ಕಾವ್ಯಸಂಗಾತಿ
ಹಕ್ಕಿ
ದೇವರಾಜ್ ಹುಣಸಿಕಟ್ಟಿ.
[20:42, 06/03/2022] Devaraj Hunasikatti: ಮನೆಯoಗಳದ ಗುಬ್ಬಚ್ಚಿ
ರೆಕ್ಕೆ ಸುಟ್ಟುಕೊಂಡಿದೆ….
ತಕ್ಷಣಕೆ….
ಕನಸುಗಳ ಬಿತ್ತುವ ಕೆಲಸಕ್ಕೆ
ರಾಜೀನಾಮೆ ಕೊಟ್ಟಿದೆ….
ಲೋಹದ ಹಕ್ಕಿಯ ಆರ್ಭಟಕೆ…!!
ಆಗಸದ ತುಂಬ ಬೆಳಕಿನ ಹಬ್ಬ..
ನೆಲಕ್ಕೆ ಮಾತ್ರ ನೆತ್ತರಿನೋಕುಳಿ…!!
ಇದೀಗ ನೇಮಕಗೊಂಡ ಹಕ್ಕಿಯ
ಬಿಡುವಿಲ್ಲದ ಪಯಣ
ಮಸಣದ ಕಡೆಗೆ……!!!
ಇಲ್ಲಿ ಅಂಗಳದಲ್ಲಿ
ಹಕ್ಕಿ ಬಿಕ್ಕುತ್ತಿದೆ
ಕಂಬನಿ ಸುರಿಸಿ….ಉಗುಳು
ನುಂಗಿ..ನೆತ್ತರು ವಸರಿ…
ಹೃದಯ ಮಿಡಿತದ ಜೀವ
ತಂತುಗಳು ಹಾದಿಗುಂಟ
ಹಾಡಾಗಿ ಪಲ್ಲವಿಸಿದೆ..
ಶೋಕಗೀತೆಗೆಂತ ಗಡಿ…
ಭಾಷೆ ಬಾನು ದಾಟಿದೆ…
ಭಾವವೊಂದೇ ಹುಟ್ಟು…!
ಲೋಹದ ಹಕ್ಕಿಗೋ
ಅದೆಷ್ಟು ಗುಟ್ಟು…!!
ಸುಟ್ಟ ಮೇಲೂ ತನಿಖೆ ವರದಿ..
ಸಾಲು ಸಾಲು ಸಾವಿರ ಸರದಿ…!
ಮಡಿದವರ ಲೆಕ್ಕ…ಖರ್ಚಾದ ರೊಕ್ಕ…
ಆಕ್ರಮಿತ ನೆಲ…
ಅಡಗಿಕೊಂಡಿರುವವರ ಬಿಲ…
ಅಳಿದುಳಿದ ರಕ್ತಕ್ಕಂಟಿದ
ಕಲೆ…ಕೊಲೆ…ಹತ್ಯೆ..ಸಂಚು…!
ಅಲ್ಲಿ ಯಾರೋ ಕೂಗಿದರು
ಈ ನೆಲ ನಮ್ಮದೇ….!
ಸತ್ತ ನೆಮ್ಮದಿಯ
ಸಮಾಧಿಯ ಮೇಲೆ
ಮನುಷ್ಯನ ಶರಾ…!
ಹಕ್ಕಿ ಹಾರಾಡಬೇಕಿತ್ತು..!!
ಹಾದರದ ಓಣಿಯಲ್ಲಿ…
ರೆಕ್ಕೆ ಬಿಚ್ಚಿಕೊಂಡು…!
ಅಲ್ಲದಿದ್ದರೂ
ಮುಖ ಮುಚ್ಚಿಕೊಂಡು…!!