ಕವಿ ಕಾವ್ಯ ಪರಿಚಯ

ಅಮೃತಾ ಮೆಹೆಂದಳೆ

ಕವಿ ಪರಿಚಯ

ಅಮೃತಾ ಮೆಹೆಂದಳೆ

ಹುಟ್ಟಿದ ದಿನಾಂಕ : ಅಕ್ಟೋಬರ್ 1,   1972 

ವಿದ್ಯಾಭ್ಯಾಸ: ವಾಣಿಜ್ಯ ಪದವೀಧರೆ, ಕನ್ನಡ ಸ್ನಾತಕೋತ್ತರ ಪದವೀಧರೆ

ಸಾಹಿತ್ಯ ಚಟುವಟಿಕೆ: ನೂರಾರು ಹನಿಗವನಗಳು, ಲೇಖನ, ಕವನ, ಕಥೆಗಳು ನಾಡಿನ ಪ್ರಮುಖ ಪತ್ರಿಕೆಗಳಾದ ಸುಧಾ, ತರಂಗ, ಮಯೂರ, ತುಷಾರ, ಹಾಯ್ ಬೆಂಗಳೂರು, ಓ ಮನಸೇ, ವಿಜಯ ಕರ್ನಾಟಕ, ವಿಜಯವಾಣಿ, ವಿಶ್ವವಾಣಿ, ಹೊಸ ದಿಗಂತ, ಕರ್ಮವೀರ, ಕನ್ನಡಪ್ರಭ , ಸಖಿ, ಉತ್ಥಾನ, ಕರಾವಳಿ ಮುಂಜಾವು ಮುಂತಾದ  ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಬಹುಮಾನ: ಭಾರತೀಯ ಕರ್ನಾಟಕ ಸಂಘ, ಬೆಂಗಳೂರು,ಸಂಕ್ರಮಣ ಸಾಹಿತ್ಯ, ವಿಶ್ವ ಕನ್ನಡಿಗ ಪತ್ರಿಕೆ, ಕಾಸರಗೋಡು ಕನ್ನಡ ಸಂಘ ಮೊದಲಾದ ಸಾಹಿತ್ಯ ಸ್ಪರ್ಧೆಗಳಲ್ಲಿ ಬಹುಮಾನ ಬಂದಿದೆ.

ಪ್ರಕಟಿತ ಕೃತಿ: 2003 ರಲ್ಲಿ ” ಮೌನದ ಮಾತುಗಳು” ಕವನ ಸ0ಕಲನ ಪ್ರಕಟವಾಗಿದೆ. 2017 ರಲ್ಲಿ ” ಹನಿಯೆಂಬ ಹೊಸ ಭಾಷ್ಯ ” ಹನಿಗವನ ಸಂಕಲನ  ಪ್ರಕಟವಾಗಿದ್ದು, ” ಚೇತನಾ” ಸಾಹಿತ್ಯ ಪ್ರಶಸ್ತಿ, ” ಅಡ್ವೈಸರ್” ಸಾಹಿತ್ಯ ಪ್ರಶಸ್ತಿಗಳಿಗೆ ಭಾಜನವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಸಹಪಾಠಿಗಳೊಂದಿಗೆ ” ಪರೀಕ್ಷಾ ಪದ್ಧತಿ” ಎಂಬ ಪುಸ್ತಕ ಪ್ರಕಟವಾಗಿದೆ. ಸಾಹಿತ್ಯ ಅಕಾಡೆಮಿಗಾಗಿ “ಕವಿತೆ ೨೦೧೯”  ಸಂಪಾದಿತ ಕೃತಿ ೨೦೨೧ ರಲ್ಲಿ ಬಿಡುಗಡೆಯಾಗಿದೆ.

ಆಸಕ್ತಿ: ಕನ್ನಡದಲ್ಲಿ ಹೆಚ್ಚಿನ ಆಸಕ್ತಿ. ಭಾಷಾಂತರ, ಸಾಹಿತ್ಯ, ಪ್ರವಾಸದಲ್ಲಿ ಒಲವು. ಸ್ವ ಉದ್ಯೋಗದಲ್ಲಿ ಆಸಕ್ತಿ.

*******

ಅಮೃತಾರವರ ಎರಡು ಕವಿತೆಗಳು

ಮೈಗ್ರೇನೂ ಸುಳ್ಳುಸುಖವೂ..

Here Are 20 of the Most Painful Health Conditions You Can Get

ಋತುವಿಗೊಮ್ಮೆ ಬರುತ್ತಿದ್ದ ಗೆಳೆಯ
ತಿಂಗಳಿಗೊಮ್ಮೆ ಪಕ್ಷಕ್ಕೊಮ್ಮೆ ವಾರಕ್ಕೊಮ್ಮೆ ಕರೆಯದೆ ಬಂದರೆ ಒಂಥರಾ ಸಿಡಿಮಿಡಿ
ನಲ್ಲನಾದರೂ ರೋಷವುಕ್ಕೇರುವುದು ನೋಡಿ!

ಮಿದುಳನ್ನೇ ಕೊರೆದು ನರನರಗಳು ಸಿಡಿದು
ಹೆಪ್ಪುಗಟ್ಟಿಸಿ ಭಾವ ತಿಂದುಬಿಡುತ್ತದೆ ಜೀವ
ತಲೆಯಿದ್ದವರಿಗಷ್ಟೇ ಬರುತ್ತದೆ ಎಂದು
ಖುಷಿಸಲು ಇದೇನು ಸೀದಾಸಾದಾ ನೋವಾ?

ವ್ಯಾಯಾಮವಂತೆ ಪ್ರಾಣಾಯಾಮವಂತೆ
ಸೂಜಿಚಿಕಿತ್ಸೆಯಂತೆ ಪಥ್ಯವಂತೆ
ವಾಯುಪ್ರಕೋಪ ನಡಿಗೆಯಂತೆ ಓಟವಂತೆ ಮುದ್ರೆ ಮಂತ್ರ ತಂತ್ರ ನಿದ್ರೆಯಂತೆ..

ಈ ಕ್ಷಣ ಚಳಿಯಲ್ಲಿ ನಡುಗಿಸಿ
ಮರುಕ್ಷಣ ಬೆವರಲ್ಲಿ ತೋಯಿಸಿ
ಕಣ್ಣೀರಿಳಿಸಿ ಮರುಳಾಗಿಸಿ ಮಡಿಲನರಸಿ
ಕಿರುಚಿ ಪರಚುವ ಬೇಡದ ಅತಿಥಿ!

ತಲೆಯ ಸುತ್ತಿದ ಪೇಟ ಕಿರೀಟ
ಕತ್ತಿನಪಟ್ಟಿ, ಕಾಲುಚೀಲ
ಮುಲಾಮು ಮಸಾಜು ಕರ್ಪೂರತೈಲ
ಚಿತ್ರವಿಚಿತ್ರ ಛದ್ಮವೇಷಜಾಲ..

ಹಾಲಲ್ಲದ್ದಿದ ಸಿಹಿಜಿಲೇಬಿ
ಮೊಸರಲ್ಲಿ ನೆನೆಸಿಟ್ಟ ಮೆದುಅವಲಕ್ಕಿ
ಯಾವುದಕ್ಕೂ ಜಗ್ಗದ ಬಗ್ಗದ
ಪ್ರೀತಿಗೆ ಕರಗದ ದ್ವೇಷಕ್ಕೆ ಕೊರಗದ ಹಟಮಾರಿ

ಕಸರತ್ತುಗಳೆಲ್ಲ ವ್ಯರ್ಥ ನುಂಗಿದಾಗ ಮಾತ್ರೆ
ನೋವ ಜಗಿದಾಗಷ್ಟೇ ಮೋಕ್ಷಪಾತ್ರ
ಕಹಿಗುಳಿಗೆಯಿತ್ತ ಸಾಂತ್ವನ ಕ್ಷಣಿಕವೆನ್ನಬಹುದೇ
ಈ ಗಳಿಗೆಯ ನೋವೇ ನಿಜವೆಂದೊಪ್ಪಿರುವಾಗ
ಸುಳ್ಳುಸುಖವೇ ನಿತ್ಯಸತ್ಯ ಪರಮಾಪ್ತವೇ!

*********

ಜಾಲ-ತಾಣ

ತೆರೆದ ಮನೆಯಲ್ಲಿ ಝಗಮಗಿಸುವ ಬೆಳಕಲ್ಲಿ
ಸೆಲ್ಫೀ ಸಂಭ್ರಮದಲ್ಲಿ ಮುಖವಷ್ಟೇ ಅಲ್ಲ
ಅನಾವರಣಗೊಳ್ಳುತ್ತಿದೆ ನಗ್ನಸತ್ಯವೆಲ್ಲ..

ಗೋಪ್ಯವಾಗಿರಿಸಿದ್ದ ಮನದ ಮಾತೆಲ್ಲ
ಸ್ನೇಹ ಪ್ರೇಮದ ಸಂಕೋಲೆಯಲ್ಲಿ ಬಂದಿ
ಬಟಾಬಯಲಾಗುತ್ತಿದೆ ಮುಚ್ಚಿಟ್ಟ ಪುಟವೆಲ್ಲ..

ಎದುರು ಬಂದಾಗ ಗುರುತಿಸದವರೂ
ಹಲ್ಕಿರಿದು ಸಂತೈಸಿ ತಬ್ಬಿ ಮುತ್ತಿಟ್ಟು
ಅಪರಿಚಿತರಾಗುವರು ಪರಿಚಿತರೂ..

ನೇರ ದಿಟ್ಟ ಗಾಂಭೀರ್ಯ ಅಂಗಳದಲ್ಲಿ
ಲಂಪಟತನ ಈರ್ಷ್ಯೆ ದ್ವೇಷ ಒಳಮನದಲ್ಲಿ
ಗುಟ್ಟುಗಳೂ ಖುಲ್ಲಂಖುಲ್ಲ ಮುಖವಾಡದಡಿಯಲ್ಲಿ..

ಸುಖದ ಚಿತ್ರಗಳೂ ಶೃಂಗಾರ ರಸಕಾವ್ಯಗಳೂ
ದುಗುಡ ಸೋಲು ಅಪಮಾನ ಕಂತುಕತೆಗಳು
ಮೆಚ್ಚುವ ಸೆಳೆಯುವ ಜಾಲಬಂಧಗಳು..

ಆಯ್ಕೆಗೂ ತಿರಸ್ಕಾರಕೂ ಮುಕ್ತವಿದೆ
ಜೊಳ್ಳಿನ ಜೊತೆ ಕಾಳೂ ಇದೆ
ಲಕ್ಷ್ಮಣರೇಖೆಯ ಜರೂರತ್ತಿದೆ..


Leave a Reply

Back To Top