ಗಜಲ್
ನಿಮ್ಮ ಕನಸಿನ ಕನ್ಯೆಗಾಗಿ…
ಅಮೃತಾ ಶೆಟ್ಟಿ ಶಿವಪುರ
ಆಗಸವ ತೋರಿಸಿ ಮಿನುಗುವ ನಕ್ಷತ್ರಗಳ ಎಣಿಸಲು ಬರುವೆನೆಂದಳು
ಬೊಗಸೆಗೆ ಧಾವಿಸಿ ತಣ್ಣೀರಾಗಿ ಬಾಯಾರಿಕೆ ತಣಿಸಲು ಬರುವೆನೆಂದಳು
ಪ್ರೇಮ ಕಾವ್ಯವ ಬರೆಯಲು ಬಾಳ ಪುಸ್ತಕವ ತೆರೆಯುವೆಯಾ
ಹಸಿದ ಒಡಲಿಗೆ ತುತ್ತನ್ನವ ಹೊಸೆದು ಉಣಿಸಲು ಬರುವೆನೆಂದಳು
ಮೂಡಿದ ಕನಸನು ಬಾಡದ ಹಾಗೆ ಕೊಡಿಸೆಂದು ಬೇಡುವೆ
ಮನದೊಳಗೆ ಅವಿತ ನೂರಾಸೆಗಳಿಗೆ ಪಟದಂತೆ ಕುಣಿಸಲು ಬರುವೆನೆಂದಳು
ಹೃದಯದ ದಾರಿಲಿ ಅವಳಿರಿಸಿದ ಹೆಜ್ಜೆಯ ಗುರುತು ಮಾಸಲಾರದು
ಒಳಿತು ಕೆಡುಕಿನ ಭಾವಗಳ ಅಳೆದು ಗುಣಿಸಲು ಬರುವೆನೆಂದಳು
ಅಮ್ಮಿಯು ಒಲವಿನ ಸ್ವತ್ತನು ನೆನಪಿನ ಮೂಟೆಲಿ ಹುಡುಕುವಳು
ಸರಿಸಿದಷ್ಟು ಹಾರುವ ಮುಂಗುರುಳ ಮೊಂಡುತ ಮಣಿಸಲು ಬರುವೆನೆಂದಳು
***************
(ನಿಮ್ಮ ಕನಸಿನ ಕನ್ಯೆಗಾಗಿ… ಗಝಲ್ ಇದು ಶ್ರೀ ಹೊನ್ಕಲ್ ಸರ್ ಗೆ ಅರ್ಪಣೆ)
