ಕಾವ್ಯ ಸಂಗಾತಿ
ಕವಿಗೊಂದು ಮನವಿ
ಬೆಂಶ್ರೀ ರವೀಂದ್ರ
ಎಲ್ಲಿಂದಲೋ ಹಾರಿಬರುವ ಗುಂಡಿಗೆ ಎದೆಯೊಡ್ಡುಯುವೆಯೇನು
ಶರವೇಗದ ಕ್ಷಿಪಣಿಗೆ ತಲೆಯೊಡ್ಡುವೆಯೇನು
ಕಿವಿಗಡಚಿಕ್ಕುವ ದಾಳಿಗೆ ಉಸಿರಾಜ್ಯ ಕೊಡುವೆಯೇನು, ಕವಿಯೇ
ಎಲ್ಲೋ ತಂಪಿನಲಿ ಧೂಮಸುರಳಿಯಲಿ
ನನ್ನ ನೋವನು ಯುದ್ದ ವಿಭ್ರಮವನು ಚಿತ್ರಿಸುವೆಯಾ, ಊರೂರಲಿ ಹಂಚುವೆಯಾ
ನನ್ನ ಸುಂದರ ಕೀವ್, ಹಾರ್ಕೀವ್‌ಗಳಿಗ ಸ್ಮಶಾನವೆಂದೇಕೆ ಜರೆವೆ
ನಾಶವಾದನೆಂದೇಕೆ ಕಣ್ಣೀರ ಕಡವೆ
ನನ್ನೆಲಬು ರಕ್ತಮಾಂಸಗಳ ಅಂಗಡಿಯನಿಟ್ಟು
ಇದೋ ತಾಜಾ ಕವನವೆಂದೇಕೆ ಹಲುಬುವೆ
ಮಹಾ ಮಾನವತಾವಾದಿಯೆಂದು ಸ್ಟಾಕ್‌ಹೋಮಿನ ಪ್ರಶಸ್ತಿಯ ಬಯಕೆಯೆ.
ಅವನಿಗೇ ಗೊತ್ತಿಲ್ಲ
ತಾನೇನು ಮಾಡುತ್ತಿರುವೆನೆಂದು
ಕ್ಷಮಿಸು ದೇವರೇ
ಕ್ರಿಸ್ತನಿಲ್ಲಿ ಗೊಲ್ಗೊಥಾದೆಡೆಗೆ
ಶಿಲುಬೆಯ ಹೊತ್ತು ಮತ್ತೆ ಹೊರಟಿದ್ದಾನೆ.
ಸಮಾಧಿಯಿಂದವ ಮತ್ತೆ ಏಳುತ್ತಾನೆ
ಕಂಸ, ಊರೂರ ಮಕ್ಕಳ
ಮಾರಣಹೋಮ ಮಾಡಿದನಲ್ಲವೆ
ದೇವಕಿಯ ಹಸುಗೂಸುಗಳ ಬಂಡೆಗಪ್ಪಳಿಸಿದನಲ್ಲವೆ; ಕೃಷ್ಣ ಸತ್ತನೆ
ಕೆಂಪುರಾಡಿಯ ನಡುವೆ ಬಿಳಿಯ ಬಾವುಟವಿಲ್ಲ, ಬೇರೆ ಬಣ್ಣಗಳಿಗೆ ತಾವಿಲ್ಲ
ಬಹುಶಃ ಮುಂದೊಮ್ಮೆ ಮರವಿಲ್ಲಿ ಚಿಗುರಿದರೆ ಚಿಗುರೂ ಹಸಿರಾಗಿರುವುದಿಲ್ಲ
ಚೆಲ್ಲಾಡಿದ ಬೀದಿಗಳಲ್ಲಿ
ಯಾರ ತಲೆ ಕೈಕಾಲುಗಳು
ಯಾರದೆಂದು ತಿಳಿಯುವುದಿಲ್ಲ
ಕುಂಟಾದ ಕುಟುಂಬಗಳು ಕುರುಡಾಗಿವೆ
ದಾರಿ ಸಾಗುವುದೆಂತೋ ನೋಡಬೇಕು.
ಇಲ್ಲೆಲ್ಲ ರಾವಣರೆ, ದಶಶಿರರೆ
ಸೀತೆಯ ಮೋಹ ಅವರನ್ನು ಬಿಡುವುದಿಲ್ಲ
ಘಟೋತ್ಕಜರಿಲ್ಲಿ ಕಾಣುವುದಿಲ್ಲ.
ಬೆಳಕು ಬಾಗಿನವನ್ನು ಕೈಯಾಳುಗಳ ಮಾಡಿ
ಅಟ್ಟಗಳಿಂದ ಮಾತಿನ ಮಳೆಯ ಸುರಿಸಿಹರು
ನನ್ನ ಭೂಮಿ ತಂಪಾಗದು, ರಕ್ತ ಕುಡಿದಿದೆ
ಬೀಜಾಸುರರು ಬಕಾಸುರರು ಒಂದಾಗಿದ್ದಾರೆ.
ಸಾಧ್ಯವಾದರೆ
ರಕ್ತಬೀಜಾಸುರನ ಕೊನೆಗಾಣಿಸುವ ಕೆನ್ನಾಲಗೆಯ ದುರ್ಗೆಯಿದ್ದರಿಲ್ಲಿ ಕಳಿಸಿಕೊಡು.
ಎಲ್ಲೆಲ್ಲೂ ಎಲ್ಲೆಯಿಲ್ಲದೆ ಮುರಿದ ಸೂರು
ಹಾದಿ ಬೀದಿಗಳೆಲ್ಲಿ ಮನೆಮಾಳಿಗೆಗಳೆಲ್ಲಿ
ತಿಳಿಯದಂತಾಗಿದೆ; ಪಾಳುಬಿದ್ದಿದೆ ಊರು
ಮೂರಾಬಟ್ಟೆಯಾಗಿದೆ ಬದುಕು
ಏಕೆ ಏಕೆ ಏಕೆ ಇದೆಲ್ಲಾ
ದಾಂಡಿಗರ ಕಚ್ಚಾಟ ಮೇಲಾಟಗಳಲಿ
ಅಳಿಲುಗಳಿಗಿಲ್ಲವೆ ಎಡೆ.
ಸೇತುವೆಯ ಕಟ್ಟಲು ಸಹಾಯ ಮಾಡಿದರೆಂಬ ಸೆಡವೆ
ರಾಮನಾರೋ ರಾವಣನಾರೋ ತಿಳಿಯದಲ್ಲ
ರಾವಣರೆಯೆಲ್ಲ
ಇದ್ದಂತೆ ಇರಗೊಡದ ನಮ್ಮ
ಇತಿಹಾಸದಲಿ ನಿಮ್ಮ ಕಾಲ್ಚೆಂಡಿನಾಟ, ನಾನೋ ಗೋಲುಗಂಬಳೆತ್ತ ಎಂದರಿಯದೆ
ಕಂಡಕಂಡೆಡೆ ಹೊರಳಿದ ಚೆಂಡು.
ಇನ್ನೇನು ಉಳಿದಿಲ್ಲವೆನ್ನದಿರು
ಉಳಿದಿದೆ ಛಲವೆಂಬುಸಿರು
ಇಂದಲ್ಲ ನಾಳೆ ಜಗ ಚಲಿಸುವುದೆಂಬ ಕಸಿರು.
ಬೇಸರಿಸದಿರು ಕವಿಯೆ
ಕಾರ್ಮೋಡ ಕವಿಚೆನ್ನಮೇಲೆ ಬೀಳುತ್ತಿದೆ
ನೊಂದ ಮನದ ಬೆಂದ ನುಡಿಯಿದು
ನೀ ಹಾಡು ಅಲ್ಲಿಂದಲೇ
ಗುಂಡುಗಡಣಗಳ ರಣಭೀಕರ ಶಬ್ದಗಳಲಿ
ನಿನ್ನ ಮಧುರರವವಕಸ್ಮಾತ್ ಕೇಳಬಹುದು
ಕ್ವಚಿತಾದರೂ ಚಿತ್ತಾಗದೆ ಖಚಿತವಿರಲಿ.
ಮನ ಕೊಂಚಾದರೂ ತಂಪಾಗುವುದು.
Awesome ಅದ್ಭುತ ಕವಿತೆ
Really superb