯನ ಜೊತೆಯೂ ಇರುತ್ತಿದ್ದೆವು.

ಅಕ್ಕಯ್ಯನಿಗೆ ಸ್ವಂತ ಮನೆ ಅಂತ ಇದ್ದರೂ, ಹೆಚ್ಚಾಗಿ ನಮ್ಮ ಮನೆಯಲ್ಲಿಯೇ ಇರುತ್ತಿದ್ದರು. ಕೆಲಸಗಳಲ್ಲೂ ನಮ್ಮ ಮನೆಯವರ ಹಾಗೆಯೇ ಎಲ್ಲದಕ್ಕೂ ಜೊತೆಯಾಗಿದ್ದವರು. ಮದುವೆಯಾದ ಒಂದು ವರ್ಷದೊಳಗೇ ಅವರ ಪತಿ ತೀರಿಕೊಂಡರಂತೆ. ಆ ಕೊರಗಿನಲ್ಲೇ ಇದ್ದ ಗರ್ಭಿಣಿ ಅಕ್ಕಯ್ಯನಿಗೆ ಹುಟ್ಟಬೇಕಾದ ಮಗುವೂ ಜೀವವಿಲ್ಲದೇ ಹುಟ್ಟಿತ್ತಂತೆ. ವಿಧಿಯ ಆ ಎರಡು ದೊಡ್ಡ ಪೆಟ್ಟುಗಳು, ಆಕೆಯ ಏಕತಾನತೆಯ ನೋವು ಮರೆಯುವುದಕ್ಕಾಗಿಯೋ ಏನೋ, ನಮ್ಮೆಲ್ಲರನ್ನೂ ತನ್ನ ಮಕ್ಕಳಂತೆಯೇ ಪ್ರೀತಿಯಿಂದ ನೋಡುತ್ತಿದ್ದರು ಅಕ್ಕಯ್ಯ. ಹಿರಿಯ ವಯಸ್ಸಿನವರಾದರೂ, ಸೋದರಮಾವಂದಿರು, ಅಮ್ಮ ಅಕ್ಕ ಎಲ್ಲ ಕರೆಯುವ ಹಾಗೆಯೇ ಕೊಪ್ಪಲು “ಅಕ್ಕಯ್ಯ” ಎನ್ನುವ ಹೆಸರು ನಮಗೂ ರೂಢಿಯಾಗಿತ್ತು.

ಅಂಥಾ ಅಕ್ಕಯ್ಯ ಇದ್ದಕ್ಕಿದ್ದ ಹಾಗೆಯೇ ನನ್ನನ್ನು ನೋಡಿ “ಎಲಾ ಇವನಾ ನನ್ನನ್ನು ಹುಡುಕಿಕೊಂಡು ಓಡಿ ಬರಬೇಕಾದವನು, ಜಗುಲಿ ಮೇಲೆ ಸಿಕ್ಕವರ ಜೊತೆ ಮಾತಾಡುತ್ತಾ ಕೂತುಕೊಂಡಿದಾನಲ್ಲ” ಅನ್ನುವ ಕೋಪವನ್ನು ಮುಖದಲ್ಲಿ ಆಗಲೇ ಧರಿಸಿಯಾಗಿತ್ತು.

“ಅಯ್ಯೋ, ಈಗತಾನೇ ಬಂದಿದಿನಲ್ಲ ಅಕ್ಕಯ್ಯ, ಊರಿಗೆ ಬಂದು ನಿನ್ನನ್ನು ವಿಚಾರಿಸದೇ ಹೋಗೋಕಾಗುತ್ತಾ, ಅದೇನ್ ತಮಾಷೆನಾ?” ಅಂದವನೇ ಅಕ್ಕಯ್ಯನಿಗಿಂತ ಮೊದಲೇ ದಾಪುಗಾಲಿಡುತ್ತಾ ಅಕ್ಕಯ್ಯನ ಮನೆಯ ಕಡೆ ಹೊರಟೆ.
ಅಕ್ಕಯ್ಯನ ಮನೆ ಬಾಗಿಲು ಮುಂದೆ ಬಂದು ಹಾಗೆಯೇ ನಿಂತೆ…. ಹಳೆಯ ಚಿತ್ರಗಳೆಲ್ಲ ಒಮ್ಮೆಲೇ ತಲೆಯಲ್ಲಿ ಮಿಂಚಿದಂತಾಗಿ ಮುಗುಳ್ನಗೆಯನ್ನಷ್ಟೇ ಮುಖದ ಮೇಲಿರಿಸಿಕೊಂಡು ಅಕ್ಕಯ್ಯನನ್ನೂ ನೋಡುತ್ತಾ ಹಾಗೆಯೇ ನಿಂತೆ…
ನಗುವಾಗಲೀ ಅಳುವಾಗಲೀ ಅಕ್ಕಯ್ಯನ ಬಳಿ ಅದನ್ನು ಬಚ್ಚಿಡುವಷ್ಟು ನಾಟಕವನ್ನು ಅಕ್ಕಯ್ಯನ ಮುಂದೆಯೇ ಎಂದೂ ನಾನು ಮಾಡಲಾಗುವುದಿಲ್ಲ. ಯಾಕೆ ಅಂದರೆ ಅಕ್ಕಯ್ಯನೇ ಹೇಳುವ ಹಾಗೆ ಗೇಣುದ್ದ ಇದ್ದವನಾಗಿನಿಂದ ಹೈಸ್ಕೂಲು ತಲುಪುವ ತನಕ ಅವರ ಕಣ್ಣೆದುರಲ್ಲೇ ಬೆಳೆದಿದ್ದ ನನಗೆ ವಯಸ್ಸು ಎಷ್ಟೇ ಆದರೂ ಅಕ್ಕಯ್ಯನ ಕಣ್ಣುತಪ್ಪಿಸುವಂತಹ ನಟನೆ ನನ್ನ ಅನುಭವಕ್ಕೆ ನಿಲುಕಲಾಗದ್ದು. ನಿಂತಿದ್ದವನನ್ನೇ ಮತ್ತೆ ದಿಟ್ಟಿಸಿ, “ನೋಡು, ನೋಡು, ಊದಪ್ಪಾ… ಇಲ್ಲೇ ಮಂಡಿಹಾಕಿ ತೆವುಳ್ತಾ ಇದ್ದೆ, ಇಲ್ಲೇ ಕೂತ್ಕಂಡು ಚೌಕಾಬಾರಾ ಆಡಿದ್ದೆ, ಬೆಳೆದಿದ್ದಿಯಾ ಅಂತ ಈಗ ನಗಾಡ್ತೀಯೇನಾ ಊದಪ್ಪಾ?”
“ಅದಲ್ಲ ಅಕ್ಕಯ್ಯ ಅಂತ ತಾಳಲಾರದೇ ಮುಗುಳ್ನಗೆಯನ್ನು ಜೋರು ನಗೆಯಾಗಿಯೇ ಪರಿವರ್ತಿಸಿ, ನಾನು ಎಷ್ಟು ಬೆಳೆದಿದ್ದೀನಿ ಅಂತ ನನಗೇ ಗೊತ್ತಿರಲಿಲ್ಲವಲ್ಲಾ… ನಿನ್ನ ಮನೆಯ ಬಾಗಿಲು ಮುಂದೆ ನಿಂತಾಗಲೇ ಅದರ ವ್ಯತ್ಯಾಸ ಕಾಣ್ತಾ ಇರೋದು. ಅದಕ್ಕೇ ಹಾಗೆ ನಕ್ಕೆ” ಅಂದೆ.

“ಹೂಂ ಕನಪ್ಪಾ, ಗಳಾ ಬೆಳ್ಕಂಡಂಗೆ ಬೆಳ್ಕಂಡಿದಿಯಾ. ನನ್ ಬಾಗ್ಲು ನಿನ್ಹಂಗೇ ಬೆಳೆಯಕ್ಕಿಲ್ಲವಲ್ಲಾ, ಹುಶಾರಾಗಿ ನೋಡ್ಕಂಡ್ ಬಾರೋ ಮಾರಾಯ, ಏಟ್ ಗೀಟ್ ಮಾಡ್ಕಂಡು ಮತ್ತೆ ನನಗೆ ಯೋಚ್ನೆ ಹತ್ತಿಸ್ಬ್ಯಾಡ” ಅಂದರು.

ಮನೆ ಮುಂದೆ ನಿಂತವನೇ ಹಾಗೆಯೇ ಒಂದು ನಿಮಿಷ ಸುತ್ತ ಗಮನಿಸುತ್ತಾ ನಿಂತೆ… ಬಾಗದೇ ಇದ್ದರೆ ಮೇಲಿನ ಅರ್ಧ ಬಾಗಿಲು ಕಾಣುತ್ತಿರಲೇ ಇಲ್ಲ. ಮನೆಯ ಮಾಳಿಗೆಯ ತುದಿ ನನಗೆ ಕಣ್ಣಿನ ಎತ್ತರಕ್ಕೆ ಇದೆ. ಮನೆಯಲ್ಲಿ ಏನೂ ಬದಲಾವಣೆಯಾಗಿಲ್ಲ… ಇದ್ದ ಹಾಗೆಯೇ ಇದೆ.. ಅದೇ ಹೆಂಚು. ಅದೇ ಮಾಳಿಗೆ. ನೆಲಕ್ಕೆ ಊತುಹೋಗಿರುವುದೇನೋ ಎಂದು ಅನುಮಾನಿಸುವಷ್ಟು ಚಿಕ್ಕದೆನಿಸುತ್ತಿತ್ತು.

“ಎಷ್ಟೊತ್ತ್ ನೋಡಿದ್ರೂ ಅಷ್ಟೇ ಬಾರಪ್ಪಾ… ನೀನ್ ಬಂದಿದಿಯಾ ಅಂತ ಏನ್ ಬೆಳೆಯಾದಿಲ್ಲ ಮನೆ” ಅಂದಿದ್ದೇ ಚಾಪೆಯನ್ನು ಹಾಸಿ ಕೂರುವುದಕ್ಕೆ ರೆಡಿ ಮಾಡಿದರು ಅಕ್ಕಯ್ಯ. ಅರ್ಧಕ್ಕಿಂತಲೂ ಹೆಚ್ಚು ಬಾಗಿ ದೇಗುಲದ ಗರ್ಭಗುಡಿಗೆ ತಲುಪುವ ಪೂಜಾರಿಯ ಭಂಗಿಯಲ್ಲಿ ಒಳಗೆ ಹೊಕ್ಕೆ… ಒಳಗೆ ಹೋಗಿ ನಿಂತರೂ… ಸರಿಯಾಗಿ ತಲೆಯ ಮೇಲೆ ಅರ್ಧ ಇಂಚಿನಷ್ಟೇ ಅಂತರ. ನಡುವೆ ಇರುವ ಅಟ್ಟದ ಗಳುಗಳು ತಲೆಗೆ ಅಡ್ಡಲಾಗುವಂತಿದ್ದವು…

“ಅಕ್ಕಯ್ಯ ಇಲ್ನೋಡು… ಈ ಗೋಡೆಯಷ್ಟು ಎತ್ತರ ಇದ್ದೆ ಮೊದಲು… ಆಮೇಲೆ ಈ ಗೋಡೆಯಷ್ಟು ಇದ್ದೆ. ಈಗ ನೋಡಿದರೆ ಅಟ್ಟವನ್ನೇ ಹೊತ್ಕೊಂಡಿದೀನಿ ಅನ್ನುವಷ್ಟು ಬೆಳೆದಿದಿನಿ, ಅಲ್ವಾ?” ಎನ್ನುತ್ತಾ ಮನೆಯೊಳಗೆ ಕಾಲಿಡುತ್ತಲೇ ಎಡಬದಿಗೆ ಸಿಕ್ಕ ಎರಡೂವರೆ ಅಡಿಯ ಅಡ್ಡಗೋಡೆ, ಮೂರೂವರೆ ನಾಲ್ಕಡಿಯಷ್ಟಿದ್ದು ಅಡುಗೆ ಮನೆಯನ್ನು ಬೇರ್ಪಡಿಸಿದ್ದ ಇನ್ನೊಂದು ಗೋಡೆಯನ್ನು ತೋರಿಸಿದೆ.

“ಅಲ್ವಾ ನೋಡು ಮತ್ತೆ… ಅನ್ನ ತಟ್ಟೆಗೆ ಹಾಕಿದರೆ, ಇಲ್ಲ್ ಜಾಗ ಐತೆ ಇಲ್ಲಿಗೂ ಹಾಕು… ಅಲ್ಲಿ ಖಾಲಿ ಕಾಣ್ತದೆ ಅಲ್ಲಿಗೂ ಹಾಕು… ತುಪ್ಪ ಎಲ್ಲಿ? ಅಂತಿದ್ದೆ .. ತುಪ್ಪ ಇಲ್ಲದಿದ್ರೆ ಊರೆಲ್ಲ ಒಟ್ಟು ಮಾಡ್ತಿದ್ದೆ… ತಿನ್ತಾ ಇದ್ದ ಮೂರು ತುತ್ತಿಗೆ ಇಡೀ ತಟ್ಟೆ ಅನ್ನವನ್ನೆಲ್ಲ ಕಲಸಿ ಬೇರೆಯವರಿಗೆ ಪ್ರಸಾದ ಕೊಡ್ತಾ ಇದ್ದೆ. ಬೆಳೀದೇ ಇನ್ನೇನಾಗ್ತೀಯಪ್ಪಾ… ಇದ್ಯಾವುದಾದ್ರೂ ಗೊತ್ತಿರ್ತದಾ ನಿಂಗೆ… ಅನ್ನ ಹೋಗ್ಲಿ, ರೊಟ್ಟಿ, ಅದೂ ದೊಡ್ಡದೇ ಆಗಬೇಕು ಒಂಚೂರು ಮುರೀದೇ ಇರೋ ರೌಂಡಾಗಿರೋದು… ಅದರ ಮೇಲೆ ಬೆಣ್ಣೆಯಿಲ್ಲದಿದ್ದರೆ ಮತ್ತೆ ಗೊಳೋ ಅಂತಾ ಇದ್ದೆ! ಹಬ್ಬ ಅಂತ ಕಿವಿಗೆ ಬೀಳದ ಹಾಗೆ ನೋಡ್ಕೋಬೇಕಾಗಿತ್ತು ಕಣಾ ನಿಂಗೆ. ಹಬ್ಬ ಅಂದರೆ ಅದರ ಹಿಂದೆಲೇ ಬರ್ತಾ ಇದ್ದೆ ಪಾಯಸ ಎಲ್ಲಿ ಅಂತ. ಒಂದು ದಿನ ಎರಡು ದಿನಕ್ಕೆ ಮುಗಿತಾ ಇರಲಿಲ್ಲ. ವಾರವೆಲ್ಲಾ ಆಗಬೇಕಾಗಿತ್ತು ಪಾಯಸ. ಕೊನೆಕೊನೆಗೆ ನೀನು ರಚ್ಚೆಹಿಡಿಯೋದು ತಾಳಲಾರದೇ ಅನ್ನ ಬಸಿದ ಗಂಜಿಗೇ ಚೂರು ಬೆಲ್ಲ ಬೆರೆಸಿ ಅದನ್ನೇ ಪಾಯಸ ಅಂತಾ ಸಮಾಧಾನ ಮಾಡ್ತಾ ಇದ್ದೋ. ಇನ್ನ ಗಿಣ್ಣು ಮಾಡಿದರೆ ಒಂದು ಬೇಸಿನ್ನು ನಿನಗೇ ಅಂತಾನೇ ಕಾಯಿಸಬೇಕಾಗಿತ್ತು. ತುಂಡು ಮಾಡಿ ಕೊಟ್ಟರೆ ಅದಕ್ಕೂ ರಂಪ ಮಾಡ್ತಾಯಿದ್ದೆ. ಒಂದ್ ಕೂದಲೆಳೆಯಷ್ಟೂ ಹೆಚ್ಚು ಕಮ್ಮಿ ಆಗಂಗಿರಲಿಲ್ಲ. ನಾವು ಮೂರ್ನಾಲ್ಕು ಜನ ಸುತ್ತ ಇದ್ದರೂ ಅಳದ ಹಾಗೆ ನೋಡ್ಕೋಳೋಕಾಗಲ್ಲ ಅಂತ ನಿಮ್ಮ ಮಾವಂದಿರು ನಮಗೇ ಬೈಯ್ತಾ ಇದ್ದರು. ಒಂದಾ ಎರಡಾ ನಿನ್ನ ಹಟಾ? ಅಯ್ಯಪ್ಪಾ… ನಾವೆಲ್ಲ ಇದ್ದರು ಎಲ್ಲರಿಗೂ ಸುಸ್ತಾಗಿಸಿರುವಿಯಲ್ಲೋ ಮಾರಾಯಾ! ಒಂದೊಂದ್ ಸಲ ನಾನೆಂಗೋ ನಿಭಾಯಿಸಿದಿನಿ.. ನಿಮ್ಮಕ್ಕ, ನಿಮ್ಮಮ್ಮ (ತಾಯಿಯೇ ಅಕ್ಕ, ಅಜ್ಜಿ ಅಮ್ಮ). ನಿಮ್ಮಮ್ಮಂಗೆ ಅವರ ಮಕ್ಕಳೂ ಯಾರೂ ಗೋಳುಹೊಯ್ಕೊಂಡಿಲ್ಲಾ ಹೋಗತ್ಲಾಗಿ. ಅದೆಷ್ಟೊತ್ತಿಗೆ ಬುದ್ಧಿ ಬರ್ತದೋ ಅನ್ನೋ ಹಂಗಾಗಿತ್ತು ಆಗ”
ಅನ್ನುತ್ತಾ ಮಾತಿನ ನಡುವೆಯೇ, ಒಳಗಿನಿಂದ ಚಕ್ಕುಲಿ ಕೋಡುಬಳೆಗಳನ್ನಿಟ್ಟುಕೊಂಡು ತಂದು ಮುಂದಿಟ್ಟಿದರು.

ಅಕ್ಕಯ್ಯನಿಗೆ ಶಾಲೆಯ ವಿದ್ಯಾಭ್ಯಾಸವಾಗಿರಲಿಲ್ಲ. ಆದರೂ ಅವರ ತಂದೆ, ತಂದೆ ಓದಿದ್ದವರು, ತಮ್ಮಂದಿರು ಉನ್ನತವ್ಯಾಸಂಗ ಮಾಡಿಕೊಂಡಿದ್ದರು. ಆ ವಾತಾವರಣದ ಹಿನ್ನೆಲೆಯೋ ಏನೋ, ಅಕ್ಕಯ್ಯನ ತಿಳುವಳಿಕೆ ಅನಕ್ಷರಸ್ಥೆ ಅನ್ನಿಸುವಂತಿರಲಿಲ್ಲ. ಅಲ್ಲದೇ ತನ್ನ ಹಳೆಯ ನೆನಪುಗಳನ್ನು ಹಂಚಿಕೊಳ್ಳುವಾಗ ಅವರ ಅಪ್ಪನ ಕಾಲದ ವಿದ್ಯಾಭ್ಯಾಸದ ಕಷ್ಟಗಳು, ಬೇಸಾಯದ ದಿನಗಳ ಕಷ್ಟಗಳು, ತನ್ನ ತಮ್ಮಂದಿರು ತಂಗಿಯರು ಓದಿನ ದಿನಗಳಲ್ಲಿ ಎದುರಿಸುತ್ತಿದ್ದ ಕಷ್ಟಗಳು, ಅವೆಲ್ಲವನ್ನೂ ಮೀರಿ ತಮ್ಮಂದಿರು ಒಳ್ಳೆಯ ವಿದ್ಯಾವಂತರಾಗಿರುವಂತಹದ್ದು, ಈ ವಿಚಾರಗಳನ್ನು ಸಣ್ಣ ವಯಸ್ಸಿನ ನನ್ನಂತಹವರಿಗೆ ಸೂಕ್ಷ್ಮವಾಗಿ ಮನವರಿಕೆ ಮಾಡಿಕೊಡುತ್ತಲೇ, ವಿದ್ಯಾವಂತರಾಗುವುದರ ಅನುಕೂಲತೆಯನ್ನೂ, ಅತ್ಯಗತ್ಯತೆಯನ್ನೂ ತನ್ನ ತಿಳುವಳಿಕೆಯ ಎಟುಕಿಗೆ ಕಂಡಷ್ಟು ವಿವರಿಸುತ್ತಿದ್ದರು. ಅಷ್ಟೇ ಅಲ್ಲದೇ ಅಕ್ಕಯ್ಯನ ಇನ್ನೊಂದು ವಿಶೇಷತೆಯೆಂದರೆ, ಹಳೆ ಕಾಲದ ಚಂದಮಾಮ ಕತೆ ಪುಸ್ತಕಗಳನ್ನು ತನ್ನ ಅಪ್ಪನ ಮನೆಯಲ್ಲಿ ತರಿಸುತ್ತಿದ್ದು, ಅವುಗಳನ್ನು ಓದಿ ಹೇಳುವಾಗ ಕೇಳಿಸಿಕೊಂಡಿರುತ್ತಿದ್ದ ಅಕ್ಕಯ್ಯ, ಆ ಕತೆಗಳನ್ನೆಲ್ಲಾ ತನ್ನದೇ ಹೊಸ ಆವೃತ್ತಿಯ ಹಾಗೆ ನಮಗೆ ಹೇಳುತ್ತಿದ್ದರು.

ನನ್ನ ಬಾಲ್ಯದ ಆಟಗಳು, ನನ್ನ ಜೊತೆ ಆಟವಾಡುತ್ತಿದ್ದವರು, ಅವರೊಟ್ಟಿಗೆ ನನ್ನ ಜಗಳಗಳು ಇವೆಲ್ಲದರ ಪಟ್ಟಿಯೂ ಅಕ್ಕಯನ ಬಳಿಯಿರುತ್ತಿತ್ತು. ಮನೆಯ ಕೂಗಳತೆಯ ದೂರದಲ್ಲಿದ್ದ ಹುಣಸೆ ಮರ ಹತ್ತಲು ಹೋಗುವುದನ್ನಾಗಲೀ, ಹಲಸಿನ ಹಣ್ಣು ಹುಡುಕುತ್ತಾ ಹೋಗುವುದಾಗಲಿ, ಊರಿನ ಕೆಲವೇ ಮನೆಗಳಲ್ಲಿ ಇದ್ದ ಕಪ್ಪುಬಿಳುಪು ಟಿವಿ ನೋಡುವುದಕ್ಕೆ ಮನೆಯವರಿಗೆ ಕಾಣದಂತೆ ಹೋಗುವುದಾಗಲಿ ಇವೆಲ್ಲದರ ಬಗ್ಗೆ ಕಣ್ಣಿಟ್ಟಿರುತ್ತಿದ್ದ ಅಕ್ಕಯ್ಯ ಆಗ್ಗಾಗ್ಗೆ ಅಮ್ಮನಿಗೆ ವರದಿ ಸಲ್ಲಿಸುತ್ತಿದ್ದುದೂ ಇದೆ. ಕಳ್ಳಾ-ಪೊಲೀಸ್ ಆಟವೆನ್ನುತ್ತಾ ಊರಿನವರ ಹಿತ್ತಿಲುಗಳಿಗೆ ಮುತ್ತಿಗೆ ಹಾಕಿ, ಹುಲ್ಲು ಬಣವೆಗಳಲ್ಲಿ ಅವಿತುಕೊಳ್ಳುವುದಂತೂ ಅಕ್ಕಯ್ಯನ ಕಣ್ಣಿಗೆ ಬೀಳುವ ಹಾಗಿರಲಿಲ್ಲ. ಹಾವು ಹಲ್ಲಿ ಇರುವ ಕಡೆ ಆಟವಾಡುತ್ತಾ ಏನಾದರೂ ಅನಾಹುತವಾದರೆ ಅಂತ ನೇರವಾಗಿ ಬೈಯುವುದಕ್ಕೇ ಶುರು ಮಾಡುತ್ತಿದ್ದರು. ಅಕ್ಕಯ್ಯನ ಚುರುಕುತನಕ್ಕೂ ಜಗ್ಗದೇ ಅಷ್ಟೇ ಚುರುಕಾಗಿ ಅಕ್ಕಯ್ಯನ ಕಣ್ತಪ್ಪಿಸಿ ಆಟವಾಡುವ ಚುರುಕುತನ ನಮ್ಮ ಗೆಳೆಯರ ಗುಂಪಿಗೂ ಇತ್ತು.

Image result for photos of indian village boys playing chinni dandu game

ಅಕ್ಕಯ್ಯನ ಬಳಿ ಒಂದು ಪುಟ್ಟ ರೇಡಿಯೋ ಇತ್ತು. ಅದರ ವಿಶೇಷವೆಂದರೆ, ಕರೆಂಟು ಇದ್ದಾಗ ಕರೆಂಟಿನಲ್ಲೂ ಚಾಲನೆಯಾಗುತ್ತಿದ್ದು, ಕರೆಂಟು ಇಲ್ಲದಾಗ ಬ್ಯಾಟರಿ ಮೂಲಕ ಚಾಲನೆಯಾಗುತ್ತಿತ್ತು. ಅಕ್ಕಯ್ಯನ ರೇಡಿಯೋದಲ್ಲಿ ಬ್ಯಾಟರಿ ಖಾಲಿಯಾದ ತಕ್ಷಣ ಬದಲಾಯಿಸುತ್ತಿದ್ದರು. ಹಾಗಾಗಿ ಅಕ್ಕಯ್ಯನ ಮನೆಯಲ್ಲಿ ಸದಾ ಒಂದಿಲ್ಲೊಂದು ರೇಡಿಯೋ ಕಾರ್ಯಕ್ರಮ ಕೇಳುತ್ತಲೇ ಇರುತ್ತಿತ್ತು.

ಅಕ್ಕಯ್ಯನ ಬದುಕು ತುಂಬಾ ಸರಳ. ಅಕ್ಕಯ್ಯನ ಮನೆಯೂ ಅಷ್ಟೇ ಸರಳವಾಗಿರುವಂಥಾದ್ದು. ಸೌದೆ ಒಲೆಯಿರುವ ಒಂದು ಅಡುಗೆ ಮನೆ. ಅದಕ್ಕೆ ಹೊಂದಿಕೊಂಡಂತೆ ಒಂದು ಪುಟ್ಟ ಹಾಲ್, ಅದರ ಪಕ್ಕದಲ್ಲೇ ಬದಿಯಲ್ಲಿ ಒಂದು ಬಚ್ಚಲು ಮನೆ ಅದಕ್ಕೆ ಹೊಂದಿಕೊಂಡಂತೆ ಇರುವ, ದಿನಸಿಯ ಒಂದೆರಡು ಮೂಟೆ, ಸೌದೆ ಇಡಬಹುದಾದಷ್ಟು ಸಣ್ಣ ಜಾಗ. ಇಪ್ಪತ್ತು-ಇಪ್ಪತ್ತೈದು ಅಡಿಯ ನಾಡಹೆಂಚಿನ ಮನೆ. ಹತ್ತು ಹದಿನೈದು ಸೆಕೆಂಡುಗಳಲ್ಲಿ ಎಣಿಸಿಡಬಹುದಾದಷ್ಟು ಪಾತ್ರೆಗಳು, ಕಬ್ಬಿಣದ ಒಂದು ಪುಟಾಣಿ ಟ್ರಂಕು. ಆ ಟ್ರಂಕಿನ ಒಡಲಿನಲ್ಲಿ ನಗನಾಣ್ಯಗಳೇನೂ ಇರುತ್ತಿರಲಿಲ್ಲ. ನಿತ್ಯದ ಬಳಕೆಗಲ್ಲದ ನೆಂಟರು ಮನೆಗಳಿಗೆ ಹೋಗಲು ಇರಲಿ ಅಂತ ಒಂದೆರಡು ಒಳ್ಳೆಯ ಸೀರೆಗಳು, ನನ್ನಂತಹವರಿಗೆ ಸರ್ಪ್ರೈಸ್ ಕೊಡುವುದಕ್ಕೆಂದು ಇರಿಸುತ್ತಿದ್ದ ರವೆ ಉಂಡೆ, ಕೋಡುಬಳೆ, ಕರಂಜಿಕಾಯಿಗಳಂತಹ ತಿನಿಸುಗಳು, ತನಗೆ ಸಿಗುತ್ತಿದ್ದ ಮಾಸಾಶನದ ಉಳಿಕೆ ಹಣ ಇಷ್ಟೇ. ಇವನ್ನೂ ರಕ್ಷಿಸಿಡಬೇಕಾದ ಅಗತ್ಯವೇನೆಂದರೆ, ಅಕ್ಕಯ್ಯನ ಮನೆಯ ಮಿಕ್ಕ ಅರ್ಧ ಭಾಗ ಅವರ ಮೈದುನರ ಪಾಲಿಗೆ ಬಂದಿದ್ದನ್ನು ಊರಿನ ಇನ್ನೊಬ್ಬರಿಗೆ ಪರಭಾರೆ ಮಾಡಿದ್ದರಿಂದ ಅದು ದನದ ಕೊಟ್ಟಿಗೆಯಾಗಿ ಪರಿವರ್ತನೆಯಾಗಿ, ಆ ಬದಿಯಿಂದ, ಮೂಗಿಲಿ, ಸೊಂಡಿಲಿಗಳ ಹಾವಳಿ ಇರುತ್ತಿದ್ದು ಆ ಉಪಟಳದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಇದ್ದುದಷ್ಟೇ!

ಇನ್ನು ಉಭಯಕುಶಲೋಪರಿಯಾಯ್ತು. ಊರಲ್ಲೆಲ್ಲ ಹೇಗಿದ್ದಾರೆ ಅಂತ ಅಕ್ಕಯ್ಯನೂ ಕೇಳಿದರು, ನಾನೂ ಕೇಳಿದೆ… ನಾನು ಬೆಳೆದ ಆ ಊರಿನ ಸಮಾಚಾರಗಳನ್ನು ಸಂಕ್ಷಿಪ್ತವಾಗಿ ಅಕ್ಕಯ್ಯನೂ ತಿಳಿಸಿದರು. ಮಗಳ ಬಗ್ಗೆ ಕೇಳಿದರು. ಕರ್ಕೊಂಡ್ ಬಂದಿಲ್ಲ ಮತ್ತೆ ಒಬ್ನೇ ಬಂದಿದಿಯಾ… ನೋಡಬಹುದಾಗಿತ್ತಲ್ಲ, ಅವಳೆಷ್ಟು ಹಠ ಮಾಡುವಂತೋಳು ಅಂತ… ಅಂದರು.
ಅದಕ್ಕೂ ಒಂದು ಮುಗುಳ್ನಕ್ಕು. “ಸರಿ ಮುಂದಿನ ಸಾರ್ತಿ ಬರುವಾಗ ಕರ್ಕೊಂಡ್ ಬರ್ತಿನಿ” ಅಷ್ಟರಲ್ಲಿ ನೀನು ಇಂಗ್ಲೀಷ್ ಮಾತಾಡೋಕೆ ಕಲಿತುಕೊಂಡಿರಕ್ಕಯ್ಯಾ… ಇಲ್ಲ ಅಂದ್ರೆ ನಿಮ್ಮಿಬ್ಬರಿಗೂ ಮಾತಾಡಿಸೋಕೆ ಮಧ್ಯೆ ನಾನು ಬರಬೇಕಾಗ್ತದೆ…
“ಓ, ಅದ್ಯಾಕಪ್ಪಾ? ನೀನೇ ಕಲಿಸು ನಮ್ ಮಾತ್ನಾ… ನಾನೆಲ್ಲಿಂದ ಕಲಿಯಾಕೋಗ್ಲಪ್ಪಾ ಈಗ?”

“ ಹ್ಹ ಹ್ಹ, ಅದೇ ಕಷ್ಟಕ್ಕೆ ಬಂದಿರೋದು. ಕನ್ನಡ ಅಂದರೆ ನನಗ್ಯಾಕೆ ಅಂತಾಳೆ, ಅದೇ ನಿನ್ನ ಭಾಷೆ ಅಂದರೆ, ಇಲ್ವಲ್ಲಾ ಅಂತಾಳೆ”

ಇಲ್ಲಿಗೆ ಬಂದಿದ್ದಾಗ ಅವಳು ಇಂಗ್ಲೀಷಲ್ಲಿ ಮಾತಾಡಿದರೆ ಬೆಂಗಳೂರಲ್ಲಿ ಹೆಚ್ಚುಕಡಿಮೆ ಎಲ್ಲರಿಗೂ ಅರ್ಥ ಆಗತ್ತಲ್ಲ, ಇಲ್ಲಿಯ ಎಲ್ಲರಿಗೂ ಇಂಗ್ಲೀಷ್ ಗೊತ್ತಿದೆ.. ಕನ್ನಡ ಕಲಿಯದೇ ಇದ್ರೆ ನಿನ್ ಜೊತೆ ಯಾರೂ ಮಾತಾಡಲ್ಲ ಅಂತ ಸುಳ್ಳೇ ಹೇಳ್ತೀಯಾ ಅಪ್ಪಾ! ಅಂತಾಳೆ”.
“ಅವಳಂತಾಳೆ. ನೀನು ಕಲಿಸಬೇಕು. ನಮಗೆಲ್ಲ ಗೋಳ್ ಹೋಯ್ಕೊಂಡಿದ್ಯಲ್ಲಾ. ಈಗ ನೀನ್ ಅನುಭವ್ಸು” ಅಂದರು ಅಕ್ಕಯ್ಯ.

ಸುಮಾರು ಎರಡು ಗಂಟೆಯಷ್ಟು ಆರಾಮವಾಗಿ ಕೂತು ಮಾತಾಡಿದ್ದಾಯ್ತು ಅಕ್ಕಯ್ಯನ ಜೊತೆ. ಅದೇನೋ, ಎರಡು ಕ್ಷಣದಷ್ಟೂ ಅನಿಸಲಿಲ್ಲ. ಮತ್ತೆ ಅಕ್ಕಯ್ಯನನ್ನು ಕಾಣಬೇಕು. ಬಾಲ್ಯದಲ್ಲಿನ ನನ್ನ ವಿರುದ್ಧದ ಆಕೆಯ ದೂರುಗಳನ್ನೆಲ್ಲಾ ದಾಖಲಿಸಿಕೊಳ್ಳಬೇಕು.

ಅಕ್ಕಯ್ಯ ಅದೆಷ್ಟೇ ದೂರಿದರೂ ಆ ದೂರಿನಲ್ಲೂ ಒಂದು ಅಮೂರ್ತ ಸ್ವಂತಿಕೆಯನ್ನೂ ಸೆಳೆತವನ್ನೂ ಇರಿಸಿಕೊಂಡೇ ದೂರುವುದು. ದೂರುವುದು ಅನ್ನುವುದಕ್ಕಿಂತಲೂ ಆಕೆಯ ನೆನಪಿನ ಕಡತಗಳಲ್ಲಿನ ದಾಖಲೆಗಳನ್ನು ಕಿರಿಯರಾದ ನಮ್ಮೆದುರು ತೆರೆದಿಡುವುದು!

ಅಕ್ಕಯ್ಯನನ್ನು ಮಾತನಾಡಿಸುತ್ತಾ, ನಾನು ಬರಿಗೈಯಲ್ಲಿ ಬಂದಿದ್ದು ನೆನಪಾಗಿ ಸಂಕಟವಾಯ್ತು. ಊರಿನಲ್ಲಿ ಇರುತ್ತಾರೋ ಇಲ್ಲವೋ ಅಂತ ತಿಳಿದಿರಲಿಲ್ಲ. ಅಕ್ಕಯ್ಯನ ಜೊತೆ ಮಾತು ಮುಗಿಸಿ ಹೊರಡುವ ಮನಸ್ಸಿಲ್ಲದಿದ್ದರೂ ಉಳಿದ ಕೆಲಸಗಳ ನೆನಪಾಗಿ ಬೇರೆ ದಾರಿಯಿಲ್ಲದೇ ಹೊರಟೆ. ಏನಾದರೂ ತರಬಹುದಾಗಿತ್ತು ಅಕ್ಕಯ್ಯ, ನೀನು ಸಿಗ್ತೀಯಾ ಅಂತಲೇ ಗೊತ್ತಾಗಲಿಲ್ಲ. ಏನ್ಮಾಡಲಿ ಈಗ ಅಂದೆ.

“ನಂಗೇನೂ ಬೇಡ ಬಿಡಪ್ಪಾ… ಬಂದಿಯಲ್ಲ. ನೋಡಿದ್ನಲ್ಲ ಅಷ್ಟೇ ಸಾಕು ಚೆನ್ನಾಗಿರು, ಊರಕಡೆ ಬಂದಾಗ ಮುಖ ತೋರಿಸಿ ಹೋಗು ಅಷ್ಟು ಸಾಕು ನನಗೆ” ಅಂದರು!

ನನ್ನ ಆ ಭೇಟಿಯಲ್ಲಿ ಸಾಧ್ಯವಾಗಿದ್ದು ಅಷ್ಟೇ! ಮುಖ ತೋರಿಸಿ ಬಂದದ್ದು.


Leave a Reply

Back To Top