ಕಾವ್ಯ ಸಂಗಾತಿ
ವಿಶ್ವ ಗುಬ್ಬಚ್ಚಿಗಳ ದಿನ
ಕಮಲಾ ರಾಜೇಶ್
ಗುಬ್ಬಿಮರಿಯನು ಕಂಡು ಮನದಿ ಸಂತಸಗೊಂಡು
ಹಬ್ಬಿರುವ ಬಳ್ಳಿಯನು ನೋಡುತಿರಲು
ಸುಬ್ಬ ಹತ್ತಿರ ಬಂದು ಕಾಳುಕಡ್ಡಿಯ ಇಡಲು
ಹಬ್ಬದೌತಣವದುವೆ ಕಮಲಾತ್ಮವೆ
ಎಲ್ಲಿ ಹುಡುಕಲಿ ಇಂದು ಗುಬ್ಬಚ್ಚಿಮರಿಗಳನು
ಬಲ್ಲಿದರು ಕೊಂದು ಗಳಿಸಿದರು ಹಣವ
ಎಲ್ಲೆ ಮೀರುತ ನಡೆಯೆ ಧರೆಗಿಲ್ಲ ಉಳಿಗಾಲ
ಎಲ್ಲವನು ರಕ್ಷಿಸಿರಿ ಕಮಲಾತ್ಮವೆ
ನೀರು ಇಲ್ಲದೆ ಸೊರಗುತಿರೆ ಗುಬ್ಬಿ ಸಂಕುಲವು
ನೀರಿತ್ತು ಉಪಚರಿಸಿ ಗುಬ್ಬಿಗಳಿಗೆ
ಸಾರವನು ತುಂಬಿದರೆ ಪಕ್ಷಿಗಳ ಬಳಗಕ್ಕೆ
ರಾರಾಜಿಸುವುದು ಜಗ ಕಮಲಾತ್ಮವೆ
ಬಿಸಿಲ ಬೇಗೆಯು ಹೆಚ್ಚಿ ನಶಿಸುತಿವೆ ಗುಬ್ಬಚ್ಚಿ
ಸಸಿ ನೆಟ್ಟು ಗಿಡಗಳಿಗೆ ನೀರನುಣಿಸಿ
ಸಸಿಯು ಹೆಮ್ಮರವಾಗಿ ಆಶ್ರಯವ ನೀಡಿದರೆ
ವಸುಧೆ ತಣಿವುದು ಸತ್ಯ ಕಮಲಾತ್ಮವೆ
ಮರವ ಕಡಿದರು ಜನರು ತಂಪು ಜಾರಿತು ಇಳೆಗೆ
ಹರುಷ ಸರಿಯುವುದು ಕಲಿಗಾಲ ಜನಕೆ
ಮರಗಿಡವ ರಕ್ಷಿಸಲು ಪಕ್ಷಿಗಳಿಗಾಶ್ರಯವು
ಅರಿತು ನಡೆ ನೀನಿದನು ಕಮಲಾತ್ಮವೆ
ಹಕ್ಕಿಗಳು ತಿನ್ನಲಿಕೆ ಆಧಾರವೆಲ್ಲಿಹುದು
ಅಕ್ಕಿ ಚೆಲ್ಲುವ ಜನರು ಕಾಣಸಿಗರು
ಅಕ್ಕರೆಯ ಸಿಂಚಿಸುತ ಪಕ್ಷಿಗಳ ಸಂಕುಲಕೆ
ಅಕ್ಕಿರಾಗಿಯ ಹಾಕಿ ಕಮಲಾತ್ಮವೆ
ಮಹಡಿ ಮೇಲ್ಗಡೆ ಈಜುಕೊಳವನ್ನು ನಿರ್ಮಿಸುತ
ಕಹಿಯ ಉಣಿಸುವರು ಪಕ್ಷಿಗಳ ಕುಲಕೆ
ಸಹನೆ ಮೀರಿದೆ ಮನುಜ ಪಶುಪಕ್ಷಿಗಳ ಪೊರೆದು
ಸಿಹಿಯುಣಿಸು ಕಲಿಜನಕೆ ಕಮಲಾತ್ಮವೆ
ಜನರ ದಟ್ಟಣಿ ಹೆಚ್ಚಿ ಜಾಗವನು ಕಬಳಿಸುತ
ಮನೆಯನ್ನು ಕಟ್ಟಿದರು ಮುಗಿಲೆತ್ತರ
ಜನರೆ ತುಂಬಿರುವಾಗ ಪಕ್ಷಿಗಳ ಬಳಗಕ್ಕೆ
ಕೊನೆಯದುವೆ ಎಚ್ಚರಿಸು ಕಮಲಾತ್ಮವೆ
ಪುಟ್ಟ ಹಕ್ಕಿಯು ದಣಿದು ನೆಲೆಯನ್ನು ಹುಡುಕುತಿದೆ
ಪುಟ್ಟ ಪಾತ್ರೆಯಲಿ ಜಲವನ್ನು ಇರಿಸಿ
ಪುಟ್ಟ ಹಕ್ಕಿಯು ನಲಿದು ರೆಕ್ಕೆಯನು ಬಿಚ್ಚಿದರೆ
ಗಟ್ಟಿತನ ಕಲಿಜನಕೆ ಕಮಲಾತ್ಮವೆ
ದಣಿದ ಪಕ್ಷಿಯ ಬಳಗ ಗುಟುಕು ನೀರನು ಕುಡಿದು
ಎಣೆಯುವುದು ಗೂಡು ತನ್ಮಯತೆಯಿಂದ
ಕುಣಿದು ನರ್ತಿಸೆ ಪಕ್ಷಿ ತನುಮನಕೆ ಆಹ್ಲಾದ
ಗುಣಯುತರು ಸಹಕರಿಸಿ ಕಮಲಾತ್ಮವೆ
Good