ಕವಿ ಕಾವ್ಯ ಪರಿಚಯ

ಸ್ಮಿತಾ ಅಮೃತರಾಜ್,ಸಂಪಾಜೆ,

ಕವಿ ಪರಿಚಯ

ಶ್ರೀಮತಿ ಸ್ಮಿತಾ ಅಮೃತರಾಜ್,ಸಂಪಾಜೆ,ಗೃಹಿಣಿ ಮತ್ತು ಕೃಷಿಕ ಮಹಿಳೆ. ಲಲಿತ ಪ್ರಬಂಧ,ಕವನ ಸಂಕಲನ,ಪುಸ್ತಕ ಪರಿಚಯ ಸೇರಿದಂತೆ ಒಟ್ಟು ಏಳು ಪುಸ್ತಕಗಳು ಪ್ರಕಟಗೊಂಡಿವೆ.1.ಕಾಲ ಕಾಯುವುದಿಲ್ಲ
2.ತುಟಿಯಂಚಿನಲ್ಲಿ ಉಲಿದ ಕವಿತೆಗಳು
3.ಮಾತು ಮೀಟಿ ಹೋಗುವ ಹೊತ್ತು

(ಮೂರು ಕವನ ಸಂಕಲನಗಳು)

1.ಅಂಗಳದಂಚಿನ ಕನವರಿಕೆಗಳು
2.ಒಂದು ವಿಳಾಸದ ಹಿಂದೆ
3.ನೆಲದಾಯ ಪರಿಮಳ

(ಮೂರು ಲಲಿತ ಪ್ರಬಂಧಗಳು)

1.ಹೊತ್ತಗೆ ಹೊತ್ತು.- ಪುಸ್ತಕ ಪರಿಚಯ .

ಸ್ಮಿತಾರವರ ಕವಿತೆಗಳು

ನಡುವಿನ ವ್ಯತ್ಯಾಸ

ವರದಿಯ ಪ್ರಕಾರ ಅನಾರೋಗ್ಯದ
ಮರಣ ಗಣನೀಯವಾಗಿ
ಇಳಿಮುಖವಾಗಿದೆ
ಪ್ರತೀ ವರುಷದ ಆರೋಗ್ಯ ಇಲಾಖೆಯ
ಪ್ರಕಟಣೆ ತಿಳಿಸುತ್ತದೆ.

ನೋಡಿ! ಕೈಕಾಲು ನೆಟ್ಟಗಿದ್ದರೆ
ಸ್ವಾವಲಂಬನೆಯ ಬದುಕು
ಕಷ್ಟವೇನೂ ಅಲ್ಲ
ಗೊತ್ತಿರುವ ಸಂಗತಿ ಹೇಳಲೇನಿದೆಯೋ?
ಲಾಗಾಯ್ತಿನಿಂದ ಈ ಬಿಟ್ಟಿ ಉಪದೇಶ ಮಾತ್ರ
ಎಲ್ಲರೂ ಕಾಲಕಾಲಕ್ಕೆ ಕೊಡುತ್ತಲೇ ಬರುತ್ತಿದ್ದಾರೆ.

ಯಾರೋ ಒಂದಿಬ್ಬರ ಅಚಾನಕ್ ಸಾವಿನ
ಸುದ್ದಿಯನ್ನ ಅವರು ಅಂಗಳಕ್ಕೆ ಬಂದು
ಬಿತ್ತಿ ಹೋಗುತ್ತಾರೆ
ಆಕೆ ವಿಚಲಿತಳಾಗುತ್ತಾಳೆ
ಅಷ್ಟಕ್ಕೇ ಹಿತ್ತಲಿನ ಗಾಳಿಗೆ ಗರ ಬಡಿಯುತ್ತದೆ

ಪಡಿತರ ಚೀಟಿಯಲ್ಲಿ,ಮತದಾನದ ಪಟ್ಟಿಯಲ್ಲಿ
ಆಧಾರ್ ಕಾರ್ಡಲ್ಲಿ ಎಲ್ಲದರಲ್ಲೂ
ಅವಳ ಹೆಸರು ದಾಖಲಾಗಿದೆ ಮತ್ತು
ಅವಳಿಗೊಂದು ಸ್ಥಾನ ಮಾನ ಅಲ್ಲಿ
ಪ್ರಾಪ್ತಿಯಾಗಿದೆ.

ಅವಳು ಕಣ್ಣಿಂದ ಬಿದ್ದ ಒಂದು ಹನಿಯನ್ನ
ಪಕ್ಕನೆ ಬೆರಳ ತುದಿಗೆ ಇಳಿಸಿ ಬಿಡುತ್ತಾಳೆ ಮತ್ತೂ
ಅವರು ಕರುಬುವಷ್ಟು ಚೆಂದಕ್ಕೆ ನಗುತ್ತಾಳೆ
ನಕ್ಕೂ ನಕ್ಕೂ ಕಣ್ಣಿಂದ ನೀರಿಳಿಸಿ ಕೊಳ್ಳುತ್ತಾಳೆ.

ನಿಜಕ್ಕೂ ನಾನಿನ್ನೂ ಬದುಕಿರುವೆನಾ…
ಒಮ್ಮೊಮ್ಮೆ ಆಕೆ ಚಿವುಟಿಕೊಳ್ಳುತ್ತಾಳೆ
ಆದರೂ ಬದುಕುವುದು,ಸಾಯುವುದು
ಇದರ ನಡುವಿನ ವ್ಯತ್ಯಾಸ ತಿಳಿಯದೆ
ಅನಾದಿಯಿಂದ ದೀರ್ಘ ಉಸಿರೆಳೆದು ಖಾತ್ರಿ ಪಡಿಸಿಕೊಳ್ಳುತ್ತಲೇ ಇದ್ದಾಳೆ.

ಬದಲಾವಣೆಯ ಹರಿಕಾರ ನಾನೆಂದು
ಕೂಗಿಕೊಳ್ಳುತ್ತಲೇ ಕಾಲ ಓಡುತ್ತಿದೆ.

***********

ಹಾದಿ ಹಾಡು

ಗುರಿ ಸೇರಿಸುವ ಪ್ರತಿನಿತ್ಯದ
ನಂಬುಗೆಯ ಹಾದಿಯೂ ಒಮ್ಮೊಮ್ಮೆ
ಕಣ್ ಕಟ್ಟಿಸಿಬಿಡುತ್ತದೆ
ದಿಕ್ಕು ತಪ್ಪಿಸಿ ಬಿಡುತ್ತದೆ.

ಮುಗ್ಗರಿಸುವುದು,ಎಡವಿ ಬೀಳುವುದು
ಅಂಕೆ ತಪ್ಪುವುದು
ಎಷ್ಟು ಗಳಿಗೆಯ ಲೆಕ್ಕ?
ಎಷ್ಟು ಕೆಟ್ಟದ್ದು ಬಿದ್ದ ನೋವಿಗಿಂತ
ನೆಟ್ಟ ನೋಟ!

ಕ್ಷಣಾರ್ಧದಲ್ಲೇ
ಹಾದಿ ನಡುವಲ್ಲೊಂದು ಕತೆ ಹುಟ್ಟಿ ಬಿಡುತ್ತದೆ
ದಾರಿ ಹೋಕರ ಬಾಯಿ ಖರ್ಚಿಗೂ
ಸಾಕಾಗಿ ಮಿಕ್ಕುತ್ತದೆ.

ನಡು ಹಾದಿಯೂ ನಡು ವಯಸ್ಸೂ
ಎಷ್ಟು ಅಪಾಯ
ಜಾಗ್ರತೆ ಇದ್ದಷ್ಟೂ ಕಡಿಮೆಯೇ
ಜನಸಂದಣಿಯಿಂದ ಲೊಚಗುಟ್ಟುತ್ತದೆ
ನಾಲಗೆ.

ಒಮ್ಮೊಮ್ಮೆ ತಲೆ ತಿರುಗುತ್ತದೆ
ಸ್ಮೃತಿ ತಪ್ಪುತ್ತದೆ ;ಹಾದಿ ಮರೆಯುತ್ತದೆ
ಯಾರನ್ನ ಹೊಣೆಯಾಗಿಸುವುದು?
ಹಾದಿಯನ್ನೋ? ಪಾದವನ್ನೋ?

ಕಣ್ಣು ಮಂಜಾದಾಗ ಲಕ್ಷ್ಮಣ ರೇಖೆಯನ್ನೂ
ದಾಟಿ
ಸಾಕ್ಷ್ಯವನ್ನೂ ನೀರು ಪಾಲು ಮಾಡಿ
ಎಚ್ಚರಿಕೆಗೆ ಮರೆವು ಮುತ್ತಿ ಎಲ್ಲ ಎಲ್ಲೆ
ಮೀರಿಯೂ ಅಚಾತುರ್ಯ
ಸಂಭವಿಸಿ ಬಿಡುತ್ತದೆ.

ಹಾದಿ ತುದಿಗೆ ಕಣ್ಣ ಚುರಿದು ಕೊಂಡು
ಅದೆಷ್ಟು ರಾಧೆಯರಿಲ್ಲಿ
ಉಡಿಯೊಳಗಿಟ್ಟ ಕೊಳಲಿಗೆ ಉಸಿರ ತೇದಿ ರಾಗವಾಗಿಸುತ್ತಿದ್ದಾರೆ

ಹಾಡು ಹಾದಿಯಾಗುತ್ತದೆ
ಹಾದಿ ಹಾಡಾಗುತ್ತದೆ
ಸ್ವರವೊಂದು ತೇಲುತ್ತಾ ಸಾಗುತ್ತದೆ

ಕತ್ತು ತಿರುಗಿಸಿದರೆ
ಯಾವ ಹಾದಿಗಳೂ ಜತೆಯಾಗುವುದಿಲ್ಲ
ನಿಲುತಾಣ ಸೇರುವುದಿಲ್ಲ.
ಆದರೂ ಹಾದಿಯ ಆಲಾಪದ
ಗುಂಗು ನಿಲ್ಲುವುದಿಲ್ಲ.


6 thoughts on “

  1. ಕನ್ನಡದ ಸಮನ್ವಯ ಕವಯತ್ರಿ, ಆಡಂಬರದ ಹಂಗು ಇಲ್ಲದೆ ಕಾವ್ಯ ಕಟ್ಟುವ ಪರಿ ಅದ್ಬುತ.

  2. ತುಂಬಾ ಚೆಂದದ ಆರ್ದ್ರ ಭಾವಗಳ ಮನಮುಟ್ಟುವ ಕವಿತೆಗಳು ಸ್ಮಿತಾ….

  3. ಆರ್ದ್ರ ಕವಿತೆಗಳು ಸ್ಮಿತಾ…ಬಹಳ ಇಷ್ಟವಾಯಿತು…

Leave a Reply

Back To Top