ಬುದ್ಧನ ಧ್ಯಾನದಲ್ಲಿ…

ಕಾವ್ಯ ಸಂಗಾತಿ

ಬುದ್ಧನ ಧ್ಯಾನದಲ್ಲಿ

ಬಿ.ಶ್ರೀನಿವಾಸ

೧.

ತೊಡಲೇಬೇಕು ಎಂದು
ಅವನ ನಗುವನ್ನು ಧರಿಸಿದೆ
ಜಗತ್ತು ಬೆಳದಿಂಗಳಮಯವಾಯಿತು.

೨.

ಅವನ
ಹೆಜ್ಜೆಯನರಸುತ್ತಾ ಹೋದೆ
ದೂರವಾಗುತ್ತ ಹೋಯಿತು ಯುದ್ಧ ಭೂಮಿ.

೩.

ಅರ್ಧನಿಮೀಲಿತ ನೇತ್ರಗಳಿಗೆ ಕಿವಿಯಾನಿಸಿದೆ
ಜ್ಞಾನ ಕಡಲಿನ ಅಲೆಗಳ ಸಪ್ಪಳ ಕೇಳಿಸಿತು‌

೪.

ಮುಗಿಬಿದ್ದ ಜನರ ನಡುವೆ
ಬಟ್ಟಲು ತುಂಬಿದ ಕರುಣೆ
ಹಂಚುತ್ತಿದ್ದ ಒಬ್ಬ,
ಯಾರೆಂದು ಕೇಳಿದೆ
ನನ್ನ ಎದೆ ತೋರಿಸಿದ!

೫.

ಈ ಕಾಲಕೆ
ಆ ದಾರಿ ಇಲ್ಲ ಎಂದರು ಕೆಲವರು.
ನಸು ನಕ್ಕನಾತ,
ನೂರಾರು ಕಾಲುದಾರಿಗಳ ತೋರಿ!


Leave a Reply

Back To Top