ಅಂಕಣ ಸಂಗಾತಿ

ಬೀಳುವುದು ಸಹಜ.

ಪ್ರತಿ ಮನೆಯಲ್ಲೊಬ್ಬಳು ನಾಯಕಿ

ದೀಪಾ ಗೋನಾಳ ಅವರ ಅಂಕಣ

(ಮುಂದುವರೆದ ಕಥೆ)

Woman falls off scooter, crushed by truck in Greater Noida | Noida News -  Times of India

ಹಾಗೆ ನೋಡಿದರೆ ಒಂಬತ್ತಕ್ಕೆ ನಾನು ಆಫಿಸಿನಲ್ಲಿರಬೇಕು ತುಂಬ ತರಾತುರಿಯಲ್ಲಿ ನಿಮಿಷ ಒಂದಕ್ಕೆ ೫೫ ಅಥವಾ ೬೦ ಕಿ‌ಮೀ ಸ್ಪೀಡಿನಲ್ಲಿ‌ಗಾಡಿ ಓಡಿಸಿದರೆ ಮೂರುವರೆ ನಿಮಿಷದಲ್ಲಿ‌ ಆಫಿಸಿನ ಗೆಟೆದುರು ಇಲ್ಲವಾದರೆ ಶಾಲೆ ಮಕ್ಕಳಿಂದ ರೋಡು ತುಂಬಿ ಹೋಗಿದ್ದರೆ ಆರೇಳು ನಿಮಿಷವಂತು ಬೇಕು ಆದರೆ ಆ ದಿನ‌ ನಾ ತುಸು ಸ್ಲೋ ಇದ್ದೆ. ಅದಕ್ಕೆ ಅಂತ ವಿಶೇಷ ಕಾರಣಗಳೇನಿಲ್ಲ ಬೆಳಗಿನ ಎಲ್ಲ‌ ಕೆಲಸಗಳು ಅಂದುಕೊಂಡಂತೆ ನಡೆದಿದ್ದವು. ನಾನು ರೋಷನಿ ಸ್ಕೂಲ್ ಹಿಂಭಾಗದಿಂದ ವಿದ್ಯಾನಗರ ದಾಟಿಕೊಂಡು ದರ್ಗಾ ಓಣಿಯ ಒಂದು ಕಿರಿದಾದ ಗುಡ್ಡದ ಸಂಧಿಯಿಂದ ಹಾದು ಒಂದುದ್ದದ ಖಬರಸ್ಥಾನ ನ ಗೋಡಯಂಚಿಗೆ ಆನಿಕೊಂಡು ಮಲಗಿದ ರಸ್ತೆ ಯೊಂದಿಗೆ ಹೊರಟಿದ್ದೆ ಮುಂದೆ ಇನ್ನೊಂದು ಕಾಲು ಕಿಮೀ ಹೋದರೆ ಪೋಲಿಸ್ ಸ್ಟೆಷನ್ ಸರಿಯಾಗಿ ಅಲ್ಲಿಗೆ  ಎದುರಗಡೆಯಿಂದ ಒಂದು ಡ್ರೈವಿಂಗ್ ಸ್ಕೂಲ್ ನ ಕಾರ್ ಬಂತು ಸಿಂಗಲ್ ರೋಡಾದ್ದರಿಂದ ನಾನು ತುಸುವೇ ಎಡಕ್ಕೆ ಬಂದೆ ಅದಷ್ಟೆ ನೆನಪಿದ್ದದ್ದು, ನಾನು ಮತ್ತೆ ಏನಾಯ್ತಂತ ಹೋಷ್ ಗೆ ಬಂದಾಗ ರೋಡಿನ ಬಲಭಾಗ ಅಂದರೆ ಖಬರಸ್ಥಾನ್ ನ ಕಂಪೌಂಡಿನ ಹತ್ತತ್ತಿರ ಬಿದ್ದಿದ್ದೆ. ನನ್ನ ಗಾಡಿ ನನ್ನಿಂದ ಸುಮಾರು ದೂರ ಹೋಗಿ ವಯ್ಯನೆ ಒದರ್ತಲೇ ಇತ್ತು ಆ ಬದಿ ಈ ಬದಿ ನೋಡತಿದ್ದಂಗೆ ಹೋಗೊ ಬರೋ ಗಾಡಿಗಳೆಲ್ಲ ಸೈಡ್ ಗೆ ಪಾರ್ಕ್ ಮಾಡಿ, ಜನ ನನ್ನ ಬಳಿ ಓಡಿ ಬರ್ತಿದ್ರು ನನ್ನ ಮೊಕದ ಮೇಲಿನ ಸನ್ ಗ್ಲಾಸ್ ಒಳಗಿಂದ ಆದ ಅಪಘಾತದ ಅಂದಾಜು‌ಹಿಡಿಯಲು ಕಣ್ಣು ಹವಣಿಸ್ತಿದ್ವು.‌ಮೆಲ್ಲಗೆ ಸನ್ ಗ್ಲಾಸ್ ತೆಗೆದು ಸುತ್ತಲು ನೋಡಿ ಎಲ್ಲಿ ಬಿದ್ದೆ ಯಾಕೆ ಬಿದ್ದೆ ಅಂತಾ ಯೋಚಿಸಿದೆ ನಾ ಎಡಕ್ಕೆ ತಗೊಂಡ ಗಾಡಿ ಬಲಕ್ಕೆ ಯಾಕೆ ಬಂತು ಅಂತಾ ತಿಳಿಲಿಲ್ಲ ಆದರೆ ಗಾಡಿ ಬಹುಶಃ ಸ್ಕಿಡ್ ಆಗಿತ್ತು ಅದಕ್ಕಲ್ಲೊಂದು ಸಾಕ್ಷಿ ಸಿಕ್ತು ಇಷ್ಟೆಲ್ಲ ಆಗೊ ಅಷ್ಟೊತ್ತಿಗೆ ಒಂದಿಬ್ಬರು ಬಂದು ನನ್ನನ್ನ ಎದ್ದೇಳಿ ಮೇಡಮ್ಮ ಅಂದ್ರು ಎದ್ದೇಳೊಕೆ ಹರಸಾಹಸ ಪಟ್ಟೆ ಒಮ್ಮೆ ಎದ್ದೆ ಉಹುಂ ನನ್ನ ಕಾಲು ತಕ್ಷಣ ಮಡಿಕೆ ಹಾಕಿಕೊಂಡು ಹಠಕ್ಕೆ ಕುಳಿತುಬಿಟ್ತು ನೀ ಇಲ್ಲಿಂದ ಏಳಾಕ ನಾ ಬಿಡಲ್ಲ ಅನ್ನೊ ಹಠ, ಏನಾಯ್ತಂತ ಕಾಲು ನೋಡಿಕೊಂಡ್ರಿ ಉಹುಂ ಎಂತದು ಇಲ್ಲ. ಸರಿ ಅಕ್ಕಪಕ್ಕ ಇದ್ದವರು ನಮ್ಮ ಕೈ ಹಿಡಿರಿ ಮ್ಯಾಡಮ್ ಅಂದ್ರು ಅವರ ಸಹಾಯ ತಗೊಂಡು ರೋಡಿನ ಎಡ ಬದಿಗೆ ಅವರೆಲ್ಲ ಗಾಡಿ ಪಾರ್ಕ್ ಮಾಡಿದ ಜಾಗಕ್ಕೆ ಬಂದೆ ನನ್ನೆದುರು ಹೋದ ಡ್ರೈವಿಂಗ್ ಸ್ಕೂಲ್ ನ ಕಾರು ಕೂಡ ವಾಪಸ್ ಬಂತು ನನಗೆ ಎದ್ದೇಳೊಕೆ ಸಹಾಯ ಮಾಡಿದವ್ರು ಮನೆಗೆ ಯಾರಿಗಾದ್ರು ಫೋನ್ ಮಾಡಬೇಕಾ ಅಂತಾ ಕೇಳ್ತಿದ್ರು ಮತ್ತೊಬ್ರು ಅಲ್ಲಿರೊ ಹುಡುಗನಿಗೆ ಓ ಮೇಡಮ್ ಕಾ ಸ್ಕೂಟಿ ಲೇಕಾರೆ ಅಂತಿದ್ರು -ನಾನು, ಮನೆಯಲ್ಲಿ ಯಾರು ಇಲ್ಲ ನಾನೇ ಬೀಗ ಹಾಕ್ಕೊಂಡ ಬಂದಿನಿ ಅಂದೆ ನಿಮ್ಮನ್ನ ಆಸ್ಪತ್ರೆಗೆ ಬಿಡ್ತಿವಿ ಅಂದ್ರು ಹುಂ ಅಂದೆ ಆ ಕಾರಲ್ಲಿದ್ದವರಿಗೆ ಮೇಡಮ್ ಕೊ ವಹಾ ಆಸ್ಪತಾಲ ಚೋಡೆಂಗೆ ಗಾಡಿ ಲೇಕಾ ತು ವಹಿ ಹಿಂಗೆ ಉರ್ದುದಲ್ಲಿ ತಾವ ತಾವೇ ಎಲ್ಲ ಡಿಸೈಡ್ ಮಾಡಿ ಮುಂದಿನ ನಾಲ್ಕೈದು ನಿಮಿಷದಲ್ಲಿ ನನ್ನನ್ನ ಗವರ್ಮೆಂಟ್ ಹಾಸ್ಪೆಟಲ್‌ಗೆ ಬಿಟ್ರು. ಕಾರಿಂದ ಇಳಿಯೋಕೆ ಬಿಲ್ಕುಲ್ ಆಗ್ತಿಲ್ಲ ಇದೇನೊ ಮಾರಾಯ ಈ ಕಾಲ್ಯಾಕೆ ಹಠ ಮಾಡ್ತಿದೆ ಅಂತಾ ಕೇಳ್ಕೊಂಡ್ರೆ ಉತ್ತರಾನೆ ಇಲ್ಲ ಅಪಘಾತದ ಸೆಕೆಂಡ್ ಗಳ್ಯಾವು ನನ್ನ ಮೆಮೊರಿ ಕಾರ್ಡ್ ಲಿ ಸೇವ್ ಆಗೆ ಇಲ್ಲ. ಅಂತು ಅವರೆ ನನ್ನೆರಡು ರಟ್ಟೆ ಹಿಡಿದು ತಂದು ತುರ್ತು ಸೇವೆ ವಾರ್ಡನಲ್ಲಿ ಬಿಟ್ರು ಗಾಡಿ ತಂದ ಹುಡುಗ ಕೀ ಕೊಡೊಕೆ ಬಂದಾಗ ನನ್ನ ಡಿಕ್ಕಿಲಿ ಬ್ಯಾಗ್ ಇದೆ ತಂದಕೊಡಪ್ಪಾ ಅಂದೆ ಜೀ ಮೇಡಮ್ ಅಂದ. ಅಲ್ಲಿದ್ದ ಡ್ಯುಟಿ ನರ್ಸ್ ಗಳಿಗೆ ನನ್ನ ಜೊತೆ ಬಂದ ಜನ ನಾ ಹ್ಯಾಗೆ ಬಿದ್ದೆ ಎಷ್ಟು ಲಗಾಟೆ ಹೊಡೆದೆ ಅನ್ನೋದನ್ನ ಉರ್ದು ಮಿಶ್ರಿತ ಕನ್ನಡದಲ್ಲಿ ಹೇಳ್ತಿದ್ರು ಅವರು ನೋಡಿದಂತೆ ನಾ ಮೂರು ಲಗಾಟೆ ಹೊಡೆದು ಸ್ಕಿಡ್ ಆದ ಜಾಗದಿಂದ ಬಲಭಾಗದ ರೋಡಿನ ಕೊನೆ ಅಂಚಲ್ಲಿ ಒಂದತ್ತು ಮೈಲಿ ದೂರ ಹೋಗಿ ಬಿದ್ದಿದ್ದೆ ಮತ್ತೆ ನನ್ನ ಗಾಡಿ ಹತ್ತತ್ತಿರ ಪೋಲಿಸ್ ಸ್ಟೆಷನ್ ಹತ್ತಿರ ಹೋಗಿ ಬಿದ್ದಿತ್ತು.

           ನಾನು ಮಲಗಿದಲ್ಲೆ ಬ್ಯಾಗಿಂದ ಫೋನ್ ತೆಗೆದು ಯಾರಿಗೆ ಕಾಲ್ ಮಾಡ್ಲಿ ಅಂತ ಯೋಚಿಸಿ ಮೊದಲ ಆಫಿಸ್ ಮಿತ್ರರಿಗೆ ಕಾಲ್ ಮಾಡಿದೆ ನಾನು ಬರೋದು ತಡವಾಗಬಹುದು ಟ್ರಸರಿ ಲಾಕರ್ ಬಂದು ತಗೊಂಡು ಹೋಗಿ ಆಸ್ಪತ್ರೆಗೆ ಬನ್ನಿ ಅಂದೆ‌.

           ನಾನು ಫೊನ್ ಮಾಡೊ ಹೊತ್ತಿಗೆ ಸಿಸ್ಟರ್ ನನ್ನ ಬಳಿ ಬಂದು ನನ್ನ ಮೊಕಾ ನೋಡಿದವರೆ ಅರೆ ಸುಲಾಖೆಯವರ ಸೊಸೆ ಅಲ್ವಾ ಏನಾತ್ರಿ ಮೇಡಮ್ ಅಂತಾ ನನ್ನ ಅಂಗೈ ಗಟ್ಟಿ ಹಿಡಿದ್ರು ಏನಿಲ್ಲ ಗಾಡಿ ಸ್ಕಿಡ್ ಆಯ್ತು ಅಂದೆ. ಅರಾಮಿದ್ದಿರಿಲ್ಲೊ ಅಂದ್ರು ಹಾ ಅರಾಮಿದಿನಿ. ಅಲ್ಲಿದ್ದ ಒಂದ ಹುಡುಗನನ್ನ ಕರೆದು ಏ ಅಲ್ಲೊಗು ಸುಲಾಖೆಯವರ ಮನೆಗೋಗಿ ಅರ್ಜೆಂಟ್ ಬರಬೇಕಂತ ಕರ್ಕೊಂಡ ಬಾ ಅಂದ್ರು ಮೇಡಮ್ ಬೇಡ ನನ್ನ ಮಗಳು ಶಾಲೆಗೆ ಹೋಗ್ತಿರ್ತಾಳೆ ತಾಳ್ರಿ ಒಂದಹತ್ತ ನಿಮಿಷ ಅಂದೆ ಉಹುಂ‌ ಅವರು ಕೇಳಲಿಲ್ಲ ನನ್ನ ಮಾತು. ನಿಮ್ಮನಿಯರಿಗೆ ಕಾಲ್ ಮಾಡ್ರಿ ಅಂದ್ರು ಉಹುಂ ಅವರು ಆಫಿಸ್ ರೀಚ್ ಆಗ್ಲಿ ಆಮೇಲೆ ಮಾಡ್ತೆನೆ ಅಂದೆ. ನನ್ನನ್ನ ಮೆದುವಾಗಿ ಮುಟ್ಟಿ ಎಲ್ಲಿ‌ ನೋಯ್ತಿದೆ ಎಲ್ಲಿ ಪೆಟ್ಟ ಬಿದ್ದಿದೆ ಅಂತೆಲ್ಲಾ ಕೇಳಿದ್ರು ಎಲ್ಲು ಇಲ್ಲ ಸ್ವಲ್ಪ ಕಾಲಿಗೆ ಏಟಾದಂಗಿದೆ ಅಂದೆ. ನನ್ನ ಪ್ಲಾಜೊ ತುಸು ಮೇಲ್ಮಾಡಿ ಕಾಲು ನೋಡಿದ್ರು ಅಷ್ಟೊತ್ತಿಗೆ ಬಲಗಡೆ ಮತ್ತೊಬ್ಬ ಸಿಸ್ಟರ್ ಬಂದು ನನ್ನ ಭುಜಕ್ಕೆ ಇಂಜೆಕ್ಷನ್ ಕೊಟ್ರು ಈ ಬದಿ ಮೊದಲೆ ಮಾತಾಡಸ್ತಿದ್ದ ಸಿಸ್ಟರ್ ಖರೆ ಖರೆ ನನ್ನ ಎಲ್ಡರ್ ಸಿಸ್ಟರ್ ತರ ನನ್ನ ಎರಡು ಕೈನ ತಮ್ಮ ಮೃದು ಅಂಗೈಗಳಿಂದ ಹಿಡಿದು ತಲೆಗೆನಾರು ಪೆಟ್ಟ ಬಿದ್ದಿದ್ಯಾ ವಾಂತಿ ಏನಾದ್ರು ಬರ್ತಿದ್ಯಾ ಅಂದ್ರು ನಾನು ಉಹುಂ ಅಂದೆ.  ಇಷ್ಟೆಲ್ಲ ಆಗೋ ಹೊತ್ತಿಗೆ ಒಂಬತ್ತು ವರೆ ನಾ ಇವರಿಗೆ ಕಾಲ್ ಮಾಡಿ ಟೆನ್ಷನ್ ಕೊಡೊದು ಬೇಡ ಅಂದು ನನ್ನಪ್ಪನ ಸಮಾನರಾದ ಎರಡು ವರ್ಷದಿಂದ ನಮ್ಮೆಲ್ಲ ಆಗು ಹೋಗುಗಳಲ್ಲಿ ಜೊತೆಗೆ ನಿಂತ ನಾಯಕ ಮೇಷ್ಟ್ರಿಗೆ ಕಾಲ್ ಮಾಡಿದೆ ಆಸ್ಪತ್ರೆಲಿದ್ದೆ ಬನ್ನಿ ಅಂದೆ. ಸಿಸ್ಟರ್ ಸಹನಾ ಡಾಕ್ಟರ್ ನಾ ಕರ್ಕೊಂಡ ಬನ್ನಿ ಅಂತಾ ಮತ್ತೊಬ್ಬ ಸಿಸ್ಟರ್ ಗೆ ಹೇಳ್ತಿದ್ರು. ನಮ್ಮ ಅತ್ತೆ ಮನೆಯಿಂದ ನಮ್ಮ ಎರಡನೆ ಅತ್ತೆ ಅಂದ್ರೆ ನಮ್ಮನೆಯವರ ಚಿಕ್ಕಮ್ಮ ಬಂದ್ರು. ಏನಾತ ದೀಪಾ ಅಂದ್ರು ಏನಿಲ್ಲ ಗಾಡಿ ಸ್ಕಿಡ್ ಆಯ್ತು ಅಂದೆ ಅವರ ಹಿಂದೆ ಮೇಷ್ಟ್ರು ಬಂದ್ರು ಯಾಕ್ರಿ ಬಾಯಾರ ಅಂದ್ರು ಮತ್ತದೆ ಉತ್ತರ ನಂದು. ಪ್ರವೀಣಗ ಕಾಲ್ ಮಾಡಿದ್ರೆನು ಅಂದ್ರು ಉಹುಂ ಇಲ್ಲ ಅಂತಿದ್ದಕ್ಕೆ ಫೋನಾಯಿಸಿದ್ರು ವಿಷ್ಯ ಹೇಳಿದ್ರು. ಮಾತಾಡಿ ಅಂತ ಫೋನ್ ನನ್ನ ಕೈಗಿಟ್ರು ಪಪ್ಪಾ ಏನು ಆಗಿಲ್ಲೊ ನಾನು ಗಾಡಿ ಇಬ್ರು ಆರಾಮಾದಿವಿ ಈ ಎಡಗಾಲೊಂದು ಮಾತ ಕೇಳ್ತಿಲ್ಲ ಅಷ್ಟೆ ಅಂದೆ ಸರಿ ನಾ ಬರ್ತೆನಿ ಈಗ ಅಂದು ಫೋನಿಟ್ಟ. ಇದೆಲ್ಲ ದೊಡ್ಡ ಡ್ರಾಮಾನಪ್ಪ ಇದನ್ನೆಲ್ಲ ಫೇಸ್ ಮಾಡೊದು ಎಷ್ಟು ಕಷ್ಟ ಅನ್ನಿಸೊದಕ್ಕೆ ಶುರುವಾಯ್ತು. ಅಲ್ಲಿಗೆ ಸಹಾನಾ ಮ್ಯಾಮ್ ಅನ್ನೊ ಡಾಕ್ಟರ್ ಬಂದ್ರು ಬಂದವರೆ ಮೊದಲೆ ನನ್ನ ಹಣೆಮೇಲೆ ತಮ್ಮ ಅಂಗೈ ಇಟ್ಟು ಮೊದಲೆ ಜ್ವರಾ ಇತ್ತಾ ಅಂದ್ರು ಅವರ ತಣ್ಣನೆ ಕೈ ನನ್ನ ಹಣೆ ಸೋಕಿದಾಗ ಆಹಾ ಎಷ್ಟ ತಣ್ಣಗಿದೆ ಕೈ ಅನ್ನಿಸ್ತು.ಇಲ್ಲ ಜ್ವರಾ ಏನಿರ್ಲಿಲ್ಲ ಅಂದೆ. ಹಾರ್ಟ್ ಬೀಟ್ ಚೆಕ್ ಮಾಡಿದ್ರು. ಅದೆ ಟೆತಸ್ಕೊಪ್ ಎದೆಮೇಲಿಟ್ಟು. ಅಂದಹಾಗೆ ಅಷ್ಟೊತ್ತಿಗಾಗಲೆ ಇಲ್ಲಿದ್ದ ಇನ್ನೊಬ್ಬ ಸಿಸ್ಟರ್ ನನ್ನ  ಬಿಪಿ ಮತ್ತೆ ಪಲ್ಸ್ ಚೆಕ್ ಮಾಡಿ ಆಗಿತ್ತು. ಡಾಕ್ಟರ್ ದು ಅದೆ ಪ್ರಶ್ನೆ ವಾಂತಿ ಏನಾದ್ರು ಆಯ್ತ ಅಥವಾ ವಾಂತಿ ಬಂದಂಗೇನಾರು ಆಗ್ತಿದೆಯಾ ಅಂತಾ ನಾನು ತುಂಬ ಜೆಂಟ್ಲ ಆಗಿ ಉಹುಂ‌ ಅಂದೆ. ಎಲ್ಲಿ ಏಟಾಗಿದೆ ಅಂದ್ರು ಕಾಲು ಅಂದೆ ಮತ್ತೆ ನನ್ನ ಪಾದ ಮುಟ್ಟಿ ನೋಡಿ ಕಾಲ್ಬೆರಳು ಮೂವಮೆಂಟ್ ಮಾಡೋಕೆ ಹೇಳಿದ್ರು ನಾನು ಕಾಲಿಗೆ ಹೇಳ್ತಾನೆ ಇದಿನಿ ಬೆರಳ ಮಾತ್ರ ನನ್ನ ಮಾತೇ ಕೇಳ್ತಿಲ್ಲ ಎಲಾ ನನ್ನ ಮಕ್ಕಳಾ ನಿಮಗ ನಾ ಮಾಡಿದ್ದ ಒಂದೇರಡಾ ಇರೊಬರೊ ಸೋಡಾ ಶಾಂಪೂ ಕೊಬ್ಬರಿ ಎಣ್ಣಿ ಬಿಸಿನೀರು ಪೆಡಿಕ್ಯುರು ಮಸಾಜು ನೇಲ್ ಪಾಲಿಶು ಕಳ್ಳನನ್ನ ಮಕ್ಕಳಾ ನನ್ನ ಮಾತೆ ಕೇಳ್ತಿಲ್ವಾನೀವು ಅಂತಾ ಅಳು ಬಂತು ಅಳ್ತಾ ಅಳ್ತಾ ಬಲಗಾಲ ಬೆರಳಿಗೆ ಮೂವಮೆಂಟ್ ಮಾಡ್ರೊ ಅಂದೆ ನೋಡಿದ್ರೆ ಇವು ಅರಾಮಸೆ ಡ್ಯಾನ್ಸ್ ಮಾಡ್ತಿವೆ ಒಳೊಳಗೆ ಶಭ್ಭಾಷ್ ಅಂದೆ. ಎಡಗಾಲು ನನ್ನ ಕಂಟ್ರೊಲ್ ಲಿ ಇಲ್ಲ ಅಂತ ಗೊತ್ತಾಗಿ ಮಲಗಿದಲ್ಲಿಂದಲೇ ಮೆಲ್ಲಗೆ ತಲೆ ಎತ್ತಿದೆ ಏನು ಕಾಣಸ್ಲಿಲ್ಲ ಹಂಗೆ ಭುಜ ಎತ್ತೋಕೆ ಟ್ರೈ ಮಾಡ್ತಿದ್ದೆ ಯಾಕೆ ಮಲಗಿ ಅಂದ್ರು ಸಿಸ್ಟರ್ ನಾ ಹಠ ಮಾಡಿದೆ ನನ್ನ ಕಾಲು ನೋಡಬೇಕು ಅಂತಾ ಅವ್ರು ಹೆಲ್ಪ್ ಮಾಡಿದ್ರು ಎದ್ದು ಕೂತೆ. ಕಾಲು ಸಿಟ್ಟ ಬಂದು ಗಲ್ಲಾ ಊದಿಸಿಕೊಂಡ ಕೂತ ಮಗು ಹಂಗೆ ಉಪ್ಪಂತಾ ಉದಕೊಂಡಿತ್ತು .. ಅಯ್ಯೋ ಅನ್ನಿಸ್ತು ನನ್ನ ಬಗ್ಗೆ ನನಗೆ ಅಳೋಕೆ ಶುರು ಮಾಡಿದೆ ನೋವಿಗಲ್ಲ ಈ ಕಾಲು ನನ್ನ ಮಾತು ಕೇಳ್ತಿಲ್ಲ ಅನ್ನೋ ಇಗೋ ಹೊಡೆತಕ್ಕೆ..


ದೀಪಾ ಗೋನಾಳ

ದೀಪಾ ಗೋನಾಳ
ಕವಯಿತ್ರಿ-
ತಂತಿ ತಂತಿಗೆ ತಾಗಿ ಪ್ರಕಟಿತ ಸಂಕಲನ
ಅಂಚೆ ಇಲಾಖೆಯಲ್ಲಿ ಕರ್ತವ್ಯ.
ಊರು‌ಕೇರಿ-ಹಾನಗಲ್ – ಹಾವೇರಿ

Leave a Reply

Back To Top