ಕಾವ್ಯ ಸಂಗಾತಿ
ಮಹಿಳಾ ದಿನದ ವಿಶೇಷ
ಭಿತ್ತಿ
ಅರುಣ ರಾವ್
ಕೋಣೆಯ ನಾಲ್ಕು ಗೋಡೆಗಳು
ಅವೆಷ್ಟು ನೋವುಗಳಿಗೆ ಸಾಕ್ಷಿಯಾಗಿವೆಯೋ?
ಚೀರಾಟ ಅರಚಾಟಗಳಿಗೆ ರಂಪಾಟಗಳಿಗೆ
ಕಿವಿ ಕಿವುಡಾಗಿ ಕೇಳಗಾಗಿದೆಯೇನೋ!
ಪ್ರಸ್ತದ ರಾತ್ರಿಯ ಕೈಬಳೆ ನಾದ
ಜೊತೆಗೆ ಸುಖದ ಮೂಲುಗಾಟ
ಗೋಡೆಯ ಮರೆಯ ಪಿಸುಮಾತುಗಳು
ಅವರಿವರ ಬಗೆಗಿನ ಚಾಡಿ
ಪ್ರಸವ ಬೇನೆಯ ನರಳಾಟ
ನಂತರ ಹಸುಗೂಸಿನ ತಾರಕದ ಅಳು
ತಂದೆಯ ಗೆಲುವಿನಮುಗುಳ್ನಗೆ ಜೊತೆಗೆ
ತಾಯ ನೆಮ್ಮದಿಯ ಬಿಟ್ಟುಸಿರು
ದಾದಿಯ ಉಪಚಾರ ಅಮ್ಮನ ಆರೈಕೆ
ಬೆಳ್ಳುಳ್ಳಿ, ಹರಳೆಣ್ಣೆ ಸಾಂಬ್ತಾಣಿಯ ಹೊಗೆ
ತಾಉ ಮೊಲೆವಾಲ ಕರೆ
ಹಿತ ನಾತ ಮೂಗಿಗೆ ಈ ಗೋಡೆಗೆ
ಬೆಳಗ್ಗೆ ಸಂಜೆ ಭೇಟಿ ನೀಡುವ ವೈದ್ಯ
ಮಂಚದ ಪಕ್ಕದಲ್ಲಿಜೋಡಿಸಿದ್ದ ಔಷದಿಯ ಬಾಟಲಿ
ನಿತ್ಯ ನೋವಿನಲ್ಲೇ ಮುಳುಗೇಳುತ್ತ
ಸಾವಿಗಾಗಿ ಎದುರು ನೋಡೋ ಜೀವಂತ ಶವ
ಗುಳಿಯಲ್ಲಿ ಮಲಗಿದ್ದ ಹೆಣವಾದರೂ ಬೇಕು
ನೋವ ನುಂಗಿ ನಕ್ಕಾಗ ತುಟಿ ಬಂಜರು
ಸುತ್ತಲೂ ಕುಳಿತು ಅಳುತಿಹ ನೆಂಟರು
ಯಾತ್ರೆಗೆ ಸಾಕ್ಷಿಯಾಗಿಹ ಭಿತ್ತಿ ಚಲಿಸದೆ ನಿಂತಿರು