ಕಾವ್ಯ ಸಂಗಾತಿ
ಭಾಗ್ಯ-ದೌರ್ಭಾಗ್ಯ..
ಸುರೇಶ ಫ ಮಲ್ಲಾಡದ..
ಮಕ್ಕಳ ಭಾಗ್ಯ ಪಡೆಯಲು
ತಲೆಯಮೇಲೆ ಮೀಸಲುಡಿಯ
ಹೊತ್ತು ತಿರುಗದ ತೀರ್ಥಕ್ಷೇತ್ರಗಳಿಲ್ಲ.
ಹತ್ತಿಳಿಯದ ಬೆಟ್ಟಗಳುಳಿದಿಲ್ಲ..
ಆ ನೆನಪಿನ್ನೂ ಚಿತ್ತದಿಂದಳಿದಿಲ್ಲ.
ಪಡೆದೆವೊಲವ ಭಾಗ್ಯವ
ಪುತ್ರಸಂತಾನದೀಂ…
ವಸಂತ ಕಳೆಯಲೋಸುಗ
ಮನೆಗೆ ಬಂದಳು ಭಾಗ್ಯಲಕ್ಷ್ಮಿ.
ಅಂಬೆಗಾಲಿಕ್ಕುವ ಮಕ್ಕಳ
ಕಂಡು ನಮ್ಮಿಬ್ಬರ ಹರ್ಷ
ಆಕಾಶದಲ್ಲೆಡೆ ನೀಲಿಯಾಗಿತ್ತು..
ಎಳೆಯ ಕಾಲ್ಗಳ ಗಲ್ಲಕ್ಕೆ
ಒತ್ತಿಕೊಂಡಿದ್ದೆವು…
ಹೆಗಲ ಮೇಲೆ ಹೊತ್ತು
ತಿರುಗಾಡಿದ್ದೆವು..
ತೇರು. ಜಾತ್ರೆ. ಪರಿಷೆ. ತೀರ್ಥಕ್ಷೇತ್ರ.
ಎಲ್ಲೆಂದರಲ್ಲಿ ನಲಿದಾಡಿದ್ದೆವು..
ಹೊಟ್ಟೆ-ಬಟ್ಟೆ ಕಟ್ಟಿ ಉನ್ನತ
ಶಿಕ್ಷಣ ಕೊಡಿಸಿದ್ದೆವು..
ಬದುಕು ಕರೆದ ಕಡೆ
ಹೊರಟು ನಿಂತರು..
ಅಳಿಯ ಮಗಳ ಕೈಹಿಡಿದು
ಕಾರೇರಿ ಹೊರಟರೆ..
ನಮ್ಮನ್ನ ಸಲುಹಲಿದ್ದ
ಮಗನನ್ನ ಸೊಸೆ ಕರೆದೊಯ್ದಳು.
ವಯಸ್ಸಿನೊಳು ಪಡೆದಿದ್ದೆವು
ಮಕ್ಕಳ ಭಾಗ್ಯ..
ಇಳಿವಯಸ್ಸಿನೊಳು ನಮ್ಮಿಬ್ಬರಿಗೆ
ಮತ್ತದೇ ದೌರ್ಭಾಗ್ಯ..
ನಮ್ಮದು ಮತ್ತೆ ತೀರ್ಥಯಾತ್ರೆಗೆ
ಹೊರಡುವ ಸಮಯ..