ಲೇಖನ
ಮಾನವೀಯ ಮೌಲ್ಯಗಳ ಸಾರಥಿ
ಭಾರತಿ ಕೇದಾರಿ ನಲವಡೆ.
“ಯತ್ರ ನಾರ್ಯಂತು ಪೂಜ್ಯತೇ ರಮಂತೆತತ್ರ ದೇವತಾಃ”ಎಂಬ ಮಾತಿನಂತೆ ಎಲ್ಲಿ ಸ್ತ್ರೀ ಇರುತ್ತಾಳೋ ಅಲ್ಲಿ ದೇವತೆಗಳು ಪೂಜಿಸಲ್ಪಡುತ್ತಾರೆ “ಎಂಬ ಮನುವಿನ ಮಾತು ಸ್ತ್ರೀ ಸ್ಥಾನದ ಹಿರಿಮೆಯನ್ನು ತಿಳಿಸುತ್ತದೆ. ಹೆಣ್ಣು ಸಂಸಾರದ ಕಣ್ಣು, ಹೆಣ್ಣಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳುವದು ಕೂಡ ಅಸಾಧ್ಯ.ತಾಯಿಯಾಗಿ ಮಗುವನ್ನು ನವಮಾಸಗಳವರೆಗೆ ಒಡಲಲಿ ಹೊತ್ತು ಜೀವನ್ಮರಣದ ನಡುವೆ ಜನ್ಮನೀಡುವ ಜನ್ಮದಾತೆಯಾದರೆ, ಪತ್ನಿಯಾಗಿ ಬದುಕ ಬಂಡಿಗೆ ಜೊತೆಯಾಗುವ ಗೆಳತಿ, ಮಗಳಾಗಿ ಮನೆತನ ಕೀರ್ತಿ ಬೆಳಗುವ, ಸೊಸೆಯಾಗಿ ಮನೆತನದ ಕೀರ್ತಿ ಉಳಿಸುವ, ಸ್ನೇಹಿತೆಯಾಗಿ ಕಷ್ಟಕ್ಕೆ ಮರುಗಿ ಸಾಂತ್ವನದ ಸಂಗಾತಿಯಾಗಿ ತನ್ನ ಪಾತ್ರವನ್ನು ಜವಾಬ್ದಾರಿ ಪ್ರೀತಿಯಿಂದ ನಿಭಾಯಿಸುತ್ತಾಳೆ. ಎಲ್ಲದ್ದಕ್ಕೂ ಮಿಗಿಲಾಗಿ ಭಾವದಿಭಾವ ಮೀಟಿ ಮಾನವೀಯತೆಯ ಸಂವೇದನೆಯ ಶಕ್ತಿಯಾಗಿದ್ದಾಳೆ. ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಆಚರಿಸುವ ಈ ಸಂದರ್ಭದಲ್ಲಿ ಅವಳ ಮಮತೆಯ ಸೇವೆಗೆ ಒಂದು ಸಲಾಮ್!
“ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ”ಎಂಬ ಮಾತಿನಂತೆ ಒಂದು ಗಂಡಿಗೆ ಶಿಕ್ಷಣ ನೀಡಿದರೆ ಅದು ಅವನ ವೈಯಕ್ತಿಕ ಜೀವನಕ್ಕೆ ಸಹಾಯವಾಗುತ್ತದೆ,ಆದರೆ ಅದೇ ಒಂದು ಹೆಣ್ಣಿಗೆ ಶಿಕ್ಷಣ ನೀಡಿದರೆ ಒಂದು ಕುಟುಂಬ ಸಮಾಜಾದಿಯಾಗಿ ಶಾಲೆಯನ್ನು ತೆರೆದಂತೆ. ಈ ನಿಟ್ಟಿನಲ್ಲಿ ಸಾವಿತ್ರಿಬಾಯಿ ಫುಲೆಯವರ ಪರಿಶ್ರಮ,ತಾಳ್ಮೆ ,ಮಹಿಳಾ ಶಿಕ್ಷಣಕ್ಕೆ ನೀಡಿದ ಕೊಡುಗೆಯಾಗಿದೆ.
“ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲದು “ಎಂಬಂತೆ ಸ್ವತಂತ್ರ ಸಾಮ್ರಾಜ್ಯಕ್ಕಾಗಿ ಹೋರಾಡಿದ ವೀರಮಹಿಳೆ ಕಿತ್ತೂರ ಚನ್ನಮ್ಮ, ಒನಕೆ ಓಬವ್ವ, ಝಾನ್ಸಿ ರಾಣಿಲಕ್ಷ್ಮಿಬಾಯಿ ಇವರ ಶೌರ್ಯ ದೇಶಪ್ರೇಮ ಒಂದೆಡೆಯಾದರೆ, ಸಂಸ್ಕಾರದ ಮೂಲಕ ಸಾಹಸ, ದೇಶಭಕ್ತಿಯನ್ನು ಶಿವಾಜಿಯಲ್ಲಿ ಬೆಳೆಸಿ ಸ್ವತಂತ್ರ ಹಿಂದೂ ಸಾಮ್ರಾಜ್ಯದ ಸ್ಥಾಪನೆಗೆ ಪ್ರೇರಣಾಶಕ್ತಿಯಾಗಿ, ಭುವನೇಶ್ವರಿದೇವಿಯ ಆಶಯದಂತೆ ಶ್ರೀಕೃಷ್ಣಗೀತೋಪದೇಶ ಮಾಡುವ ಭಾವಚಿತ್ರ ತೋರಿಸಿ ಆಗತಾನೆ ಟಾಂಗಾದಿಂದ ಇಳಿದು ತಾನು ಟಾಂಗಾ ನಡೆಸುವ ಚಾಲಕನಾಗುವೆ ಎಂದ ನರೇಂದ್ರನಿಗೆ ಶ್ರೀಕೃಷ್ಣನಂತಾಗು ಎಂಬ ಮಾತು ಸನಾತನಸಾರಥಿಯಾಗಿ ಭಾರತದ ಅಧ್ಯಾತ್ಮಿಕತೆಯ ಹಿರಿಮೆಯನ್ನು ಜಗಕೆ ಸಾರಿ ಭಾರತದ ಶ್ರೇಷ್ಠತೆಗೆ ಗರಿಮೂಡಲು ಕಾರಣವಾಯಿತು. ಅದರಂತೆ ಥಾಮಸ್ ಆಲ್ವಾ ಎಡಿಸನ್, ಮೋಕ್ಷಗುಂಡಂ ವಿಶ್ವೇಶ್ವರಯ್ಯ ಇವರ ಮೇರು ವ್ಯಕ್ತಿತ್ವಕ್ಕೆ ಅವರ ಸಾಧನೆಗೆ ಸ್ಪೂರ್ತಿಯೇ ತಾಯಿ ಎಂಬ ದೇವತೆ.
ಬೆಳಗಿನ ಜಾವದಿಂದ ಹಲ್ಲುಜ್ಜುವ ಬ್ರಷನಿಂದ ರಾತ್ರಿ ಊಟವಾದ ಮೇಲೆ ಕೈ ವರೆಸುವ ವಸ್ತ್ರದವರೆಗೂ ತಾಯಿಯ ಪಾತ್ರ ಗಮನಿಸಬೇಕಾದದ್ದು. ಪತಿಯನ್ನು ಕೆಲಸಕ್ಕೆ, ಮಕ್ಕಳನ್ನು ಶಾಲೆಗೆ ಕಳಿಸಿ ತುಸು ನಿರಾಳವಾಗುವಷ್ಟರಲ್ಲಿ ಮುಂದಿನ ಮನೆಗೆಲಸ, ಉದ್ಯೋಗಸ್ಥ ಮಹಿಳೆಯಾಗಿದ್ದರೆ ತನ್ನ ಕಛೇರಿ ಕೆಲಸ ಅಂದರೆ ಎರಡನೆ ಇನ್ನಿಂಗ್ಸ ಪ್ರಾರಂಭ.
ಮೊದಲ ಪಾಠಶಾಲೆಯಾದ ಮನೆಯಲ್ಲಿ ಮೊದಲ ಗುರುವಾಗಿ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಹೆಚ್ಚಿನ ಜವಾಬ್ದಾರಿ ನಿಭಾಯಿಸುತ್ತಾಳೆ. ವೇದಗಳ ಕಾಲದಿಂದ ಪುರುಷರಿಗೆ ಸಮಾನವಾದ ಕೌಟುಂಬಿಕ, ಧಾರ್ಮಿಕ ಹೊಣೆಗಾರಿಕೆಯನ್ನು ಹೊಂದಿದ್ದಾಳೆ. ಪುರುಷನು ಪತ್ನಿಯನ್ನು ಮತ್ತು ಸಂತತಿಯನ್ನು ಹೊಂದದೇ ಪರಿಪೂರ್ಣ ಪುರುಷನಾಗಲಾರ ಎಂಬ ಮಾತಿದೆ. ಶಿವಸಂಸ್ಕ್ರತಿಯಲ್ಲಿ ಮೂಡಿ ನಿಂತಿರುವ ಅರ್ಧನಾರೀಶ್ವರನಾದ ಶಿವನು ಅರ್ಧ ಹೆಣ್ಣು ಅರ್ಧ ಗಂಡು ಆಗಿದ್ದಾನೆ. ಲಿಂಗಬೇಧ ನೀತಿಯನ್ನಳಿಸಿ ಸಮಾನತೆಯ ತತ್ವವನ್ನು ಹೇಳುವ ಈ ಪರಿಕಲ್ಪನೆ 12ನೇ ಶತಮಾನದ ಶರಣಸತಿ ಲಿಂಗಪತಿ ಎಂಬ ಪರ್ಯಾಯ ಸಂಸ್ಕೃತಿಯ ಆದರ್ಶವಾಗಿದೆ.
ಆದರೆ ಮಮತಾಮಯಿಯಾದ ಹೆಣ್ಣಿನ ಮನದಲ್ಲಿ ತನ್ನದೇ ಆದ ಭಾವನೆಗಳಿರುತ್ತವೆ. ಕೆಲವೊಮ್ಮೆ ತನ್ನದಲ್ಲದ ತಪ್ಪಿನಿಂದ ಅವಮಾನಿಸಿಗೊಂಡ ಸಂದರ್ಭಗಳು ನಡೆಯುತ್ತಿರುತ್ತದೆ. ಅವನ್ನೆಲ್ಲ ನುಂಗಿ ದೊಡ್ಡ ರಾದ್ಧಾಂತ ಮಾಡದೇ ಸಹಿಸಿಕೊಂಡು ಕುಟುಂಬದ ಮಾನ ಕಾಪಾಡಲು ನಗುವಿನ ಮುಖವಾಡ ಧರಿಸಿ ತನ್ನನ್ನು ನೋಯಿಸಿದವರನ್ನು ಕ್ರಮಿಸುವ ಕ್ಷಮಯಾಧರಿತ್ರಿ ಆಗುತ್ತಾಳೆ. ಆದರೆ ಕೆಲವೊಮ್ಮೆ ಪುರುಷ ಪ್ರಧಾನ ಸಮಾಜ ಈ ತಾಳ್ಮೆ,ಕ್ಷಮೆ, ತಪ್ಪಾದಾಗ ಪ್ರತಿಭಟಿಸದೇ ಇರುವದನ್ನು ಹೆಣ್ಣಿನ ಬಲಹೀನತೆ ಎಂದು ತಿಳಿದುಕೊಳ್ಳುತ್ತಾರೆ. ಅದು ತಪ್ಪು ಅವಳಿಗೂ ಮನಸಿದೆ, ಅವಳು ಕೆಲಸ ಮಾಡುವ ಯಂತ್ರ ಎಂದು ಭಾವಿಸದೇ ಅವಳ ಭಾವನೆಗೂ ಸ್ಪಂದಿಸಿದಾಗ ದಾಂಪತ್ಯದ ಕೊಂಡಿ ಗಟ್ಟಿಯಾಗಿ ಸುಖಸಂಸಾರಕ್ಕೆ ನಾಂದಿಯಾಗುತ್ತದೆ. ಯಾಕೆಂದರೆ ಹೆಣ್ಣು ಎಷ್ಟೇ ಸ್ವಾವಲಂಬಿ ಸ್ವಾಭಿಮಾನಿ ಆದರೂ ಅವಳ ಪಾತ್ರ ಹೊಂದಾಣಿಕೆಯ ಅಡಿಪಾಯದ ಮೇಲೆ ನಿಂತಿದೆ.
ಇಂದು ಮಹಿಳೆ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾಳೆ. ಅವಳ ಸೇವೆಯನ್ನು ಶ್ಲಾಘಿಸಿ, ಅವಳ ಭಾವವನ್ನು ಗೌರವಿಸಿ
ಯಾಕೆಂದರೆ ನಿಮ್ಮ ಪ್ರೀತಿಯ ಪ್ರೋತ್ಸಾಹ ಅವಳ ಸಾಧನೆಗೆ ಪುಷ್ಟಿ ನೀಡಿದಾಗ ಅವಳ ಯಶಸ್ಸಿಗೆ ಕಾರಣ ಒಬ್ಬ ಪುರುಷನೆಂಬ ಹೆಮ್ಮೆ ಕೂಡ ನಿಮ್ಮದಾಗುತ್ತದೆ ಅಲ್ಲವೇ?ಬಾಲ್ಯದಲ್ಲಿ ತಂದೆಯ ಆಸರೆ ಯೌವನದಲ್ಲಿ ಪತಿಯ ಆಸರೆ ಹಾಗೂ ವೃದ್ಯಾಪ್ಯದಲ್ಲಿ ಮಗನ ಆಸರೆ ಎಂಬ ಮಾತಿದೆ. ಆದರೆ ಇಂದಿನ ಬದಲಾದ ಕಾಲಘಟ್ಟದಲ್ಲಿ ಹೆಣ್ಣು ಸರ್ ಜಾರ್ಜ ಬರ್ನಾರ್ಡ ಷಾ ಅವರು ಹೇಳುವಂತೆ “ಜ್ಞಾನ ಕೇವಲ ಜ್ಞಾನವಾಗಿಯೇ ಉಳಿದರೆ ಮನುಷ್ಯನ ಅಸ್ತಿತ್ವಕ್ಕೆ ಧಕ್ಕೆ, ಜ್ಞಾನವನ್ನು ಜಾಣ್ಮೆಯಾಗಿ ಪರಿವರ್ತಿಸಿದರೆ ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾಧ್ಯ ಮಾತ್ರವಲ್ಲ ,ಸಾಧನೆಯ ಔನತ್ಯವನ್ನು ಹಂತ ಹಂತವಾಗಿ ಏರುವ ಸಬಲತೆ ಮೈಗೂಡುತ್ತದೆ”ಎಂಬಂತೆ ತನ್ನ ಪ್ರತಿಭೆ, ಪರಿಶ್ರಮದಿಂದ ಪ್ರಗತಿಯತ್ತ ದಾಪುಗಾಲು ಹಾಕುತ್ತಿದ್ದಾಳೆ.
ಮನೆಮನದ ಮುಸುರೆ ತಿಕ್ಕಿ ಸಹನೆ, ಕರುಣೆ, ಕ್ಷಮೆ, ತ್ಯಾಗ, ಶಾಂತಿಯ ಮೌಲ್ಯಗಳನ್ನು ಸ್ವತಃ ಅಳವಡಿಸಿಕೊಂಡು ಒಂದು ಸುಸ್ಥಿರ ಕುಟುಂಬದ ಆಧಾರ ಸ್ತಂಭವಾಗಿದ್ದಾಳೆ. ಮೌಲ್ಯಗಳ ಸಾರಥಿಯಾಗಿ ತನ್ನ ಮಕ್ಕಳನ್ನು ಸಮಾಜದ ಉತ್ತಮ ನಾಗರೀಕರನ್ನಾಗಿ ಮಾಡುವ ಮೂಲಕ ದೇಶಕ್ಕೆ ಉನ್ನತ ಮಾನವಸಂಪನ್ಮೂಲ ನೀಡುವ ಮಮತಾಮಯಿ ಆಗಿದ್ದಾಳೆ. ಕ್ಷಣ ಯೋಚಿಸಿ ನೋಡಿ ಅವಳ ಕಾರ್ಯವೈಖರಿಯನ್ನು ಇನ್ನಾದರೂ ಸಲ್ಲಿಸಿ ಸಂತೈಸೋಣ ಧನ್ಯತೆಯಲಿ ಅವಳ ಸೇವೆಗೆ ಪ್ರತಿಯಾಗಿ ಮಿಡಿವ ಭಾವವೀಣೆ ಸಂಭ್ರಮದ ನಾದವಾಗಿ ಸಂತಸದ ಹೊನಲಾಗಿಸುವ ತುಸು ಪ್ರೀತಿ, ಸಮಯ ನೀಡೋಣ ಅಲ್ಲವೇ?
ಸಮಯೋಚಿತ ಬರಹ ಸುಂದರವಾಗಿದೆ….