ಕಾವ್ಯ ಸಂಗಾತಿ
ಬಣ್ಣದ ವೇಷ
ಅರುಣಾ ರಾವ್
ಸಂತೆಯೊಳಗೊಂದು ಮನೆಯ ಮಾಡಿ
ಮನದೊಳಗೊಂದು ಸಂತೆ ನಡೆಸುತ್ತಾ
ಗಲಭೆ ಗದ್ದಲಗಳಿಗೇನೂ ಕೊರತೆಯಿಲ್ಲ
ಹಾರಾಟ ಚೀರಾಟ ನೋವಿನ ಚೀತ್ಕಾರ
ಕೋಪಾಟೋಪಗಳಿಗಿಲ್ಲಿ ಕೊನೆಯೆಂಬುದಿಲ್ಲ
ಇಷ್ಟಾದರೂ ಕಂಗೆಡದೆ ನುಗ್ಗಿ ಸಂತೆಯೊಳಗೆ
ಇದ್ದದ್ದರಲ್ಲೇ ಉತ್ತಮ ಸರಕನ್ನು ಆರಿಸಿ
ಎಳೆದೆಳೆದು ಚೌಕಾಸಿ ಮಾಡಿ ಮಾಡಿ
ಸಾವಿರ ತಳಮಳ ಕೋಲಾಹಲದ ನಡುವೆ
ಹಬ್ಬ ಹರಿದಿನ ಹೊಸ ಉಡುಪು ಔತಣ
ನಿತ್ಯ ಎದುರಾಗುವ ನೂರಾರು ಮುಖಗಳಿಗೆ
ಹಾಯ್ ಹಲೋ ಎಸೆಯಲೇಬೇಕಲ್ಲ
ನಗು ಪರದೆಯ ಮರೆಯಲ್ಲಿ ಕಂಡೂ ಕಾಣದಿಹ
ಮಸೆವ ಚೂರಿಯ ಮೊನಚು ಇರಿಯುತ್ತಿದ್ದರೂ
ನಯವಾಗಿ ಜಾರಿಕೊಳ್ಳಬೇಕು ರಂಗೋಲಿ ಕೆಳಗೆ
ಕೆಲಸದ ನಡುವೆ ಕಾಪಿ ಟೀ ತಪ್ಪಿಸುವುದುಂಟೇ
ಕ್ಯಾಂಟಿನಿನಲ್ಲಿ ಪರಿಚಿತರ ವದನವನ್ನರಸಿ
ಪತ್ತೆ ಹಚ್ಚಿದಾಗ ದಂತಪಂಕ್ತಿಗಳ ಪ್ರದರ್ಶನ
ಸಮುದ್ರದ ತಡಿಯಲ್ಲಿ ನಿಂತು ಕೊಂಡೇ
ನೆರೆತೊರೆಗಳಿಗಂಜದೆ ನಡೆಸಬೇಕು ನರ್ತನ
ಮುಗಿಯದು ಮನದ ವ್ಯಾಪಾರ ಸಂತೆಯಲಿ
ಮುಚ್ಚದು ಬಾಗಿಲನು ರಾತ್ರಿಗಳಲ್ಲೂ
ಚಿಂತೆಗಳ ಮೆರೆದಾಟಕ್ಕೆ ವೇದಿಕೆ ಆಗಲೆ ಸಜ್ಜು
ಮೂಕ ಪ್ರೇಕ್ಷಕನಾಗಿ ನಿಂತು ನೋಡುತ್ತಿರುವಂತೆ
ನಗಬೇಕು ಕಂಬನಿಯ ಹನಿಗಖ ಬಚ್ಚಿಟ್ಟು
ಬಳಿದುಕೊಳ್ಳಬೇಕು ಸುಖದ ಬಣ್ಣದ ವೇಷ