ಮುಖವಾಡಗಳು

ಕಾವ್ಯ ಸಂಗಾತಿ

ಮುಖವಾಡಗಳು

ದೇವರಾಜ್ ಹುಣಸಿಕಟ್ಟಿ

ನ್ಯಾಯ ದೇವತೆಯ
ಕಣ್ಣಿಗೆ ಪಟ್ಟಿ ಕಟ್ಟಿದರ ಅರ್ಥ
ತಪ್ಪಾಗಿ ತಿಳಿದಿರಬೇಕು…
ಮೆದುಳಿಗೆ ಮುಸುಕೆ ಎಳೆದಿರಬೇಕು…
ಚಿತ್ತಾರವಿರುವ ಎತ್ತರದ ಕುರ್ಚಿಯ
ಕನಸ ಬಕ್ಷಿಸಗೆ ಪಡೆದಿರಬೇಕು….
ಕೊಡು ಕೊಂಡುಕೊಳ್ಳುವ
ವ್ಯವಹಾರ ಈಗ ನ್ಯಾಯ ದೇವತೆಯ
ದಲ್ಲಾಳಿಗಳಂಗಳದಲ್ಲಿ ನುಸುಳಿರಬೇಕು…..

ಇಗೀಗ ಎಲ್ಲವೂ ಮಾರಾಟಕ್ಕಿದೆ
ಸಾಕ್ಷಿ ಕೊರತೆಯೇ ಬಂಧು…
ಎದೆ ಬಗೆದವ ನಿರಪರಾಧಿಯೆಂದು
ಹೇಳಿದ್ದು ಹೊಸತೇನಲ್ಲ ಇಂದು…
ಸಂವಿಧಾನದಡಿಯೇ ಸಂ – ವಿಧಾನದಿ
ನಿಧಾನದಿ ಅದನ್ನೇ ಕೊಂದು…
ಐತಿಹಾಸಿಕವೆಂದು ಬರೆದುಬಿಡುವ
ತೀರ್ಪುಗಳು ಸಾವಿರವಿಂದು..

ಹೀಗೆಲ್ಲ ಸೊಲ್ಲ ಎತ್ತದಿರಿ
ಬರೆಯದಿರಿ….
ನಿಂದನೆಯಾದೀತು ದೇವತೆಯ
ಅಂಗಳದಿ ನಿಲ್ಲುವಿರಿ…
ಎಚ್ಚರಿಕೆಯ ಕರೆ ಗಂಟೆ ನೂರೆಂಟು
ಕಾಯಂ ಹಿಂಡಲಗಾ ಮರೆಯದಿರಿ…

ಬೆದರಿಕೆಯ ಸಂದೇಶ ಹೊಸ್ತಿಲ
ಬಳಿ ನುಸುಳಿರಲು ಪ್ರಶ್ನೆಯೊಂದು ಕಾಡಿತ್ತು……!
ಮುಖವಿಷ್ಟು ಬಾಡಿತ್ತು…!
ಹೃದಯದ ಕೋಣೆಯಲಿ
ವೇದನೆಯ ಹಾಡಿತ್ತು……!

ತೀರ್ಪು ಬರೆದವರು ತೊಟ್ಟ
ನಕಾಬುಗಳು ಯಾವವು…..?
ಬಿಕರಿಗಿರುವ ಕಿತಾಬಿನ ಕಲಂಗಳಾವವು……?
ಹೇಳು ಅಂಬೇಡ್ಕರ್ ನಿನ್ನ ಹೆಸರಲ್ಲೇ
ನಿನ್ನಾಶಯವ ಕೊಂದ ಭಾರತದ
ಮುಖವಾಡಗಳು ಯಾವವು…!?


Leave a Reply

Back To Top