ರಾ….ಮಾ…

ಕಾವ್ಯ ಸಂಗಾತಿ

ರಾ….ಮಾ…

ನಾಗರೇಖಾ ಗಾಂವಕರ

ರೋಮ ರೋಮದಲ್ಲೂ
ರಾಮ
ರಾರಾಜಿಸಲು ರಾಮನಾಮ
ರಾಮ
ಧರ್ಮೇಚ ಅರ್ಥೇಚ ಕಾಮೇಚ
ವರಿಸಿದ ಸತಿಯ ತ್ಯಜಿಸಿದ
ರಾಮ

ಮಾರುವೇಷದಲಿ ಜನಮನವನರಿತು
ಮನಗೆದ್ದ
ರಾಮ
ಮನದನ್ನೆಯ ಮನವನರಿಯಲಾರದೇ ಸೋತ
ರಾಮ

ಆ ಮರ ಈ ಮರ
ಪದ ಮಸೆತ
ಉದ್ಭವಿ ರಾಮ.
ಮರ ಮರ
ಮರುಗಿದನೇ ರಾಮ?
ಕೊರಗಿಗೂ, ಮರುಕಕ್ಕೂ ಅತೀತ
ರಾಮ.
ನ್ಯಾಯ ನೀತಿ ಧರ್ಮಗಳ
ತಕ್ಕಡಿಯಲ್ಲಿ ಸಮತೋಲನ
ತಪ್ಪಿದವನಲ್ಲ
ರಾಮ
ಆದರೇಕೆ
ಧರ್ಮಪರಿಪಾಲಕನ
ದಾರಿಯಲ್ಲಿ ದ್ವಂದ್ವ ನಿಯಮ
ಹೆಣ್ಣಿಗೊಂದು ಗಂಡಿಗೊಂದು
ನೀತಿಗಳ ಪರಿಭಾವಿಸಿದನೇ
ರಾಮ

ಜಗವ ಪೊರೆದನೆಂಬ
ಬಿದುದಾಂಕಿತ
ರಾಮ
ಸ್ವಪ್ರತಿಷ್ಟೆಯ ಪದಕಕ್ಕಾಗಿ
ಸ್ವಜನರನ್ನೆ ಬಲಿಕೊಟ್ಟ
ರಾಮ
ಅಯೋಧ್ಯೆಯ ರಾಜ
ಶ್ರೀ ಶ್ರೀ ರಾಮ
ಅವನ ಲೀಲೆಗಳೆಲ್ಲ
ನಂಬಲಾಗದ ವಿಲೋಮ.


Leave a Reply

Back To Top