ಕಾವ್ಯ ಸಂಗಾತಿ
ಗಜಲ್
ಪ್ರಭಾವತಿ ಎಸ್ ದೇಸಾಯಿ
ಹೊಂಬೆಳಕ ಹರಡುತಾ ಯುಗಾದಿಯ ಹೊನಲು ಸಿಂಗರಿಸಿದೆ ಇಳೆಯ
ಮೂಡಣದಲ್ಲಿ ಮಳೆಬಿಲ್ಲು ಮೂಡಿ ಮುಗಿಲು ಸಿಂಗರಿಸಿದೆ ಇಳೆಯ
ಹೊಂಗೆಯ ಸುಮ ಕಂಪು ದುಂಬಿ ಝೇಂಕಾರಕೆ ನಲಿಯುತಿದೆ ಜಗವು
ಕೋಗಿಲೆ ಹಾಡಿಗೆ ಬಿರಿದ ಮಲ್ಲಿಗೆ ಘಮಲು ಸಿಂಗರಿಸಿದೆ ಇಳೆಯ
ವಸಂತನಾಗಮನಕೆ ಚಿಗುರಿದ ಬನದ ಹೂ ಕಾಯಿ ಬಳಕುತಿವೆ
ಬೇವು ಬೆಲ್ಲದ ಜೊತೆ ಹುಳಿ ಮಾವಿನ ಫಸಲು ಸಿಂಗರಿಸಿದೆ ಇಳೆಯ
ಸುರಿದ ಮಳೆಗೆ ಧಾರಿಣಿ ಗಂಧ ಬೀರಲು ಬಾನು ರಂಗೇರಿತು
ಕಂಡು ಕಾಮನಬಿಲ್ಲು ಕುಣಿಯುತಾ ನವಿಲು ಸಿಂಗರಿಸಿದೆ ಇಳೆಯ
ಶಿವ ಗಿರಿಜೆ ಮಿಲನಕೆ ಕುಸುಮ ತೋರಣ ಕಟ್ಟಿ ಕಾದಿದೆ ಲೋಕ
ಮಾವು ಬೇವಿನ ಬಾಸಿಂಗ ಕರಡಿ ಮಜಲು ಸಿಂಗರಿಸಿದೆ ಇಳೆಯ
ಆದಿ ಅಂತ್ಯವಿಲ್ಲದ ಸೃಷ್ಟಿಯು ಒಲವ ಚೈತನ್ಯ ತಂದಿದೆ
ಹಾಕಿದ ಅನುರಾಗದ ರಂಗೋಲಿ ಬಯಲು ಸಿಂಗರಿಸಿದೆ ಇಳೆಯ
ನಿರಾಕಾರನ ಒಲಿಸುವ “ಪ್ರಭೆ” ಯ ಭ್ರಮೆಗೆ ಏನು ಹೇಳುವೆ
ಎದೆಯಲಿ ಕುಣಿವ ಮನ್ಮಥನ ಕನಸ ಅಮಲು ಸಿಂಗರಿಸಿದೆ ಇಳೆಯ