ಗಜಲ್
ದೇವರಾಜ್ ಹುಣಸಿಕಟ್ಟಿ.
ಸಂತಿ ಹೂವಿಗೆ ತಂತಿ ಬೇಲಿ ಬಿಗದಾರ ಬೇ ಯವ್ವಾ
ಅಂತಿಕಂತಿ ರಂಡಿ ಮಕ್ಕಳ ರಗಡ ಮಾತಾಡ್ಯಾರ ಬೇ ಯವ್ವಾ
ರಚ್ಚಿ ಹಿಡಿದು ಬೆತ್ತಲಾಗೋರ ಹುಚ್ಚಾರ ಹೆಂಗ್ ಬಿಡಿಸೋದು ಅಂತೀನಿ
ಹರಾಮಿ ಮಕ್ಕಳ ಶರಮ್ ಬಿಟ್ಟ ನಿಂತಾರ ಬೇ ಯವ್ವಾ
ಧರ್ಮದ ಹೆಸರಲಿ ಕಿಚ್ಚ ಹಚ್ಚೋರ ಬಾಯಾಗ ರಾಮ ನಾಮ ಕೇಳಿ ಬೆಚ್ಚಿ ಬೀಳಬ್ಯಾಡ
ಕಚ್ಚಿ ಹರ್ಕರ ಸತ್ಯ ಹರಿಶ್ಚಂದ್ರನ ವ್ಯಾಸಾ ಹಾಕ್ಯಾರ ಬೇ ಯವ್ವಾ
ಹೊಡಿಬಡಿ ಆಟಕ್ಕೆ ಬಣ್ಣ ಬಣ್ಣದ ರಿಬ್ಬನ್ನ ಕಟ್ಟಿ ದಲಿತ ಮಕ್ಕಳನ ಬಿಟ್ಟಾರ…ಗೊತ್ತಿಲ್ಲ ನಿನಗ
ನನ್ನಜ್ಜ ಮುತ್ತಜ್ಜ ಅವರಜ್ಜ ಹುಟ್ಟಿ ಮೆಟ್ಟಿದ ನೆಲಕ್ಕೆ ದಾಖಲೆ ತರ್ರಿ ಅಂದಾರ ಬೇ ಯವ್ವಾ
ನೆರಳಿನ ಗುರುತು ಅಳಿಸಿ ಹಾಕುವ ಹುನ್ನಾರ ಮತ ಬೇಟೆಗೆಂದು ಹೂಡ್ಯಾರ ಗೊತ್ತಿಲ್ಲ ನಿನಗ
ಬೆಳಕಿನ ಪಂಜು ಹಿಡಿದು ಬರುವವರೆಲ್ಲರಿಗೂ ದೇಶ ದ್ರೋಹಿಗಳ ಪಟ್ಟ ಕೊಟ್ಟಾರ ಬೇ ಯವ್ವಾ
ಎದೆಹಾಲಿಗೆ ತೆರಗಿ ಹಾಕಿ ಬಾವಿ ನೀರಿಗೆ ಬೀಗಾ ಬಿಗದವರು ಕಥಿ ಒಂದಿಲ್ಲ ಕೇಳು…
ಊಟದ ತಟ್ಟಿಗೆ ಧರ್ಮದ ಗೊಂಡೆ ಕಟ್ಟಿ ಮೂಗಿಗೆ ತುಪ್ಪಾ ಸವರ್ಯಾರ ಬೇ ಯವ್ವಾ
ಹೊಲೆಮಾದಿಗರೆಂದು ಹೊರಗಿಟ್ಟು ನಾಯಿ ನರಿಗೆ ದೇವರ ಹೆಸರಿಟ್ಟು ಒಳಗ ಬಿಟಕೊಂಡಿದ್ದು ಮರೆತಿ..?
‘ದೇವ’ನನ್ನ ಅವನ ಹೆಸರಲ್ಲಿ ಮಾರಾಟಕ್ಕಿಟ್ಟೊರ ದೇಶದ ಹೆಸರಲ್ಲಿ ದೇಶ ಮಾರ್ಯಾರ ಬೇ ಯವ್ವಾ