ಅಂಕಣ ಸಂಗಾತಿ
ಬೀಳುವುದು ಸಹಜ.
ಪ್ರತಿ ಮನೆಯಲ್ಲೊಬ್ಬಳು ನಾಯಕಿ
ದೀಪಾ ಗೋನಾಳ ಅವರ ಹೊಸ ಅಂಕಣ
ಪ್ರತಿ ಮನೆಯಲ್ಲೊಬ್ಬಳು ನಾಯಕಿ ಇದ್ದಾಳೆ ಅವಳು ಬಹಳ ಸುಂದರವಾಗಿದ್ದಾಳೆ.
ಮಗಳ ತಲೆ ಬಾಚಿ ಹೂಕಟ್ಟಿ ಮುಡಿಸಿ ಅಡುಗೆ ಮಾಡಿ ತಿಂಡಿ ತಿನ್ನಿಸಿ ಹೊರಗೆ ಹೊರಟವರಿಗೆಲ್ಲ ಡಬ್ಬಿ ತಯಾರಿಸಿರ್ತಾಳೆ.
ಪ್ರತಿಮನೆಯಲ್ಲೊಬ್ಬಳು ಪೋಲಿಸ್ ಇದ್ದಾಳೆ ಆಕೆ ಪ್ರತಿ ಕ್ಷಣ ತನ್ನ ಮನೆಯ ಬಂದೋಬಸ್ತಿಗಾಗಿ ರಜವಿಲ್ಲದ–ಪಗಾರವಿಲ್ಲದ ಕೇವಲ ನೆಮ್ಮದಿಯ ತಹತಹಿಗಾಗಿ ಪಹರೆ ಕಾಯುತ್ತಿದ್ದಾಳೆ ದಶದಿಕ್ಕುಗಳಲ್ಲೂ.
ಪ್ರತಿಮನೆಯಲ್ಲೊಬ್ಬ ವಕೀಲೆ ಇದ್ದಾಳೆ ಅವಳ ಮನೆಮಂದಿಯ ವಿಚಾರಕ್ಕೆ ಬಂದರೆ ಕರಿ ಕೋಟ್ ಇಲ್ಲದೆ ವಕಾಲತ್ತಿಗೆ ನಿಲ್ಲುತ್ತಾಳೆ.
ಪ್ರತಿ ಮನೆಯಲ್ಲೊಬ್ಬ ಆರ್ಥಿಕ ತಜ್ಞೆ ಬಿಡುವಿಲ್ಲದೆ ಯೋಚಿಸಿ ಯೋಜಿಸಿ ಬಜೆಟ್ ತಯಾರಿಸಿ ಮನೆತನದ ಹಡುಗು ಸದಾ ಚಲಿಸುವಂತೆ ನೋಡಿಕೊಳ್ಳುತ್ತಿದ್ದಾಳೆ.
ಈ ಅವ್ವ,ಅಕ್ಕ,ಹೆಂಡತಿ,ಮಗಳು, ಸೊಸೆ ಒಮ್ಮೊಮ್ಮೆ ಜೋಲಿ ತಪ್ಪಿ ಬೀಳ್ತಾರೆ, ಯಾವಾಗೊ ಒಮ್ಮೆ ಎಡವ್ತಾರೆ, ಮುಗ್ಗರಿಸಿ ಸಾವರಿಸಿಕಿಳ್ಳೊಕೆ ಟೈಮ್ ತಗೋತಾರೆ.
ಆ ಎಲ್ಲಾ ಸಮಯದಲ್ಲೂ ನೀವು ಅವಳ ಜೊತೆ ಇರಬೇಕು.
ಬಿದ್ದು ಬಂದ ಕತೆ ಹೇಳ್ತಿನಿ ಇವತ್ತಿಂದ, ಅದಕ್ಕೂ ಮೊದಲು ಇದಿಷ್ಟನ್ನ ಹೇಳಬೇಕು ಅನಿಸ್ತು.
ಎಲ್ಲಾ ದಿನಗಳಂತೆ ಅವಳ ಈ ದಿನ ಕೂಡ ತುಂಬ ಸೊಗಸಾಗಿತ್ತು. ಎದ್ದವಳೆ ಎಂದಿನಂತೆ ಅಂಗೈಉಜ್ಜಿ, ದೇವರ ಪಟ ನೋಡಿ, ಕೆಟ್ಲ ಆನ್ ಮಾಡಿ ಹಾಲು ಕಾಯಲು ಇಟ್ಟು ಇನ್ನೂ ಉಪಹಾಕ್ಕೇನು ಅಂತಾ ಯೋಚನೆ ಮಾಡುವಾಗ ನೆನಪಾದದ್ದು ಫ್ರಿಜ್ ತುಂಬ ತುಂಬಿದ ಹಸಿ ಬಟಾಣೆ, ಬೀನ್ಸ್, ಗಜ್ಜರಿ, ಸರಿ ತಕ್ಷಣ ಮೂರು ಬೌಲ್ ದಪ್ಪಕ್ಕಿ, ಹೆಸರು ಬೇಳೆ ತೊಗರಿ ಬೇಳೆ, ನೆನೆಯಲಿಟ್ಟು ಹರಿಬರಿಯಲ್ಲಿ ತರಕಾರಿ ಹೊಟ್ಟೆ ಬಗಿದು ಸೀಳಿ, ವಗ್ಗರಣೆಗೆ ಅಣಿ ಮಾಡಿ ತುಸು ಹುಣಸೆಹಣ್ಣು ಬಿಸಿನೀರಿನ ಬಾಯಿಗೆ ಸುರಿದು ಕುಕ್ಕರ್ ತಳಕ್ಕೆ ಎರಡು ಚಮಚ ತುಪ್ಪ ಒಂದು ಚಮಚ ಎಣ್ಣೆ ಬಗ್ಗಿಸಿ, ಹದವಾಗಿ ಕಾದ ಎಣ್ಣೆಗೆ ಸೇಫಾದ ಅಂತರದಿಂದ ಜಿರಿಗೆ ಸಾಸಿವೆ ಇಂಗು ಕರಿಬೇವು ಎತ್ತಾಕಿ,ತರಕಾರಿ ಸುರಿದು ಮೂರುನಾಲಕ್ಕು ಬಾರಿ ಗರಗರನೆ ಹುರಿದು, ಎಸರಿಗಿಟ್ಟ ನೀರ ಎತ್ತರಿಸಿ ಹಾಕಿ, ನೆನೆಸಿಟ್ಟ ಅಕ್ಕಿ ಬೇಳೆ ಸುರಿದು.ಉಪ್ಪು ನೋಡಿ ಸ್ನಾನ ಪೂಜೆ ಮುಗಿಸಿ ಮಗಳ ಶಾಲೆ ತಯಾರಿ ನಡೆಸಿ. ಇವರ ಬಿಸಿನೀರು ಚಾ ಸೇವೆ ಸಂಪನ್ನ ಮಾಡಿ. ಗ್ಯಾಸ್ ಸ್ವವ್ ಆರಿಸಿಮುಚ್ಚಳ ಬಿಡಿಸಿದರೆ ಮನೆಯಲ್ಲ ಘಮಘಮ ಬಿಸಿಬೇಳೆ ಬಾತಿನ ಹಬೆ. ಡಬ್ಬಿ ತುಂಬಿ ಇವರಿಬ್ಬರಿಗೂ (ಮಗಳು,ಗಂಡ) ಜೋರು ಮಾಡಿ ತಟ್ಟೆಯಲ್ಲಿ ಒಂದಿಷ್ಟು ಬಿಸಿಬೇಳೆಬಾತ್ ಉಳಿಯದಂತೆ ತಿನ್ನಿಸಿ ಎಂಟುವರೆಗೆಲ್ಲ ಅವರು ಹೊರಟ ನಂತರ ಮೇಲ್ಮನೆ ಶಿಅಲ್ಪಳ ಡಬ್ಬ ಒಂದಕ್ಕೆ ಅದೆ ಬಿಸಿಬೇಳೆ ಬಾತ್ ತುಂಬಿ ಅವರಿಗೂ ಕೊಟ್ಟು. ತಾನು ತಿಂಡಿ ತಿಂದು ಎಲ್ಲ ಕಿಟಕಿ ಹಾಕಿ, ಲೈಟ್, ಎಕ್ಸಾಸ್ಟ್ ಫ್ಯಾನ್ ಆಫ್ ಆಗಿದ್ದನ್ನ ಕನ್ಫರ್ಫ್ ಮಾಡಿಕೊಂಡು ಹೊರಟಾಗ ಒಂಬತ್ತು ಗಂಟೆ…..
ಇದು ಆರಂಭ…
********************
ದೀಪಾ ಗೋನಾಳ
ದೀಪಾ ಗೋನಾಳ
ಕವಯಿತ್ರಿ-
ತಂತಿ ತಂತಿಗೆ ತಾಗಿ ಪ್ರಕಟಿತ ಸಂಕಲನ
ಅಂಚೆ ಇಲಾಖೆಯಲ್ಲಿ ಕರ್ತವ್ಯ.
ಊರುಕೇರಿ-ಹಾನಗಲ್ – ಹಾವೇರಿ