ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ತಾಳ್ಮೆಉಂಡು..

ಪ್ರೊ ವಿಜಯಲಕ್ಷ್ಮಿ ಪುಟ್ಟಿ

ಸ್ನೇಹದಲ್ಲಿ ಮಿಂದು ಪೂರ್ಣವಾಯಿತು ಬದುಕು
ಬೆಂದ ಅಗಳಿನ ಹಾಗೆ ತೃಪ್ತಿಗೊಂಡು
ಕೆಲವೊಮ್ಮೆ ಸ್ತುತಿಗಳು
ಹಲವೊಮ್ಮೆ ನಿಂದನೆಗಳು
ಇದ್ದರೇನು
ಮಂದಹಾಸ ಬೀರುವ ತಾಳ್ಮೆಉಂಡು…

ಕಷ್ಟಸುಖಗಳಿಗೆ ನೊಂದು
ಮನ ಕುಸಿಯುವುದೇ
ಟಿಸಿಲೊಡೆದು ಬರಬೇಕು ಧೈರ್ಯ ಒಳಗಿಂದ…

ಮಸಣದ ಹೂವು ಎಂದೂ ವ್ಯಸನಿಯಲ್ಲ
ಅಲ್ಲಿಯೇ ಅರಳುವುದು ಒನಪಿನಿಂದ
ಉಳಿಯ ಪೆಟ್ಟು ಬಿದ್ದರೇನೆ
ಕಾಡು ಕಲ್ಲು ಮೂರ್ತಿ ರೂಪ
ಕಟಿದಷ್ಟು ಅರಳುವುದು
ಶಿಲ್ಪ ಲೋಕ..

ಕಡೆವ ಶಿಲ್ಪಿಯು ನೀನು
ಒರಟು ಕಲ್ಲು ಪಕ್ಕದಲ್ಲಿ ನಾನು
ನಾನಾಗ ಬಯಸುವೆ ಸುಂದರ ಶಿಲೆ
ನಿನ್ನ ಕೈಗಳಲಿ
ಮೂರ್ತಗೊಂಡು
ನಿನ್ನ ಪ್ರೀತಿ ಉಂಡು…

ಸಮುದ್ರ ತಟಸ್ಥ ತಟವು
ಕೊಂಚವೂ ವಿಚಲಿಸದು
ಬದುಕುವುದು ಅಬ್ಬರದ ಅಲೆಗಳ ಸಹಿಸಿಕೊಂಡು
ಸುತ್ತಮುತ್ತಲು ಬರಿಯ ದುಃಖವೇ ಇರಲಿ
ಬಿಕ್ಕಳಿಸಿ ಕೂರುವುದು ಸರಿಯು ಏನು

ರಸಭರಿತ ಜೀವನವು ಸರಸ ವಿರಸಗಳ ಸಮನಾಗಿ ಉಂಡು
ಮಾಡಿದರೆ ಬದುಕು ಎಷ್ಟು ಅಂದ
ಹಸಿಬಿಸಿಯ ಭಾವಗಳಿಗೆ
ಪ್ರೀತಿಯ ಬಿಸುಪು ನೀಡಿ ಕಾವ್ಯವಾಗಲಿ ಮೈ ಮನವು ಜತನದಿಂದ.


About The Author

Leave a Reply

You cannot copy content of this page

Scroll to Top