ಕಾವ್ಯ ಸಂಗಾತಿ
ನಾನು ಬಣ್ಣ ಹಚ್ಚುವುದಿಲ್ಲ
ಒಲವು
.
ಕಣ್ಣಿಗೆ ಕಾಡಿಗೆ
ತುಟಿಗೆ ಲಿಪ್ಸ್ಟಿಕ್
ಮುಖಕ್ಕೆ ಬಣ್ಣ ಹಚ್ಚುವುದಿಲ್ಲ
ಸುಳ್ಳಿಗೆ ಸತ್ಯದ ಲೇಪನ
ಬಳಿಯುವುದಿಲ್ಲ
ಬಣ್ಣಗಳ ಸೆಳೆತವಿಲ್ಲ
ಮೋಸಗಾರರ ಮುಂದೆ
ನಿಂತು ಮುಗುಳ್ನಗುವುದಿಲ್ಲ
ಬೆಡಗು, ಬಿನ್ನಾಣ
ವಯ್ಯಾರ, ಮೃದುತ್ವಗಳಿಂದ
ಬೆನ್ನು ಹತ್ತುವಂತೆ ಮಾಡುವುದಿಲ್ಲ
ಸತ್ಯ, ನ್ಯಾಯ, ನಿಷ್ಠೆಯೇ
ಧರ್ಮ,ಜಾತಿ, ಉಸಿರು.
ಬಣ್ಣಕ್ಕೆ, ಬಣ್ಣ ಹಚ್ಚಿ
ಬಣ್ಣದ ಕಳೆಯ ಕಳೆಯುವುದಿಲ್ಲ
ಬಣ್ಣ ಇಲ್ಲದೆ ಬದುಕುವಾಸೆ
ನಿಮ್ಮದು
ಬಣ್ಣ ಬಣ್ಣದ ಈ ಲೋಕದಲ್ಲಿ
ಕಣ್ಣು ಮುಚ್ಚಿ ನಡೆಯುವುದಾದರೂ ಹೇಗೆ
ಮೋಸ ಹೋದ ಮೇಲೆ ತಾನೆ
ಮೋಸಗಾರಿಕೆ ತಿಳಿಯುವುದು!
ಬಣ್ಣ ಹಚ್ಚದೆ
ನಾಲಿಗೆ ಕಚ್ಚದೆ
ನಡೆಯುವುದೇನು ಹಗುರವೆ?
ದಾರಿಯಲ್ಲುಂಟು
ಮುಳ್ಳು ಕಲ್ಲು!
ಕಡು ನಿಡಿದು ದಾರಿ
ನೀನಾಯ್ದು ಕೊಂಡುದು
ಬಸವಳಿದರಿಲ್ಲ ಬೊಗಸೆ ನೀರು
ಕನಲಿ ಕೊಸರಿದರೆ
ಉಸಿರು ನಿಲುವುದು!
ವ್ಯಸನವಿಲ್ಲದೆ
ಕಸುವು ಕೊನೆಗಾಣಿಸದೆ
ನಡೆ ಮುಂದೆ
ನಡೆ ಮುಂದೆ
ನುಗ್ಗಿ ನಡೆ ಮುಂದೆ
ಎದೆ ಗುಂದದಂದು
ಹೂ ತರುವೆ
ಹುಲ್ಲನೆಂತೂ ತಾರೆ!
-Shantalingappa Patil