ಕಾವ್ಯ ಸಂಗಾತಿ
ಮಹಿಳಾ ದಿನದ ವಿಶೇಷ
ಇಂದಿಗೂ ಅವಳು..
ನಾಗರತ್ನ ಎಂ.ಜಿ.
ಇಂದಿಗೂ ಅವಳು…….
ಅಂತರ್ರಾಷ್ಟ್ರೀಯ ಮಹಿಳಾ ದಿವಸಗಳು
ಬೂಟಾಟಿಕೆಯ ಜನರ
ಮುಂದುವರೆದ ಸಮಾಸಗಳು
ತಿಳಿದವರಿಗಷ್ಟೇ ಸವಲತ್ತುಗಳು…
ಅರ್ಥವೇ ತಿಳಿಯದ ಅವಳು
ಸಹಸ್ರದಲ್ಲಿಹಳು
ಕತ್ತು ಹಿಚುಕುವ ಕತ್ತಲಲ್ಲಿ
ಇಂದಿಗೂ ಕೊಳೆಯುತಿಹಳು
ಬದಲಾದರೂ ಅವಳ ಪರಿಸ್ಠಿತಿ
ದಾಟಲಿಲ್ಲವೇಕೆ ಮಿತಿ ?
ಅಸಹಾಯಕಿ ಇಂದಿಗೂ ಅವಳು
ಆರು ನಿಮಿಷಕ್ಕೊಮ್ಮೆ ಅತ್ಯಾಚಾರಕ್ಕೆ
ಬಲಿಯಾಗುವಳು ಅವಳು
ನಾಗರಿಕ ಸಮಾಜದಲ್ಲಿ
ಬಡಾಯಿ ಕೊಚ್ಚುತ್ತಾ
ಕುಡಿದು ಹೊಡೆಯುವ
ರಕ್ಕಸ ಅವನು..
ಧರಿತ್ರಿಯಾಗಿ ಸಹಿಸಿ ಸಲಹುವಳು
ಇಂದಿಗೂ ಅವಳು….
ಬ್ಯಾಟು ಬೀಸಿ..ವಿಮಾನ ನಡೆಸಿ
ರಾಕೆಟ್ ತಿರುಗಿಸಿ..ಉಪಗ್ರಹ ಹಾರಿಸಿ
ಖಾದಿ ಖಾಕಿ ತೊಟ್ಟು
ನಗುವಳು ಒಮ್ಮೆ ಅವಳು…
ಮೂಲೆಯಲೆಲ್ಲೋ ಕೂತು
ಅಳುವ ಅವಳು
ಇಂದಿಗೂ ಕಾಣುವಳು
ಭೂಮಿಯ ಹೊರುವ
ಬಲವಿರುವ ಅವಳು
ಬಲಹೀನಳು ನೀನೆನ್ನುವ ಗಂಡನ್ನೂ
ಹೆರುವವಳು ಇಂದಿಗೂ ಅವಳು
ಹೆತ್ತವರ ಕಣ್ಣಾಗಿ
ಇಲ್ಲಿ ಹುಟ್ಟುವ ಅವಳು
ಕಣ್ಬಿಡುವ ಮುನ್ನವೇ
ಹೊಟ್ಟು ಮುಕ್ಕುತ್ತಾ
ಕಣ್ಮುಚ್ಚುವಳು ಇನ್ನೆಲ್ಲೋ..
ಇಂದಿಗೂ ಅವಳು
ಭೋಗಕ್ಕೆ ಎಂದಿಗೂ ಬೇಕು ಅವಳು
ಮಗಳಾಗಿ ಇಂದಿಗೂ
ಬೇಡವಾದವಳು
ಭ್ರೂಣ ಹತ್ಯೆ ನಿಂತರೂ
ಪ್ರಾಣ ಹತ್ಯೆಯ ತಡೆಯದಾದಳು…
ಇಂದಿಗೂ ಅವಳು
ಜಗತ್ತಿಗೇ ಉಸಿರು
ಬಸಿಯುವ ಅವಳು
ತನ್ನುಸಿರ ಕಾಯಲು ಇಂದಿಗೂ
ಕಟುಕರ ಮೊರೆ ಹೊಕ್ಕವಳು
ಕಲ್ಲಿನ ದೇವಿಯಾಗಿ
ಪೂಜೆಗೊಳ್ಳುವವಳು
ಜೀವಂತ ಸುಟ್ಟು
ಬೂದಿಯಾಗುವಳು ಇಂದಿಗೂ ಅವಳು
ಬದಲಾಗಿದೆ ಲೋಕ
ಹೊಸದಾಗಿದೆ ದೃಷ್ಟಿ
ಕಾಣದಾ ಕುಗ್ರಾಮದಲ್ಲಿ
ಇಂದಿಗೂ ನರಳುವ ಅವಳು
ಕತ್ತಲೆಯ ಕೂಪದಿಂದ
ಹೊರಬರಲು ಕಾಯುತ್ತಲೇ ಇಹಳು
ನಾಗರತ್ನ ಎಂ.ಜಿ.
=============
Excellent dear