ಕಾವ್ಯ ಸಂಗಾತಿ
ಭಾವ-ಶೂನ್ಯ
ಇತ್ತೀಚೆಗೆ
ನನ್ನೊಳಗೊಂದು ಖಾಲಿತನ
ಎಲ್ಲ ಇದ್ದೂ
ಏನೂ ಇಲ್ಲದ ಭಾವ-ಶೂನ್ಯ
ಮನೆಯ ಮೂಲೆಯಲ್ಲಿ
ಒಬ್ಬಳೇ ಗೋಡೆಗೆ
ಅಂಟಿಕೊಂಡು ಕುಳಿತುಬಿಡುತ್ತೇನೆ
ಎಲ್ಲ ಗೊಡವೆಗಳನ್ನೂ ಮರೆತು
ಯಾವುದೋ ಸ್ತಬ್ಧ ಲೋಕದಲ್ಲಿ
ನಿಶ್ಯಬ್ದವಾಗಿ ಸಂಚರಿಸುತ್ತೇನೆ
ಅಲ್ಲಿ ದುಃಖ ಮಡುಗಟ್ಟಿದೆ
ಸಮಸ್ಯೆಗಳು ಮತ್ತಷ್ಟೂ ತೂಕವೆನಿಸುತ್ತವೆ
ನಿದ್ರೆ ಇರದೆ ಹೊರಳಾಡುವೆ
ಹಸಿವಿಲ್ಲದೆ ನರಳಾಡುವೆ
ಉಬ್ಬುತಗ್ಗುಗಳು ಸಣ್ಣಾಗಿ ದೇಹದ ತೂಕ ಕರಗಿ
ಮನಸ್ಸು ಭ್ರಮೆಗಳೊಳಗೆ ಒರಗಿ
ಸಾವಿನ ನೇಣಿಗೆ ಕೊರಳೊಡ್ಡುವ ಬಯಕೆಗೆ
ಆವರಿಸುವ ಭಯ, ಏಕಾಂಗಿ ಖಿನ್ನತೆಗೆ
ಸಾವಿನೆಡೆಗೆ ಸಾಗಬೇಕೆಂದು
ನೀರಿನೊಳಗೆ ಧುಮುಕಿದರೂ
ಕಣ್ಣು ಭೂಮಿಯೆಡೆಗೆ ಹೊರಳುವುದು
ಕೈಬೀಸಿ ಸಂಗಾತಿಯನ್ನು ಬೇಡುವುದು
ಆಗ,
ಕಾಣದ ಹಸ್ತವೊಂದು
ತನ್ನೆಡೆಗೆ ಸೆಳೆದುಕೊಂಡು
ಜೀವ ಭಿಕ್ಷೆ ನೀಡಿದರೆ
ಮುರಿದ ರೆಕ್ಕೆ, ಮತ್ತೆ ಹಾರಿ
ಬಾನ ಸೇರಿ, ನಗುವ ಬೀರಿ
ತನ್ನ ಜೀವಕ್ಕೆ ಬೆಳಕ ತೋರಿ
ಒಲವ ದಾರಿ ಹಿಡಿಯುತ್ತದೆ.
ಒಲವು