ಕಾವ್ಯ ಸಂಗಾತಿ
ಬದುಕೆಂಬ ರಂಗಸಾಲೆ
ಎಸ್ ನಾಗಶ್ರೀ
ಮುಂಚೆ ಪರದೆಯ ಮೇಲೆ
ಬೆಳಕಿನ ಗೊಂಚಲಾಗಿ
ಸಭೆಯೊಳಗೆ ಸೆಳೆವ
ಸಹಜ ಸುಂದರಿಯಾಗಿ
ಇನ್ನೂ ಅನುಭವಕ್ಕೆ ಬರದ ಪಟ್ಟುಗಳನು
ಅಭಿನಯದ ಮಾಯಕದಲ್ಲಿ
ಸಂಭಾಷಣೆಯ ಏರಿಳಿತದಲ್ಲಿ
ದಾಟಿಸಿ
ಬಾಗಬೇಕೆನಿಸುತ್ತಿತ್ತು
ಚಪ್ಪಾಳೆಗೆ ಚೆಲುವಾಗಿ
ಚೆಂದ ಚೆಂದದ ವೇಷ
ಆಗಸಕ್ಕೆ ದಿಟ್ಟಿ ನೆಟ್ಟು
ಒಂದೇ ಕಣ್ಣಲ್ಲಿ ನೀರು ತುಳುಕಿಸುತ್ತಾ
ಮಾತನೊಪ್ಪಿಸುವ ಕೆಲಸ
ಎಷ್ಟು ಮೆಚ್ಚಾಗುತ್ತಿತ್ತು
ಬಾಲ್ಯದ ಹುಚ್ಚಾಗಿತ್ತು
ಈಗ
ರಂಗವೆಂಬುದು ಮನೆಯ ಹಜಾರಕ್ಕೇ ಬಂದ ಭಾವ
ಅನುದಿನದ ಓಟದಲಿ
ಅಂತರಂಗದ ಮಾತಾಗುವುದು
ಚೆಂದ ಅಲಂಕರಿಸಿ
ಕನ್ನಡಿ ಇಣುಕುವುದು
ಆಡಬೇಕಿದ್ದ ಮಾತುಗಳನ್ನು
ಸಿಗ್ನಲ್ಲಿನಲ್ಲಿ ಕೆಂಪು ಹಳದಿ
ನೋಡುತ್ತಾ ನಿಂತಾಗ
ಬಸ್ಸಿನ ಕಿಟಕಿ ಬದಿ ಉಸ್ಸೆಂದು
ಕುಳಿತಾಗಷ್ಟೇ ತಿರುವಿ
ಮುಚ್ಚಿಟ್ಟು ಬದುಕುವಾಗ
ಕಣ್ಣು, ಮೂಗು, ಬಾಯಿ ಚಲನೆ
ಹೇಳಲಾಗದ ಎಲ್ಲವನ್ನೂ
ವಹಿಗೆ ತುಂಬಿ
ಖಾಲಿ ಹಾಳೆಯ ಮೇಲಿಟ್ಟಿದ್ದೇನೆ
ಬರೆಸಿಕೊಂಡ ಪ್ರತಿ ಸಾಲು
ಸುಖಿಸುತ್ತವೆ
ಬದುಕಿನ ರಂಗಮಂಚದ ಮೇಲೆ
ಮಜಬೂತಾಗಿ ಕಂಡು
ಪಾತ್ರದೊಳಗಿನ ಮಾತು
ಕರಗುವ ಮುನ್ನ
ಸೆರೆಯಾಗುವ ಸವಾಲು
ಇಲ್ಲಿಯೂ ಉಂಟು
ಅವರದಲ್ಲದ ಪಾತ್ರವಹಿಸಿ
ಒಳಗಿನ ಖಾಲಿ ತುಂಬುವ ಕೆಲಸ
ಬರಿ ನಟನೆಯಲ್ಲ
ಬದುಕು ಅಷ್ಟು ಸರಳವಲ್ಲ
ಚೆನ್ನಾಗಿದೆ
ಧನ್ಯವಾದಗಳು