ಕಾವ್ಯ ಸಂಗಾತಿ
ಗಜಲ್
ಅಮೃತಾ ಉಮೇಶ್ ಶೆಟ್ಟಿ
ಕೆಂಪು ಬಣ್ಣವ ಒಡಲಿಗೆ ಎರೆಸಿಕೊಂಡೆಯಾ ಗುಲಾಬಿ
ತಂಪು ಇಬ್ಬನಿಗಳ ಸಾಲಾಗಿ ಮೆರೆಸಿಕೊಂಡೆಯಾ ಗುಲಾಬಿ
ಪ್ರೀತಿಯ ನಿವೇದನೆಗೆ ಸರಿಸಾಟಿ ಯಾರಿಹರು ಹೇಳು
ಕಾಂತಿಯ ಪಕಳೆಗಳ ನಿದಾನವಾಗಿ ತೆರೆಸಿಕೊಂಡೆಯಾ ಗುಲಾಬಿ
ಉರಿವ ಬಿಸಿಲಿಗೂ ಬಾಡದೆ ನಗುತ ಇರುವೆಯಾ
ಹಾರುವ ದುಂಬಿಗಳ ಸನಿಹಕೆ ಕರೆಸಿಕೊಂಡೆಯಾ ಗುಲಾಬಿ
ಹೆಚ್ಚುವ ಅಂದಕೆ ಹುಚ್ಚರಾಗದೆ ಇರಲು ಸಾಧ್ಯವೇ
ಚುಚ್ಚುವ ಮುಳ್ಳಿನಾ ಕಂಬನಿಯ ಮರೆಸಿಕೊಂಡೆಯಾ ಗುಲಾಬಿ
ಶಾಂತಿಯ ಬದುಕಿಗೆ ಅಮ್ಮಿಯ ಜೊತೆಗೆ ಇದ್ದುಬಿಡು
ನಾಳೆಯ ಬಯಕೆಗೆ ಚೆಲುವನು ಕೊರೆಸಿಕೊಂಡೆಯಾ ಗುಲಾಬಿ