ಕಾವ್ಯ ಸಂಗಾತಿ
ವರ್ಷನಾಟ್ಯವ ಮಾಡು ತಡವೇತಕೆ
ವತ್ಸಲಾ ಶ್ರೀಶ ಕೊಡಗು
ಇಳೆಯ ಮೈ ಸುಡುತಿಹುದು ಚಿಗುರಿಲ್ಲ ಹಸಿರಿಲ್ಲ
ಬಸವಳಿದ ತನುವ ನೀ ತಂಪಾಗಿಸು|
ನಳನಳಿಪ ತಿಳಿ ಹಸಿರ ದಾವಣಿಯ ತೊಡಿಸಿಬಿಡು
ಸಿರಿಗೌರಿಯಾಗುವಳು ಧರಣಿ ಮುದದಿ||
ಗಗನದೂರಲಿ ಮೋಡ ಹುಸಿಮುನಿಸ ತೋರುತಿರೆ
ಪವನ ನೀ ರಮಿಸೆ ಒಲುಮೆಯ ತೋಳ ಚಾಚು|
ಬಿರುಬಿಸಿಲ ಚಾದರವ ಮಡಚಿ ಸೂರಿನಲಿರಿಸಿ
ಇಳೆಯ ಸೆರಗಲಿ ಹನಿಯ ಕುಸುರಿ ಬಿಡಿಸು||
ಮುಗಿಲ ಹಾಳೆಯ ಮೇಲೆ ಕೋಲ್ಮಿಂಚ ಚಿತ್ತಾರ
ಬರೆಯೆ ಮರೆತಿಹೆಯೇನು ಮೇಘರಾಜ|
ಏಕೆ ಆಲಸ್ಯವಿದು ಇನ್ನೇಕೆ ಮೌನವಿದು
ಓ ನಭದ ಬಾಂಧವನೆ ಗರ್ಜಿಸುತ ಬಾ||
ಜಗದ ಪ್ರಾರ್ಥನೆ ಕೇಳು ಭುವಿಯ ಓಲೆಯ ಓದು
ಚುಂಬನದಿ ತಣಿಸು ನೀ ನೆಲದ ಬೇಗೆ|
ಮಳೆಮುತ್ತ ನೂಪುರವ ಧರಿಸಿ ನೀ ಧರೆಗಿಳಿದು
ವರ್ಷನಾಟ್ಯವ ಮಾಡು ತಡವೇತಕೆ||