ಗಜಲ್

ಗಜಲ್


(‘ದ’ ಕಾರಂತ್ಯ ಕಾಫಿಯಾ ಮತ್ಲಾ ಗಜಲ್)

ಬಾಗೇಪಲ್ಲಿ

ರಾಜ ಬೀದಿಯಲಿ ಹೋಗುವಾಗ ಗೆಳೆಯನೊಬ್ಬ ಸಿಕ್ಕಿದ
ಬಹುದಿನದ ನಂತರ ಅಚಾನಕ್ ಮಾತಿಗವನು ದಕ್ಕಿದ

ಸಂಭ್ರಮಾಶ್ಚರ್ಯದಿ ನನ್ನ ಗಜಲನೋದಿದೆ ಎಂದು ಹೇಳಿದ
ವಕ್ಷಸ್ಥಳ ಜೋಳಿಗೆಯಿಂದ ಜಂಗಮವಾಣಿಯ ಹಿಡಿದು ಎಳೆದ

ಮೊದಲರಾತ್ರಿ ನೆನಪಿಸುವಂತೆ ಎರಡೂ ಕೈಬೆರಳುಗಳನು ಒತ್ತಿದ
ಮುಖಪುಟದ ಒಳಗಿನ ಕಣಜದಿಂದ ನನ್ನ ಗಜಲ ಹೆಕ್ಕಿ ತೆಗೆದ

ಎಷ್ಟನೇ ಬಾರಿಯೋ ಏನೋ! ಸುಲಲಿತವಾಗಿ ಮಿಶ್ರಗಳ ಓದಿದ
ಹಿರಿದು ಹಿಗ್ಗುವೆನೆಂದು ಇರಬಹುದು ಬುದ್ದಿವಂತ ನೆಂಬ ಬಿರುದ ನೀಡಿದ

ಅವನ ಚಿತ್ತದಿ ಅದು ‘ಬುದ್ಧಿವಂತ’ ನೆಂದೆಣಿಸಿ ಆವನು ಆಡಿದ
ಬುದ್ಧಿಸಾಲದೆನಗೆ ಕೃಷ್ಣಾ ಸಹೃದಯಿ ಮನಜನಾಗಿಸು ಬೇಡುವೆ ನೋವಿಂದ .

(ಬುದ್ದಿವಂತ; ಫನಲ್ ,ಆಲಿಕೆ
ಬುದ್ಧಿವಂತ ಜಾಣ,ಚತುರ
ಸಹೃದಯಿ; ಹೃದಯವಂತ
ಎಂಬ ಅರ್ಥದಿ ಬಳಸಿದೆ.ಒಂ
ದನುಭವವ ಗಜಲಾಗಿಸಿದೆ)


Leave a Reply

Back To Top