ಕಾವ್ಯ ಸಂಗಾತಿ
ಬಣ್ಣದ ಎಲೆ
ಅನಸೂಯ ಜಹಗೀರದಾರ
ಆಗ…,
ಬೆರಳಿಗೆ ಬೆರಳು ಹೊಸೆದು
ನನ್ನ
ಅಂಗೈ ಹಿಡಿದಿದ್ದೆ ನೀನು
ಅದೆಂತಹ ಭದ್ರತೆಯ ಭಾವ..
ಒಳ ಮಿಡಿತ..!
ಆಗಾಗ…,
ಹಸ್ತ ಬಿಡಿಸಿ
ದಣಿದ ರೇಖೆಯ ಸವರಿ
ಎದೆಗೊಮ್ಮೆ ತುಟಿಗೊಮ್ಮೆ
ಒತ್ತಿಕೊಳ್ಳುತ್ತಿದ್ದೆ
ನಿನ್ನ ಬಿಸಿಯುಸಿರಿನ
ನವಿರು ಕಂಪು
ಮೈ ಮನವ ಬಿಸಿಯಾಗಿಸುತ್ತಿತ್ತು
ಅಂಗೈ ನೀರು ನೀರಾಗುತ್ತಿತ್ತು
ಬರ ಬರುತ್ತ..,
ತೋರುಬೆರಳಿಗೆ ಬಂದೆ
ನನಗೂ ಒಮ್ಮೊಮ್ಮೆ
ಆ ಹಿಡಿತ
ಶಿಥಿಲವೆನಿಸುತ್ತಿತ್ತು
ಮೈ ಬೆವರುತ್ತಿತ್ತು..!
ಈಗೀಗ.. ಅನಿಸುತ್ತದೆ ನನಗೆ
ಹೀಗೆ
ಬಣ್ಣದ ಎಲೆಗಳ
ಬೆನ್ನು ಹತ್ತಿ ನಡೆದೆವೆ ನಾವು
ನೆರಳ ಹಿಡಿವ ಓಟದಲಿ..!!
ನೆರಳು ಬಣ್ಣದ ಎಲೆ
ವಸಂತದಲ್ಲೂ ಶಿಶಿರದ ನೆನಪು..!!
Thanks sir..!
ಚೆನ್ನಾಗಿದೆ ಕವಿತೆ.