ಅಂಕಣ ಸಂಗಾತಿ
ಬೀಳುವುದು ಸಹಜ.
ಮುಂದಿಂದು..
ಇಗೋ ಹೊಡೆತಕ್ಕೆ ನಿಲ್ಲಿಸಿದ್ದೆ ಹೋದವಾರ–
ಮನುಷ್ಯನಿಗೆ ತನಗೆ ತಿಳಿದೊ ತಿಳಿಯದೆಯೊ ಒಳಗೆ ಒಂದು ಅಹಂಕಾರದ ತೆಳು ಪೊರೆ ಬೆಳೆದುಬಿಟ್ಟಿರುತ್ತೆ. ಅದ ಕಾರಣ ತಾನು ಇಂತವಳು/ನು, ತಾನು ಇಂತವರ ಮಗ/ಮಗಳು, ತನಗಿರುವ ಅಂದ, ಅಂಗಾಂಗ, ನೌಕರಿ, ಸ್ಯಾಲರಿ ಇತ್ಯಾದಿ ಯಾವುದೆ ಕಾರಣಕ್ಕೊ ಇರಬಹುದು. ನನ್ನ ಕಾಲ್ಬೆರಳು ನಾ ಹೇಳಿದಂತೆ ಕೇಳದೆ ಮೊಂಡಾಟ ಮಾಡುವಾಗ ನಾವು ಎಷ್ಟು ಅಹಂಕಾರಿಗಳು ಗಂಡ, ಮಕ್ಕಳು, ಸಹೋದ್ಯೋಗಿಗಳು, ಸ್ನೇಹಿತರು ಎಲ್ಲ ನಮ್ಮ ಮಾತು ಕೇಳ್ತಾರೆ ವ ಕೇಳ್ಬೇಕು ಅನ್ನೊ ಬಿಂಕ ಬೆಳೆಸಿಕೊಂಡು ಇಲ್ಲಿತನಕ ಬಂದ ನಮಗೆ ಇಂತ ಇಗೋ ಹೊಡೆತ ಕಲಿಸೊ ಪಾಠ ಸಣ್ಣದೇನಲ್ಲ. ಕಣ್ಣೀರು ತಂತಾನೇ ಮೆಲ್ಲನೆ ಗಲ್ಲದ ಇಳಿಜಾರಲ್ಲಿ ಇಳಿವಾಗ ಯಾರು ನೋಡಬಾರದೆಂಬ ನಾಚಿಕೆಗೆ ಪಟ್ಟಂತ ಕೈ ಕೆನ್ನೆಗೆ ಹೋಗಿದ್ದಂತು ನಾಚಿಗ್ಗೇಡು.
ಕುಣಿದು ಕುಪ್ಪಳಿಸೊ ನವಿಲು ತನ್ನ ಕಾಲು ನೋಡಿ ತಾನೆ ಅಳವಂತಿತ್ತು ನನ್ನ ಅಳು ಆಸ್ಪತ್ರೆಲಿ. ಇದನ್ನ ಗಮನಿಸಿದ ಹಿರಿಯಕ್ಕನಂತ ಸಿಸ್ಟರ್ ಕೈಲೊಂದು ಕ್ಲಿಪ್ ಬೋರ್ಡ್ ಹಿಡಿದು ನೀವು ಇನ್ನೊಮ್ಮೆ ನೀರು ಕುಡಿರಿ ಒಂದಿಷ್ಟು ಪ್ರಶ್ನೆ ಕೇಳಬೇಕು ಅಂತ ನನ್ನ ಮನಸ್ಸನ್ನ ಒಂದಿಷ್ಟು ಕಾಲಿನಿಂದ ಆಚೆ ಕಿತ್ತು ಈಚೆಗೆ ವಾಲಿಸಿದ್ರು. ಏನ ಪ್ರಶ್ನೆ ಅಂತ ಕಣ್ಣಲ್ಲೆ ಕೇಳಿದೆ ..
ಗಾಡಿ ಹ್ಯಾಗ ಬಿತ್ತು ಅಂದ್ರು, ಎದುರುಗಡೆ ಕಾರ್ ಬಂತು ನಾನು ಎಡಕ್ಕ ತಗೊಂಡೆ ಅಲ್ಲಿ ಯಾವ್ದೊ ಗಾಡಿಯ ಆಯಿಲ್ ಸೋರ್ಕೊತ ಹೋಗಿತ್ತ ಬಹುಶಃ ಸ್ಕಿಡ್ ಆಯ್ತು ಬಿದ್ದೆ ಅಂದೆ.. ನೆನಪು ಮಾಡ್ಕೊಳಿ ಎದುರು ಗಡೆ ಬಂದ ಕಾರ್ ಗೂ ನಿಮ್ ಗಾಡಿಗೂ ಟಚ್ ಏನಾದ್ರೂ ಆಯ್ತಾ ಅಂತಾ ಉಹುಂ ಇಲ್ಲ ಅಂದೆ ಅದನ್ನ ಮತ್ತೆ ಮತ್ತೆ ಕನ್ಮರ್ಫ್ ಮಾಡ್ಕೊಂಡ್ರು ಇನ್ಸುರೆನ್ಸ್ ಏನಾದ್ರು ಕ್ಲೇಮ್ ಮಾಡಬೇಕಾ ನೀವು ಅಂದ್ರು ಉಹುಂ ಬೇಡ ಅಂದೆ ಸರಿ ಹಂಗಿದ್ರೆ ಏನೂ ಕ್ಲೇಮ್ ಆಗಲ್ಲ ನೋಡಿ ಅಂದ್ರು ತುಂಬ ಸ್ಪಷ್ಟವಾಗಿ ಏನೂ ಬೇಡ ನೀವು ಬೇಗ ನನ್ನ ಕೈಬಿಟ್ರೆ ಆಫಿಸ್ ಹೋಗ್ತಿನಿ ಅಲ್ಲಿ ಇವತ್ತ ಒಬ್ರ ಆಗಲೇ ರಜೆ ಇದಾರೆ ಅಂದೆ,ತುಸು ಸಿಟ್ಟಿಲೇ ನೋಡಿದ ಸಿಸ್ಟರ್ ಆಫಿಸ್ ಅಲ್ಲ ನೀವಿಗ ಹಾವೇರಿ, ಹುಬ್ಳಿ ಇಲ್ಲಾ ಸಿರಸಿ ಹೋಗಬೇಕು ಕಾಲು ಒಳಗೆ ಫ್ರ್ಯಾಕ್ಚರ್ ಆದಂಗಿದೆ. ಅಂತಿದ್ದಂಗೆ ಪತಿ ಪ್ರವೀಣ ಬಂದ್ರು ಏನಾತು ಅಂದ್ರು ಏನಿಲ್ಲ ಅಂದೆ. ಸಿಸ್ಟರ್,ಡಾಕ್ಟರ್, ಪ್ರವೀಣ, ನಾಯಕ ಮಾಸ್ತರ್ ಇವರೆಲ್ಲರ ನಡುವೆ ಒಂದಿಷ್ಟ ಮಾತುಕತೆ ಆಯ್ತು. ಕಡೆಗೆ ಸಿರಸಿ ಮಧುಕೇಶ್ವರ ಅನ್ನೊ ಡಾಕ್ಟರ್ ಹತ್ರ ಕರ್ಕೊಂಡು ಹೋಗೊ ತೀರ್ಮಾನ ಮಾಡಿ ಏನಪಾ ಹುಬ್ಳಿ ಹೋಗುಣ ಏನ ಸಿರಸಿ ಹೋಗುಣ ಅಂತ ನನ್ನೆದುರು ಸವಾಲೆಸದು ನಿಂತ್ರು ನಿನಗ ರಜೆ ಸಿಕ್ತೇನು ಅಂದೆ ರಜದ್ದ ಬಿಡು ಇಲ್ಲಿ ಆರ್ಥೊ ಇಲ್ಲಂತ ಬೇಗ ಹೇಳು ಅಂತಿದ್ದಂಗೆ ನಾನು ಮನಸ್ಸೊಳಗ ಕೋವಿಡ್ ಪ್ರಕರಣಗಳು ಮತ್ತೆ ದಾರಿ ಎಷ್ಟ ದೂರ ಮರಗಳೆ ಇಲ್ಲದ ಬೀಕೋ ಅನ್ನೊ ಪೂನಾ ಬೆಂಗಳೂರು ರೋಡು,ಮತ್ತೆ ಸಿರಸಿ ದಾರಿಯ ಚೆಲುವು ಎಲ್ಲಾ ಲೆಕ್ಕಾಚಾರ ಹಾಕಿ ಸಿರಸಿ ಅಂದೆ. ಸಿಸ್ಟರ್ ಬಂದು ಆಂಬ್ಯುಲೆನ್ಸ್ ಕಳಸ್ತೀನಿ ಅಂದ್ರು. ನಾವು ನಮ್ಮ ಗಾಡಿಲೆ ಹೋಗ್ತೀವಿ ಅಂದೆ. ಸುಜಾತಕ್ಕನು(ಪ್ರವೀಣನ ಅಕ್ಕ) ಶಾಲೆ ಬಿಟ್ಟು ಬಂದಿದ್ಲು ಮಾವ ಅಂದ್ರ ಪ್ರವೀಣ ತಂದೆ ಮಗನ್ನ ಪಕ್ಕಕ್ಕ ಕರ್ಕೊಂಡ ಹೋಗಿ ಏನೋ ಮಾತಾಡ್ತಿದ್ರು ಏನಪ್ಪಾ ನನ್ನ ಬ್ಯಾಗಲ್ಲಿ ದುಡ್ಡೈತಿ ಕಾಮಾಕ್ಷಿ ಹಾರ್ಡವೇರ್ ಅಂಗಡಿಯವರಿಗೆ ಕೊಡೊಕಂತ ವಿತ್ಡ್ರಾವಲ್ ಹಾಕಿದ್ದು ಹಂಗೆ ಇದೆ ಅಂದೆ ಸರಿ ಅಂದ್ರು ಇವರು ಅಲ್ಲಿಂದಲೇ. ಯಾರ್ಯಾರ ಹೋಗೊದು ಅನ್ನೋದು ಡಿಸೈಡ್ ಆಯ್ತು .
ಹೋಗೊವಾಗ ಹೇಂಗೆಂಗೊ ಆಸ್ಪತ್ರೆ ಒಳಗ ಬಂದಬಿಟ್ಟಿದ್ದೆ ಆದ್ರೆ ಹೊರಗೋಗೊ ಅಷ್ಟೊತ್ತಿಗೆ ಕಾಲು ಹರತಾಳಕ್ಕ ಕೂತಬಿಟ್ಟಿತ್ತು ಒಂದು ವ್ಹೀಲ್ ಚೇರ್ ಮೇಲೆ ಸವಾರಿ ಹೊರಟ್ತು. ಕಾರಲ್ಲಿ ಕೂಡಸೋಕೆ ಒಂದಹತ್ತು ನಿಮಿಷಾನೆ ಬೇಕಾಯ್ತು. ಹಿಂದೆ ನಾನು ಸುಜಾತಕ್ಕ ಮುಂದೆ ಪಪ್ಪಾ ನಾಯಕ ಮಾಸ್ತರ. ಥೇರು ಊರಬೀದಿ ಸೀಳಿಕೊಂಡು ನಾಲ್ಕರ ಕತ್ರಿ ದಾಟಿಕೊಂಡು ಸಮ್ಮಸಗಿ ಹತ್ರತ್ರ ಬಂದ್ರು ಒಬ್ಬರ್ದು ಮಾತಿಲ್ಲ ಕತಿಯಿಲ್ಲ. ಸಿಟ್ಟ ಬಂತು ಏ ಡ್ರೈವರ್ ತಮ್ಮಾ ಹಾಡಾದ್ರು ಹಾಕಪಾ ಅಂದೆ ಪ್ರವೀಣ ಪಕ್ಕದಲ್ಲಿದ್ದ ಮೇಷ್ಟ್ರು ಇಷ್ಟ ನೋವಲ್ಲಿ ನಿಂಗ ಹಾಡ ಕೇಳಬೇಕ ಅನಸ್ತತೇನವಾ ಅಂದ್ರು.. ಜನ ಹೆಣ ಒಯ್ಯೋವಾಗ್ಲೆ ಡ್ಯಾನ್ಸ್ ಮಾಡ್ಕೋತ ಹೊಕ್ಕಾರ ನೀವೆನ ಒಂದು ಪೇಷಂಟ್ ಗೆ ಎಲ್ಲಾ ಈ ಪರಿ ಮುಖ ಊದಸ್ಕೊಂಡ ಕೂತಿರಿ ಅಂತ ಜೋರ ಮಾಡಿದೆ ಮುಂದ ಪ್ರವೀಣ ಮತ್ತ ಹೆಚ್ಚ ಮಾತಾಡಿದ್ರ ಈಕಿ ತನಗೂ ಮಂಗಳಾರತಿ ಮಾಡ್ತಾಳಂತ ತಿಳದ ಪಟ್ಟಂತ ಆಡಿಯೊ ಬಾಕ್ಸ್ ಆನ್ ಮಾಡಿದ ಅದರ ತುಂಬ ನನ್ನ ಪ್ರವೀಣನ ಪೇವರೆಟ್ ಸಾಂಗಗಳು ಕೇಳ್ಕೊತ ಸಿರಸಿ ರೋಡು ಅಲ್ಲಲ್ಲಿ ರಿಪೇರಿಯಾದದ್ದರ ಕುರಿತು ಮಾತಾಡ್ಕೊತ ಹೋದ್ವಿ ಇವರ್ಯಾರು ಒಂದ್ಮಾತು ಹೆಂಗ ಬಿದ್ದಿ ಅಂತ ಕೇಳಲಿಲ್ಲ. ನನಗ ಆಶ್ಚರ್ಯ ಯಾಕಿವರೆಲ್ಲ ಸುಮ್ಮನದಾರ ಇಂಟರಾಗೆಟ್ ಯಾಕ ಮಾಡ್ತಿಲ್ಲ ಅಂತಾ. ಇಷ್ಟರಲ್ಲೆ ನನಗ ಹಾನಗಲ್ ಆಸ್ಪತ್ರೆಲಿ ಟ್ರೀಟ್ ಮಾಡಿದ ಮಾದರಿ ನನ್ನೊಳಗೆ ಏನೋ ಯೋಚನೆ ಮಾಡೊಕೆ ಹಚ್ಚಿತ್ತು – ಅವರೆಲ್ಲ ನನ್ನ ಅದೆಷ್ಟ ಚೆಂದ ಟ್ರೀಟ್ ಮಾಡಿದ್ರು ಶುಭ್ರ ಬಿಳಿ ಬಟ್ಟೆತೊಟ್ಟ ಪರಿಯರಂತೆ ಮೆಲು ಮಾತು, ನಿಷ್ಕಲ್ಮಷ ಸ್ಪರ್ಷ, ಡಾಕ್ಟರ್ ಹಣೆ ಕಾಲು ಮುಟ್ಟಿದಾಗ ಆದ ಅನುಭವ ಎಪ್ಪಾ “ವೈದ್ಯೋ ನಾರಾಯಣೋ ಹರಿಃ” ಎಷ್ಟು ಸತ್ಯ.
ಅಂತು ಸಿರಸಿ ಟಿಎಸ್ಎಸ್ ಆಸ್ಪತ್ರೆ ಬಂತು ಇಲ್ಲೂ ತುರ್ತು ಸೇವೆ ಕೊಣೆನೆ ನಮಗೆ ಸ್ವಾಗತ ಕೋರಿದ್ದು ಕಾರ್ ಇಳಿದು ಪ್ರವೀಣ ವ್ಹೀಲ್ ಚೇರ್ ಗೆ ಹೇಳಿ ಬಂದ್ರು. ಅಲ್ಲಿಂದ ವ್ಹೀಲ್ ಚೇರ್ ಜರ್ನಿ .. ಅಂತೂ ಎಮರ್ಜೆನ್ಸಿ ವಾರ್ಡ್ ನ ಕೊನೆ ಬೆಡ್ ಮೇಲೆ ನಾ. ಪ್ರವೀಣ ಸುಜಾತಕ್ಕ ನಾಯಕ್ ಸರ್ ಹಾನಗಲ್ ಆಸ್ಪತ್ರೆಯವರು ಕೊಟ್ಟ ಪ್ರೇಮ ಪತ್ರ ಹಿಡಕೊಂಡು ನನ್ನ ಇತಿಹಾಸ ಹೇಳಿ ಲೆಕ್ಕದ ಪುಸ್ತಕದಲ್ಲಿ ನನ್ನ ಪುಣ್ಯವನ್ನ ಪಾಪದಿಂದ ಭಾಗಿಸಿ ಹೊರಗ ಕೂತ್ರು ನನ್ನ ಬಳಿ ಇಬ್ರು ಬಳಕೊ ಸಿಸ್ಟರ್ಸ್ ಒಬ್ರು ಪುಟ್ಟ ಹುಡುಗಿಯಂತಾ ಡಾಕ್ಟರ್ ಆ ಡಾಕ್ಟರ್ ತುದಿಕೂದಲಿಗೆ ಮಾತ್ರ ಕೆಂಪು ಬಣ್ಣ ಹಚ್ಚಿದ್ರು ಉಳಿದ ಮೇಲಿನ ತಲೆಕೂದಲು ನಮ್ಮ ಪ್ಯೂರ್ ಇಂಡಿಯನ್ ಕೆಂಚ್ ಕೂದ್ಲು ನಾ ಇದನ್ನ ಮದ್ಲ ಧೂಳದ ಕಲರ್ ಅಂತಿದ್ದೆ ಈಗ ಸುಧಾರಸ್ಕೊಂಡು ಕೆಂಚ್ ಕೂದಲಂತ ಮಾರ್ಪಾಟು ಮಾಡಕೊಂಡಿನಿ. ಯತಾವತ್ತು ಎಲ್ಲಿ ಬಿದ್ರಿ ಹೆಂಗ್ ಬಿದ್ರಿ ಮತ್ತೊಮ್ಮೆ ಎಲ್ಲಾ ಹೇಳಿದೆ ವಾಂತಿ ಏನಾದ್ರು ಆಯ್ತಾ ಅಂದ್ರು ವಾಂತಿ ಆಗಿದ್ರೆ ಸೀದಾ ಗೈನಿಕ್ ಹತ್ರ ಹೋಗ್ತಿದ್ದೆ ಅಂತ ಪೋಲಿಜೋಕು ಹೇಳ್ಕೊಂಡು ಓಳಗೆ ನಕ್ಕೆ. ಪೋಲಿಸ್ರು ಕಳ್ಳನ್ನ ತಲಾಷ್ ಮಾಡಿದಂಗ ಇಡೀ ದೇಹ ತಲಾಷ್ ಮಾಡಿದ್ರು ಎಲ್ಲೆಲ್ಲಿ ನೋವಿದೆ ಅಂದ್ರು ಆ ಕಾಲು ಈ ಎಡಗೈ ತೋಳು ಅಂದೆ. ಎಡಗೈ ತೋಳು ಸ್ವಲ್ಪ ನೋವಿತ್ತು. ಸಿರಸಿಲಿ ನೋಡ್ಕೊಂಡಾಗ ಪೂರ್ತಿ ಹಚ್ಚಹಸಿರು ಶಬ್ಭಾಷ್ ಅಂದ್ಕೊಂಡೆ ಒಳೊಳಗೆ, ಹಾನಗಲ್‌ಲಿ ನಾರ್ಮಲ್ ಇದ್ದ ಕೈ ಇಲ್ಲಿ ಬರೋದೊರಳೊಗೆ ಹಸಿರಾಗಿದ್ದು ನೋಡಿದ್ರೆ ನಾಳೆ ಮತ್ತೆಲ್ಲೆಲ್ಲಿ ಏನೇನಾಗಿರುತ್ತೊ ಅನ್ಕೊಂಡೆ. ಒಬ್ಬ ಸಿಸ್ಟರ್ ಸಿರಂಜ್ ಹಿಡಕೊಂಡ್ ಹತ್ರ ಬಂದ್ರು. ನಾ ಹಾನಗಲ್ ಆಸ್ಪತ್ರೆಲಿ ಡೈಕ್ಲೊಫಿನ್ ಕೊಟ್ಟಾರ ಅಂದೆ. ವಾಪಸ್ ತಗೊಂಡ ಹೋದ್ರು ನನ್ನ ಅಕ್ಕ ಪಕ್ಕ ಸಿಸ್ಟರ್ ನನ್ನ ಎದುರು ಈ ಪುಟ್ಟ ಡಾಕ್ಟರ್ ಕಡೆಗೆ ನನ್ನನ್ನ ಯಾರಿಗೆ ವಹಿಸೋದು ಅನ್ನೊದು ಡಿಸೈಡ್ ಆಗಿತ್ತು ಬೇರೊಬ್ಬ ಸಿಸ್ಟರ್ ಬಂದ್ರು ಗುಂಗರ ಕೂದಲೂ ಆಕಾಶ ನೀಲಿ ಚೂಡಿದಾರ್ ಮೇಲೆ ವೈಟ್ ಏಫ್ರಾನ್ ಮೊಂಡ ಮೂಗು ಹೆಚ್ಚೆ ದಪ್ಪ ಇದ್ದರು ನೋಡಿದ ಕೂಡಲೆ ನನ್ನ ಡಿಗ್ರಿ ಕ್ಲಾಸ್ ಮೇಟ್ ಯಲ್ಲಾಪೂರದ ಜ್ಯೋತಿ ಸಿದ್ಧಿ ನೆನಪಾದ್ಲು. ಕೂದ್ಲು ಬಣ್ಣ ಎಲ್ಲಾ ಎಕ್ಸಟ್ಕ್ಲಿ ಸೇಮ್ ಟು ಸೇಮ್.
ಇವರ್ದು ಎಕ್ಸರೇ ಮಾಡ್ಸಿ ಆಮೇಲೆ ಡಾಕ್ಟರ್ನ ಕರ್ಕೊಬರ್ತೆ ಅಂತಾ ಹೇಳಿ ನನ್ನ ನೋಡಿ ಸಣ್ಣಗೆ ನಕ್ಕು ಹೋದ್ರು.
ನನ್ನನ್ನ ಬೆಡ್ನಿಂದ ಸ್ಟ್ರೆಚರ್ ಗೆ ಎತ್ತಾಕ್ಕೊಂಡು ಗಾಡಿ ಅಣ್ಣಾ ನೂಕ್ಕೊಂಡು ಎಕ್ಸರೇ ರೂಮಿಗೆ ನಡೆದ ನನ್ನೇ ದಿಟ್ಟಸ್ತಿದ್ದ ಛಾವಣಿ ನಡುವೆ ಒಡ್ಕೊತ ಹೋದೆ. ಎರಡ ನಿಮಿಷ ಹೊರಗೆ ವೇಟಿಂಗು ಅಲ್ಲಿಂದ್ ಒಳಗೆ ಸ್ಟ್ರೆಚರ್ ನಿಂದ ಎಕ್ಸರೇ ಬೆಡ್ ಗೆ ಮತ್ತಲ್ಲಿ ಒಂದಿಷ್ಟು ಘಟ್ಟದ ಕನ್ನಡ ಜೊತೆಗೆ ಕ್ಲಿಕ್ ಕ್ಲಿಕ್ ಕ್ಲಿಕ್ ಒಂದೈದು ಭಂಗಿಯಲ್ಲಿ ಆ್ಯಕ್ಷನ್ ಕಟ್ ನನ್ನ ಒಂದಿಷ್ಟು ಅಮ್ಮಾ!!! ಅಯ್ಯೋ !! ಹಾ!ಹೊ! ಉದ್ಘಾರಗಳು.
ಮತ್ತೆ ಅಗೆನ್ ಬೆಡ್ ಟು ಸ್ಟ್ರೆಚರ್, ಸ್ಟ್ರೆಚರ್ ಟು ಎಮೆರ್ಜೆನ್ಸಿ ವಾರ್ಡ್ ಬೆಡ್. ಮುಂದಿನ ಹತ್ತು ನಿಮಿಷದಲ್ಲಿ ಎಲಬಿನ ಡಾಕ್ಟ್ರು ಎಕ್ಸ ರೇ ಕಾಪಿ ಹಿಡದು ಬಂದ್ರು
ಏನ ಹೆಸರು?
ದೀಪಾ
ಏನ ಮಾಡ್ಕೊಂಡ್ರಿ?
ಗಾಡಿಯಿಂದ ಬಿದ್ದೆ.
ಆಕ್ಸಿಡೆಂಟಾ!?
ಉಹುಂ ಸ್ಕೂಟಿ ಸ್ಕಿಡ್.
ಒಂದಿಷ್ಟು ಫ್ರ್ಯಾಕ್ಚರ್ ಆಗಿದೆ.
…
ನಾನೇನು ಮಾತಾಡ್ಲಿಲ್ಲ ಈಗ.
ಡಾಕ್ಟರ್ ಪ್ರವೀಣನ್ನ ಕರ್ದು ಅವರ ಜೊತೆ ಮಾತಾಡಿದ್ರು.
ನನಗೆ ಸಣ್ಣಗೆ ನನ್ನ ಮೇಲೆ ಸಿಟ್ಟು ಶುರುವಾಯ್ತು.. ನಾನೇನ ಮಾಡ್ಕೊಂಡೆ.. ಯಾಕಾಯ್ತು !? ಹೇಂಗಾಯ್ತು!? ಬೇಕಿತ್ತಾ ಇದೆಲ್ಲಾ ಥೋ..!!!
ಮುಂದುವರೆದ ಕತೆ ಮತ್ತೆ ಹೇಳ್ತಿನಿ..
ದೀಪಾ ಗೋನಾಳ
ಕವಯಿತ್ರಿ-
ತಂತಿ ತಂತಿಗೆ ತಾಗಿ ಪ್ರಕಟಿತ ಸಂಕಲನ
ಅಂಚೆ ಇಲಾಖೆಯಲ್ಲಿ ಕರ್ತವ್ಯ.
ಊರುಕೇರಿ-ಹಾನಗಲ್ – ಹಾವೇರಿ