ಕಾವ್ಯ ಸಂಗಾತಿ
ಬರಲಿಲ್ಲ ಅವನು ಬರಲಿಲ್ಲ..
ಉಮಾ
ಕಿವಿಯ ಜುಂಕಿ ಕಾಯುತ್ತಿತ್ತು
ಅವನು ಸವಿಯ ಮುತ್ತಿಗಾಗಿ
ಬರಲಿಲ್ಲ ಅವನು ಬರಲಿಲ್ಲ…
ಬೆಸೆಯೆ ಕೈಯಿ ಕಾಯುತ್ತಿತ್ತು ಕುಳಿತು
ಹಸಿರು ಸಿರಿಯ ನೋಡಲೊಂದಿಗೆ
ಬರಲಿಲ್ಲ ಅವನು ಬರಲಿಲ್ಲ…
ನೂರು ಹಾಡು ಕಾಯುತ್ತಿತ್ತು
ಕಣ್ಣುಮುಚ್ಚಿ ಒರಗಿ ಕೂತು ಕೇಳೆ
ಬರಲಿಲ್ಲ ಅವನು ಬರಲಿಲ್ಲ…
ಎದೆಯ ಗೂಡಿಲಿ ಹಣತೆ ಉರಿಯೆ
ತೈಲವೆರೆಯಲವನ ಕಾಯುತ್ತಿತ್ತು
ಬರಲಿಲ್ಲ ಅವನು ಬರಲಿಲ್ಲ…
ಮುಡಿಯ ಹೂವು ನಲುಗಿ
ಹಣೆಯ ಬೊಟ್ಟು ಕದಡೆ ಹವಣಿಸುತ್ತಿತ್ತು
ಬರಲಿಲ್ಲ ಅವನು ಬರಲಿಲ್ಲ…
ವಿರಹದುರಿಯ ತಣಿಸಿ
ಕಣ್ಣ ನೀರನೊರಸೆ
ಬರಲಿಲ್ಲ ಅವನು ಬರಲಿಲ್ಲ..