ಕಾವ್ಯ ಸಂಗಾತಿ
ಕೇಳದ ನುಡಿಗಳು….!
ಹಿಂಸೆ ಕ್ರೌರ್ಯಗಳ ಸುಳಿಯಲ್ಲಿ
ವಿಲವಿಲ ಒದ್ದಾಡುವ
ಮೀನಾಗಿ ಹೋದೆಯಲ್ಲೆ
ಆದರೂ
ನಿನ್ನ ಧಿಕ್ಕರಿಸುವ ನುಡಿಗಳ
ಕೇಳುವವರಿಲ್ಲ ಇಲ್ಲಿ….
ಬೇಡವೆಂದರೂ ಪಾಪದ ಕೂಪಕ್ಕೆ
ತಳ್ಳಿ ಮೋಜು ನೋಡುವ
ತಾಕಲಾಟಗಳ ಮಧ್ಯ
ಆತ್ಮಸ್ತೈರ್ಯದಿ
ನಿನ್ನ ಧಿಕ್ಕರಿಸುವ ನುಡಿಗಳ
ಕೇಳುವವರಿಲ್ಲ ಇಲ್ಲಿ….
ಅಂಗೊಪಾಂಗಗಳ ಸವರಿ
ಹಿಚುಕಿ ಹಿಂಡಿ ಮುದ್ದೆ ಮಾಡಿ
ಒದ್ದು ಎದ್ದು ಹೋದರೂ
ನಿನ್ನ ಧಿಕ್ಕರಿಸುವ ನುಡಿಗಳ
ಕೇಳುವವರಿಲ್ಲ ಇಲ್ಲಿ….
ಬೇಡನ ಬಾಣಕ್ಕೆ ತುತ್ತಾದ
ಶಶಾಂಕನಂತೆ
ತರಕ್ಷುವಿಗೆ ತೆಕ್ಕೆಯಲ್ಲಿನ
ಹರಿಣಿಯಂತೆ
ಒಳಗೊಳಗೆ ನೋವು ಸಂಕಟ
ಕೊರೆದು ಉರಿದರೂ
ನಿನ್ನ ಧಿಕ್ಕರಿಸುವ ನುಡಿಗಳ
ಕೇಳುವವರಿಲ್ಲ ಇಲ್ಲಿ…..
ನಿರಾಶ್ರಿತೆಯ ಬಾಳಲ್ಲಿ
ನಿರುಮ್ಮಳತೆಯ ಭಾವವಿಲ್ಲ
ವಿಷಾದದ ಛಾಯೆಯ ಕರಿನೆರಳಂತೆ
ಬೆನ್ನು ಇರಿದು ಕೊಲ್ಲುತಿದೆ
ಇಲ್ಲಿ ಕೃಷ್ಣನು ಬರಲಿಲ್ಲ…
ವೀರನು ಬರಲಿಲ್ಲ…
ಉತ್ತರಕುಮಾರನಂತೆ
ಬಡಾಯಿ ಕೊಚ್ಚಿಕೊಳ್ಳುವ
ಜಾಯಮಾನದವರೆ
ಎಂದು ಕೂಗಿದರು
ನಿನ್ನ ಧಿಕ್ಕರಿಸುವ ನುಡಿಗಳ
ಕೇಳುವವರಿಲ್ಲ ಇಲ್ಲಿ….
****
ಗಝಲ್
ಎದೆಸೆಟಿಸಿ ನಿಂತವರೆಲ್ಲ ಮಣ್ಣಾಗುವ
ಕಾಲ ಬಂದೀತು
ಹೃದಯ ಕರಗದವರೆಲ್ಲ ಹಣ್ಣಾಗುವ
ಕಾಲ ಬಂದೀತು
ಮೀಸೆತಿರುವಿ ಮೆರೆದ ಮಹಾರಾಜರು
ಬರಿ ನೆನಪಷ್ಟೆ
ಸೋಸಿ ತಗೆದ ಚರಟದಂತೆ ಒಣಗುವ
ಕಾಲ ಬಂದೀತು
ದ್ವೇಷ ಅಸೂಯೆ ಕ್ರೋಧಾಗ್ನಿಯ
ಚಿತೆಯಲಿ ಉರಿದವು
ಶಾಸನ ಕೆತ್ತಿಸಿಟ್ಟರು ಮಾಸಿಹೋಗುವ
ಕಾಲ ಬಂದೀತು
ಬಸವಳಿದು ದುಡಿದು ದಕ್ಕಿದ್ದು ಬರಿ
ಆರಡಿ ಮೂರಡಿಯಷ್ಟೆ
ಮಸಣದಲಿ ಭೇದವಿಲ್ಲದೆ ಒಂದಾಗುವ
ಕಾಲ ಬಂದೀತು
ಇರುವ ಜೀವನವ ಸಾರ್ಥಕದ
ಪಥದಿ ಸಾಗಿಸುತಿರು
ಅಭಿನವನ ನುಡಿಗಳೆಲ್ಲ ನೆನಪಾಗುವ
ಕಾಲ ಬಂದೀತು
Super sr