ಗಜಲ್
ವಿಜಯಲಕ್ಷ್ಮಿ ಕೊಟಗಿ,
ತನುವ ತಣಿಸಬೇಕು ಸುರತದೊಳು ಮನವ ಮಣಿಸಬೇಕು ಪ್ರಿಯ
ತಣ್ಣೀರ ತಣಿಸಿದಂತೆ ದಳ್ಳುರಿಯ ದಾಹ ದಹಿಸಬೇಕು ಪ್ರಿಯ/
ಅನುಭವ ದಕ್ಕಲು ಮಾರನೊಡನಾಟದಿ ಭಾವ ಉಕ್ಕೇರಬೇಕು
ರತಿ ಮನ್ಮಥರು ಪ್ರಣಯದಲಿ ಮಿಂದು ಕುಣಿದು ದಣಿಯಬೇಕು ಪ್ರಿಯ/
ಅಂಗಾಂಗ ಆವರಿಸುವ ಅನಂಗನಿರಲು ಅವನಿಯೊಳು ಅನವರತ
ವಿರಹದುರಿಗೆ ಮದ್ದು ಶೃಂಗಾರ ರಸವೆಂದು ಅರಿಯಬೇಕು ಪ್ರಿಯ /
ಉದರಾಗ್ನಿಗೆ ಕವಳವು ಹಿತವಾದಂತೆ ಬಯಕೆಗೆ ಮಿಥುನ ಶಮನವು
ಅಗ್ನಿಶಾಂತಿಗೆ ಹವಿಸ್ಸಿನ ಪೂರ್ಣಾಹುತಿ ಅರ್ಪಿಸಬೇಕು ಪ್ರಿಯ/
ಸೃಷ್ಟಿರಥಿಕ ಮದನನೆಸೆದ ಸುಮಶರದಿ ವಿಜಿಯೊಳಗೇನೋ ಪುಳಕ
ಮನಸಿಜ ವೇದನೆಯ ಕಾಮರೂಪಿಯ ಹನನವಾಗಬೇಕು ಪ್ರಿಯ. /
ಧನ್ಯವಾದ ಸರ್