ಯುದ್ಧದ ಗೀಳು

ಕಾವ್ಯ ಸಂಗಾತಿ

ಯುದ್ಧದ ಗೀಳು

ಮನದೊಳಗಿನ ಯುದ್ಧಕ್ಕೆ
ಯಾವ ಶಸ್ತ್ರಾಸ್ತ್ರಗಳು ಬೇಕು?
ಶಸ್ತ್ರಾಭ್ಯಾಸ,ತರಬೇತಿಗಳು ಬೇಕು?
ಮನಸ್ಸು ತಂತಾನೇ
ಮದ್ದುಗುಂಡುಗಳನ್ನು ಅಣಿ ಮಾಡುತ್ತದೆ

ತಾನೇ ಯುದ್ಧ ಕ್ಷಿಪಣಿಯಾಗಿ ಬದಲಾಗುತ್ತದೆ
ಯುದ್ಧ ಟ್ಯಾಂಕರ್ ಗಳಲ್ಲಿ ಕೂತು
ಸವಾರಿ ಮಾಡುತ್ತದೆ
ನ್ಯೂಕ್ಲಿಯರ್ ಬಾಂಬ್
ವ್ಯಾಕ್ಯೂಮ್ ಬಾಂಬ ಗಳಾಗಿ
ಗಹಗಹಿಸಿ ನಗುತ್ತದೆ.

ಯುದ್ಧದ ಗೀಳು ಹತ್ತಿಕೊಂಡಿತೆಂದರೆ
ಮನಸ್ಸು ಯಾರನ್ನೂ
ಕಣ್ಣೆತ್ತಿ ನೋಡುವುದಿಲ್ಲ
ತನ್ನ ಹೃದಯವನ್ನು ತಾನೇ ಕೊಂದು
ಸಿಕ್ಕಸಿಕ್ಕವರನ್ನೆಲ್ಲಾ ಸುಟ್ಟು ಹಾಕುತ್ತದೆ.

ಮರುಕ ಮರೆಯಾಗಿ
ಹೃದಯ ಬರಿದಾಗಿ
ಪ್ರಕೃತಿಯ ವಿನಾಶದ
ಆಸೆ ಹುಟ್ಟುತ್ತದೆ.

ಸುಟ್ಟು ಕರಕಲಾಗಿರುವ
ದೇಹಗಳ ಕಂಡು ಶಸ್ತ್ರಾಸ್ತ್ರಗಳಿಗೆ
ಮರುಕ ಹುಟ್ಟಬಹುದು
ಆದರೆ ನಿರ್ದಯಿ ಮನಸುಗಳಲ್ಲಿ
ಒಲವಿನ ಬಲಿ ಮಾತ್ರ ಕಾಣಸಿಗುತ್ತದೆ.


ಒಲವು

Leave a Reply

Back To Top