ಅಂಕಣ ಸಂಗಾತಿ

ನೆನಪಿನದೋಣಿಯಲಿ

ಉಯ್ಯಾಲೆ ಆಡೋಣ ಬನ್ನಿರೇ 

Swing close up on bury background, select focus

ಹೌದು ಉಯ್ಯಾಲೆ  ಎಂದರೆ ಸಂತಸ ಉಲ್ಲಾಸ. ಹಕ್ಕಿಯಂತೆ ಜುಂಯನೆ ಮೇಲೇರಿ ಜರ್ರನೆ ಕೆಳಗೆ ಜಾರುವ ಜೋಕಾಲಿಯಾಟದ ಸಂಭ್ರಮ ಅನುಭವಿಸದ  ಮನಗಳಿವೆಯಾ? ಪ್ರತಿಷ್ಠಿತ ಬಂಗಲೆಗಳ ಮಧ್ಯದ ಸುಖಾಸೀನ ಮೆಲ್ಲ ತೂಗುಯ್ಯಾಲೆಗಳಿರಲಿ, ಮರದ ಕೊಂಬೆಗೆ ಹಗ್ಗ ಕಟ್ಟಿ ಮೇಲೊಂದು ಗೋಣಿ ತಾಟು ಹಾಸಿ ಎರಡೂ ಕೈಲಿ ಹಗ್ಗ ಹಿಡಿದು ಜೀಕುವ ಕಚ್ಛಾ ಉಯ್ಯಾಲೆಗಳಿರಲಿ   ಮನಕ್ಕೆ ಕೊಡುವ ಸೊಗದ ಸವಿಯ ಸೊಬಗೇ ಅನನ್ಯ ಅಸದೃಶ. 

ನೆನಪಿನ ದೋಣಿಯಲ್ಲಿ ಹೊರಟಾಗ ಮೊದಲು ಕಂಡ ಜೋಕಾಲಿ ಎಂದರೆ ಪಕ್ಕದ ಮನೆಯ ಹಜಾರದ ತೂಗುಮಣೆಯ ಉಯ್ಯಾಲೆ . ಚಿಕ್ಕ ಹುಡುಗಿ ಎಂದು ಹೋದಾಗಲೆಲ್ಲ ನನಗೆ ಕೂರಲು ಅನುವು ಮಾಡಿಕೊಟ್ಟು ತೂಗುವ ಆ ಮನೆಯ ಅಕ್ಕ ಅಣ್ಣಂದಿರು. ಮನಸೋ ಇಚ್ಛೆ ಅಲ್ಲಿ ಆಡಿದ ನೆನಪು ಇನ್ನೂ ಹಸಿರು ಮನ ಹೊಲದಲ್ಲಿ.

ನಂತರದ ದಿನಗಳಲ್ಲಿ ಆ ಮನೆ ಬದಲಾಯಿಸಿದ ಮೇಲೆ ಉಯ್ಯಾಲೆ ಸಹವಾಸ ಕಡಿಮೆ.  ಹಾಗಾಗಿಯೇ ಉದ್ಯಾನವನ ಮೃಗಾಲಯ ಬೃಂದಾವನಗಳಿಗೆ ಹೋದಾಗಲೆಲ್ಲಾ ಒಂದಷ್ಟು ಹೊತ್ತು ಉಯ್ಯಾಲೆ ಹಾಡಲೇ ಬೇಕೆಂಬ ಹಠ. ಮನೆಯಲ್ಲಿನ ಸೀಬೆ ಮರಕ್ಕೆ  ಒಂದು ಹಗ್ಗ ಕಟ್ಟಿ ಹಳೆಯ ಬೆಡ್ ಶೀಟ್ ಹಾಕಿ ಚಿಕ್ಕ ತಂಗಿಯರ ಜತೆ ಆಟ. ವಯಸ್ಸಿಗೆ ಮೀರಿ ಸ್ವಲ್ಪ ದಡೂತಿ ಇದ್ದ ನಾನು ತೂಗಿಕೊಳ್ಳುವ ಸಮಯದಲ್ಲೇ ಕೊಂಬೆ ಮುರಿದು ಬೀಳಬೇಕೆ? ನನ್ನ ತಪ್ಪೇನು ಅದರಲ್ಲಿ ಗೊತ್ತಾಗಲೇ ಇಲ್ಲ ರೀ…….

ಒಂಚೂರು  ಪುಕ್ಕಲಿಯಾದ ನಾನು ಜಾಸ್ತಿ ಎತ್ತರ ಜೀಕುವ ಅಭ್ಯಾಸದವಳಲ್ಲ. ನಾನು ಕೂತಾಗ ತಳ್ಳುವವರು ಸ್ವಲ್ಪ ಜೋರಾಗಿ ನೂಕಿದರೂ ಹೃದಯ ಎದೆಗೆ ಬಂದ ಅನುಭವ . ಹಾಗಾಗಿಯೇ ನಾವೇ ಕಾಲಲ್ಲಿ ಮೀಟಿ ಮೆಲ್ಲ ತೂಗಿಕೊಳ್ಳುವ ಉಯ್ಯಾಲೆ ನನಗೆ ಪರಮಪ್ರಿಯ. ಮುಂದೆ ನಮ್ಮ ಮನೆಯ ಪೋರ್ಟಿಕೋದಲ್ಲಿ ಉಯ್ಯಾಲೆಗೆಂದು ಅನುವು ಮಾಡಿಸಿದೆ. ಆದರೆ ಜಾಗದ ಅಭಾವ. ಮಣೆಯ ಎರಡೂ ಕಡೆ ಸರಪಳಿಗಳ ಉಯ್ಯಾಲೆ ಸಾಧ್ಯವಾಗಲಿಲ್ಲ. ಕೊಕ್ಕೆಗೆ ನೇತು ಹಾಕುವ ಬಿದಿರಿನ ಬುಟ್ಟಿಯ ಉಯ್ಯಾಲೆಯೀಗ ನನ್ನ ಸಂಗಾತಿ . ಜೋರು ಮಳೆಯ ನಾದದಲ್ಲಿ ಕೈಯಲ್ಲೊಂದು ಪುಸ್ತಕ ಹಿಡಿದು ಹದ ಬಿಸಿ ಡಿಕಾಕ್ಷನ್ ಕಾಫಿ ಹೀರುವ ಸುಖ ಆಹಾ!…. ಅನುಭವಿಸಿಯೇ ತೀರಬೇಕು.. ಬೇಸಿಗೆಯ ನಡು ಮಧ್ಯಾಹ್ನದ ಸುಡು ಸುಡು ಬಿಸಿಲಲ್ಲಿ 1ಎಲೆಯೂ ಅಲುಗದ ಆ ನಿಶ್ಯಬ್ದ ಗಳಿಗೆಗಳಲ್ಲಿ ಪುಸ್ತಕ ಹಿಡಿದು ಕೂತರೆ! ಎಂಥ ಒಳ್ಳೆ ನಿದ್ರೆ ಮಾರಾಯ್ರೇ ಅದೂ ಒಂದು ಹಿತಾನುಭವ . ಮುಸ್ಸಂಜೆಯ ತಿಳಿ ಬೆಳಕಲಿ ಅಂಗಳದ ಜಾಜಿಯ ಪರಿಮಳ ಆಘ್ರಾಣಿಸುತ್ತಾ ಬೀದಿಯಲ್ಲಿ ಆಡುವ ಮಕ್ಕಳ ಕೇಕೆ,  ತಿಂಗಳ ಚಂದಿರ ಕೂತಲ್ಲೇ ಕಾಣುವಾಗ ವಿದ್ಯುತ್ ದೀಪಗಳನ್ನು ಆರಿಸಿ ಆ ತಂಪು ತಮದೊಳಗೆ ಲೀನವಾಗುವ ತನ್ಮಯತೆ ಇದೆಲ್ಲಾ ನನ್ನ ಈ ಉಯ್ಯಾಲೆಯ ಮಡಿಲಲ್ಲೇ ಕಂಡುಕೊಳ್ಳುತ್ತಿರುವುದು. ಜೀವನದ ಈ ಚಿಕ್ಕ ಚಿಕ್ಕ ಸಂತೋಷ ಸಮಾಧಾನಗಳು ಅಂಗೈಯಿಂದ ಜಾರಿಹೋಗದಂತೆ ಜತನಿಸುತ್ತಿರುವುದು. ಹಾಗಾಗಿಯೇ ಉಯ್ಯಾಲೆ ಎಂದರೆ ಬಾಳಬನದದ ಕುಸುಮದ ಸ್ನಿಗ್ಧತೆ, ಸಂತೋಷದ ಕ್ಷಣಗಳ ಆಪ್ಯಾಯತೆ, ಎಂದಿಗೂ ಮುಗಿಯದ ಆತ್ಮೀಯತೆಯ ಕಥೆ. ಉಯ್ಯಾಲೆ ಎಂದರೆ ಮೈತ್ರಿ ತರುವ ಆಪ್ತತೆ, ಸಾಂಗತ್ಯದ ಸಾನಿಧ್ಯತೆ ಇನ್ನೂ ಏನೇನೆಲ್ಲಾ…….. 

.

ಬರಿಯ ಸ್ಮರಣೆಗಳಷ್ಟೇ ಅಲ್ಲ ಜೀವನದa ಪಾಠವನ್ನೂ ಕಲಿಸುವ ಗುರು ಈ ಉಯ್ಯಾಲೆ . ಸಂತಸದ ಕ್ಷಣಗಳಲ್ಲಿ ಏರಿದ ಅನುಭವ  ದುಃಖದ ಗಳಿಗೆಗಳಲ್ಲಿ ಪಾತಾಳಕ್ಕೆ ಇಳಿದಂತೆ. ಆದರೆ ಯಾವುದೂ ಶಾಶ್ವತವಲ್ಲ ಮೇಲೇರಿದವರು ಕೆಳಗಿಳಿಯಲೇಬೇಕು ಕೆಳಗಿರುವವರು ಮೇಲೆ ಏರುವ ಸಂದರ್ಭ ಬಂದೇ ಬರುತ್ತದೆ ಎಂಬ ಚಿರಂತನ ನಿತ್ಯ ಸತ್ಯದ ಅರಿವು ಮೂಡಿಸುತ್ತಲೇ ಇರುತ್ತದೆ.  

ಈ ಸುಮಧುರ ಗಳಿಗೆಗಳ ಪುನರಾವಲೋಕನದ ಸುಯೋಗಕ್ಕೆ ವೇದಿಕೆಯಾದ “ಸಂಗಾತಿ”ಗೆ ಏನೆಂದು ಅಭಿವಂದಿಸಲಿ? 


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

Leave a Reply

Back To Top