ಕಾವ್ಯಸಂಗಾತಿ
ಅನುಸೂಯ ಯತೀಶ್
ಹೆಣ್ಣಾಗಿ ಹುಟ್ಟುತ ಕಣ್ಣಾಗಿ ಬೆಳೆದಳು
ಮಣ್ಣಿನ ಮಗಳ ಮಹಿಮೆಯ ।ನೋಡಿರಿ।
ಹುಣ್ಣಿನ ನಂಜು ತಡೆಯಿರಿ॥
ಮಮತೆಯ ಕಡಲಂತೆ ಸಾಮದ ಮಡಿಲಂತೆ
ಸುಮದಂತೆ ನವಿರು ನಾಜೂಕು।ಅವಳೆಂದು।
ಸಮವಿಲ್ಲ ಜಗದಿ ಲಲನೆಗೆ॥
ಬೆಂಕಿಲಿ ನೊಂದರು ಮಂಕಾಗಿ ಬಾಡದೆ
ಕೊಂಕನು ಸಹಿಸಿ ನೋವನು ।ನುಂಗುತ್ತ।
ಬಿಂಕವ ಬಿಡದೆ ಬದುಕ್ತಾಳೆ॥
ಲೋಕವ ತಿದ್ದುವ ಏಕೈಕ ಮುತ್ತಂತೆ
ನಾಕವ ಧರೆಗೆ ತರುವಳು ।ಒಲವಲ್ಲಿ।
ನೂಕುತ್ತ ಬದುಕ ಜಂಜಡ॥
ಸೆರಗಲ್ಲಿ ದುಃಖವ ಮರೆಮಾಚಿ ನಿತ್ಯವು
ಬೆರಗನ್ನು ತುಂಬಿ ಬಡತನ ।ಬಚ್ಚಿಟ್ಟು।
ಕೊರಗದೆ ಬಾಳು ಸವಿದಾಳು॥
ಕಷ್ಟವಾ ಸಹಿಸುತ್ತ ಇಷ್ಟವಾ ಮುಚ್ಚಿಟ್ಟು
ನಷ್ಟದ ದಿನದಿ ನಡುಗಾದೆ ।ನಡೆದಾಳು।
ಮುಷ್ಟಿಯ ಕಟ್ಟಿ ಆಸೆಯ ಬಿಟ್ಟಾಳು॥
ಬೆಂದರು ಬಾಳಲ್ಲಿ ಚಂದದ ನಗೆಬೀರಿ
ಅಂದದ ಮೊಗವ ತೋರುತ್ತ ।ಜನರಿಗೆ।
ಮಂದಿಯ ವರವ ಪಡಿತಾಳೆ॥
ಧರಣಿಯ ಪುತ್ರಿಯು ಕರುಣೆಯ ಬೆಳಕಾಗಿ
ಶಿರಬಾಗಿ ನಮಿಸಿ ಹರನನ್ನು ।ಭಜಿಸುತ್ತ।
ಪೊರೆಯುತ್ತ ಮನೆಯ ನಲಿವಳು॥
ಸುಪರ್ ಹಾಡು