ಕಾವ್ಯಯಾನ
ಎಸ್. ವಿ. ಹೆಗಡೆ
ಎಸ್. ವಿ. ಹೆಗಡೆ
ಜೀವದ ಪಯಣವೊಂದಾದರೆ
ಜೀವನವೇ ಒಂದು ಪಯಣ
ನಿಂತಲ್ಲಿ ನಿಲಲಾಗದೆ ಕಾಲ ಚಕ್ರದಲಿ ಕೇಂದ್ರಬಿಂದು ಬದಲಾಗುವ ಚಲನವಲನ ॥
ನಭೋಮಂಡಲ ಗೃಹ ನಕ್ಷತ್ರಗಳ ಭ್ರಮಣ
ಅತೀತ ಪರಮಾಣುಗಳ ನಿಲ್ಲದ ಕಂಪನ
ಒಮ್ಮೊಮ್ಮೆ ಏಕಾಂಗಿ ಮಗದೊಮ್ಮೆ ಗುಂಪಾಗಿ
ದೃಶ್ಯ ಅದೃಶ್ಯವಾಗಿ ಗೊತ್ತುಗುರಿಯಿಲ್ಲದ ಸಂಚಲನ ಈ ಪಯಣ॥
ಬಾನಿನಲಿ ರೆಕ್ಕೆ ಬಿಚ್ಚಿ ಪಕ್ಷಿಗಳ ಸ್ವಚ್ಛಂಧ ಹಾರಾಟ ಸಾಗರದ ತಳದಲ್ಲಿ ಮನ ಬಂದ ಕಡೆಗೆಲ್ಲ ಮೀನುಗಳ ಆಟೋಟ
ಯಾವದೋ ಗುಂಗಿನಲಿ ಯಾರದೋ ಹಂಗಿನಲಿ ಎಲ್ಲೆಲ್ಲೊ ನಡೆವ ಜೀವನದ ತಿರುಗಾಟ॥
ಸೇರದ ಕಂಬಿಗಳ ಮೇಲೆ ಬಂದ ರೈಲು
ಬೋಗಿಯ ಹತ್ತಿ ಗುರಿಸೇರುವ ತವಕ
ತಪ್ಪಿದರೆ ಪಾತಾಳ ಕಾಣುವ ವಿಮಾನದಲಿ
ಹಾರಿ ಎತ್ತರದ ಕನಸು ಕಾಣುವ ತವಕ ॥
ಪಯಣದುದ್ದಕ್ಕೂ ಬಿಡುವಿಲ್ಲದೆ ಬಂದು ಮನದಲಿ ಇಣುಕುವ ಭೂತ ಭವಿಷ್ಯತ್ತುಗಳ
ಹಿತನೀಡುವ ಹದಗೆಡಿಸುವ ಸಿಲುಕಿಕೊಳ್ಳುವ ಹಲವಾರು ಸಂಗತಿಗಳ ಗುರುತಿಲ್ಲದೆಯೂ
ಹತ್ತಿರವಾಗುವ ಹತ್ತಿರವಾದರೂ ಗುರುತಿಸಿಕೊಳ್ಳದೆ ತಗಲುವ ಅಸಂಖ್ಯ ಮುಖಗಳ ನಡುವೆ ಮರೆತು ಹೋಗಿದೆ ಜೀವದ ಪಯಣ॥