ಬಿಸಿಲ ಕೋಲೆ

ಕಾವ್ಯ ಸಂಗಾತಿ

ಬಿಸಿಲ ಕೋಲೆ

ಬೆಂಶ್ರೀ ರವೀಂದ್ರ

ಮನೆಯಂಗಳದಿ ಬಿಸಿಲ ಕೋಲೆ
ನಾಡಹೆಂಚಿನ ಸಂಧಿ ಮಾಡೆ
ಮಳೇಲಿ ಗಂಗಾವತರಣ ನೋಡೆ
ಸೂರುಚಂಡಿನೇಟು ಪಟಾಕಿ ಕೇಳೆ
ಮುಸುನಗೆ ಮೊಗೆವ ಅಜ್ಜಿಕಾಣೆ

ಅಂಗಡಿ ಹೊರಟಿಹ ಅಜ್ಜ
ಅಡಿಗೆಮನೆಯಲಿ ಅಜ್ಜಿ
ತುಂಬಿದೆ ಮನೆ ಮಕ್ಕಳಮಕ್ಕಳು
ಸೇರು ಪಾವು ಚಟಾಕು ; ಗೋಲಿ
ಗಜ್ಜುಗ ಕುಂಟೆಬಿಲ್ಲೆ ಚಿನ್ನಿ ಬುಗುರಿ
ಭರಾಟೆ; ಮಧ್ಯಾನ್ಹಕೆ ಚೌಕಾಬಾರ
ಕವಡೆಕಾಯೆ ; ಸಂಜೆ ಕಣ್ಣಾಮುಚ್ಚಾಲೆ
ಬೇಸಿಗೆಯ ರಜ , ರಾಜಾ ಕಾಲೆ
ಮರೆಯದ ಮರೆಯಾದ ಮಜಾ ಕಾಲೆ

ಬೆಟ್ಟಕ್ಕೊ ಅರಮನೆಯ ಅಂಗಳಕೊ
ಕುಕ್ಕರಹಳ್ಳಿ ಕೆರೆಗೊ ಕೃಷ್ಣರಾಜ ಸಾಗರಕೊ
ಬೇಡ
ಝೂ , ಸರ್ಕಸ್ಸು ಕೊನೆಗೆ ಪಿಂಜರಾಪೊಲು
ಮೇಲುರಿವ ಸೂರ್ಯ ಕೆಳಗೆ ಸುಡುವನೆಲ
ರಸ್ತೆಯೇ ಮೈದಾನ ; ಲಗೋರಿ ಸೂರು ಚೆಂಡು
ಏಕಾದಶಿಯ ರಾತ್ರಿ ಅಜ್ಜಿಯುಪ್ಪಿಟ್ಟಿನ ಪಿಡಚೆಗೆಂಥಾ
ಡಿಮ್ಯಾಂಡು ; ದೆವ್ವದ ಕಥೆಗಳ ನಡುಗುವ ಸೊಗಡು

ಗಂಟೆ ಮೂರಾಯ್ತು ಬನ್ನಿ ಊಟಕ್ಕೆ
ಹನ್ನೊಂದು ದಾಟಿತು ಮಲಗಿರಿನ್ನು
ಸೂರ್ಯ ಏರಿಯನೇರಿ ಬರುವತನಕ
ಸುಖ ಕನಸು ನಿದ್ರಾಲೋಲುಪರಿನ್ನು

ಮರಳಿರಿ ಶಾಲೆ ಶುರುವಾಯ್ತು ; ಕಂಗಳಲಿನೀರು
ಜಾಣಮಕ್ಕಳು ನೀವು ಬನ್ನಿ ದಸರೆಗೆ
ಅಜ್ಜಿಯ ಕಣ್ಣಂಚಲಿ ಏಕೋ ನೀರು

ಕಳೆದ ದಿನಗಳು ಬಾರದು; ನೆನಪಿನಲಿರಲಿ
ಊಸಿರು ಕುಸಿಯುವವರೆಗೂ;
ಬರುವ ದಿನಗಳ ಕನಸು ತುಂಬಿಕೊಂಡಿರಲಿ
ಬಾರದ ದಿನಗಳ ನನಸು ………..


Leave a Reply

Back To Top