ಧಾರಾವಾಹಿ

ಆವರ್ತನ

ಅದ್ಯಾಯ-56

4,261 Uprooted Tree Stock Photos, Pictures & Royalty-Free Images - iStock

ಗುರೂಜಿಯವರಿಗೆ ಸರಕಾರ ಜಾರಿಗೊಳಿಸಿದ ನೋಟೀಸಿನ ಸಂಕ್ಷಿಪ್ತ ವಿವರ ಹೀಗಿತ್ತು: ಶ್ರೀಯುತ ಏಕನಾಥ ಗುರೂಜಿಯವರ ಗಮನಕ್ಕೆ…,

   “ತಾವು ಹಾಗೂ ತಮ್ಮಂತಹ ಕಾಯಕದಲ್ಲಿ ತೊಡಗಿರುವ ಅನೇಕರು ಹಿಂದೂ ಪುರಾಣ, ವೇದೋಪನಿಷತ್, ಭಗವದ್ಗೀತೆ ಅಥವಾ ಇನ್ನಿತರ ಯಾವ ಶಾಸ್ತ್ರಗ್ರಂಥಗಳಲ್ಲೂ ಉಲ್ಲೇಖವಿಲ್ಲದಿರುವಂಥ ವಿವಿಧ ಬಗೆಯ ‘ದೋಷ, ಶಾಪ’ ಗಳ ಪಟ್ಟಿಯನ್ನು ತಯಾರಿಸಿಕೊಂಡು ಆ ಮೂಲಕ, ‘ನೈಸರ್ಗಿಕ ಪರಿಸರ ಮತ್ತು ಕಾಡು, ಗುಡ್ಡಗಳ ಜೀರ್ಣೋದ್ಧಾರ!’ ಎಂಬ ಅರ್ಥವಿಲ್ಲದ ಮೌಢ್ಯಾಚರಣೆಗಳನ್ನು ಸೃಷ್ಟಿಸಿಕೊಂಡು ಹಿಂದೂಧರ್ಮ ಮತ್ತದರ ಪವಿತ್ರ ಧಾರ್ಮಿಕತೆ ಹಾಗೂ ಅದಕ್ಕೆ ಸಂಬಂಧಿಸಿದ ಜನರ ನಂಬಿಕೆ, ಸಂಪ್ರದಾಯಗಳನ್ನು ಮನಸೋಇಚ್ಛೆ ದುರುಪಯೋಗಪಡಿಸಿಕೊಳ್ಳುತ್ತ ದುರ್ಬಲರು ಮತ್ತು ಅಮಾಯಕರನ್ನು ಶೋಷಿಸುತ್ತ ಬಂದಿರುವಿರಿ ಮಾತ್ರವಲ್ಲದೇ ಅರಣ್ಯಕಾಯ್ದೆ, ಕಾನೂನುಗಳನ್ನೂ ಗಾಳಿಗೆ ತೂರಿ ಪ್ರಾಚೀನ ನಿಸರ್ಗ ಸಂಪತ್ತನ್ನು ನಾಶಗೊಳಿಸುತ್ತ ಪ್ರಕೃತಿಯ ಮೇಲೆ ನಾನಾ ಬಗೆಯಿಂದ ಅತ್ಯಾಚಾರವೆಸಗುವಂಥ ಅಕ್ಷಮ್ಯ  ಅಪರಾಧವನ್ನೆಸಗುತ್ತಿರುವಿರಿ!” ಎಂದು ‘ಹಸಿರೇ ಉಸಿರು’ ಎಂಬ ಪ್ರಸಿದ್ಧ ಪರಿಸರ ಸಂರಕ್ಷಣಾ ಸಂಸ್ಥೆ ಹಾಗೂ ‘ಹಿಂದೂ ಧಾರ್ಮಿಕ ಸಂಸ್ಕøತಿ ಹಿತರಕ್ಷಣಾ ವೇದಿಕೆ’ಗಳು ಜಂಟಿಯಾಗಿ ಆರೋಪಿಸಿರುತ್ತವೆ. ಅಲ್ಲದೇ, ‘ನೈಸರ್ಗಿಕ ಸಂಪತ್ತುಗಳ ಲೂಟಿ!’ ಮತ್ತು ‘ಪ್ರಾಚೀನ ಹಿಂದೂ ಧರ್ಮ ಮತ್ತು ಅದರ ಸಂಸ್ಕøತಿಯ ಅವಹೇಳನ!’ ಎಂಬ ವಿಷಯದ ಮೇಲೂ ಆ ಸಂಸ್ಥೆಗಳು ತಮ್ಮ ಹಾಗೂ ತಮ್ಮೊಂದಿಗೆ ಭಾಗಿಯಾದ ಅನೇಕರ ಮೇಲೆ ಹಲವಾರು ದೂರುಗಳನ್ನು ದಾಖಲಿಸಿರುತ್ತವೆ. ಆದ್ದರಿಂದ ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರವು ಆ ಕುರಿತು ಸಮಗ್ರ ತನಿಖೆಯನ್ನೂ ನಡೆಸಿತು. ಅದರಿಂದ ತಮ್ಮೆಲ್ಲರ ಇಂಥ ಹೇಯಕೃತ್ಯಗಳಿಂದ ನಾಡಿನಲ್ಲಿ ನಾಶಗೊಂಡ ಹಲವಾರು ಪ್ರದೇಶಗಳ ಸುತ್ತಮುತ್ತ ಜಲ ಕ್ಷಾಮ, ವಾಯುಮಾಲಿನ್ಯ ಹಾಗು ಭೂತಾಪಮಾನಗಳಂಥ ನಾನಾ ಬಗೆಯ ಪ್ರಕೃತಿ ವಿಕೋಪಗಳು ಸೃಷ್ಟಿಯಾಗಿರುವುದೂ ದೃಢಪಟ್ಟಿದೆ.  

   ಅರಣ್ಯ ಮತ್ತು ವನ್ಯಜೀವಿ ಕಾಯ್ದೆಯನ್ವಯ ಸರಕಾರಿ ಹಾಗು ಖಾಸಗಿ ಮರಮಟ್ಟು, ಬನ, ಅರಣ್ಯ, ಕಾಡುಗುಡ್ಡ ಅಥವಾ ಇನ್ನಿತರ ಯಾವುದೇ ನೈಸರ್ಗಿಕ ಸಂಪತ್ತುಗಳನ್ನು ಬಳಸಿಕೊಳ್ಳಲು ಅಥವಾ ತೆರೆವುಗೊಳಿಸಲು ಅರಣ್ಯ ಇಲಾಖೆ ಮತ್ತು ಇನ್ನಿತರ ಸರಕಾರಿ ಇಲಾಖೆಗಳ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಆದರೆ ತಾವುಗಳು ಅಂಥ ಕಾನೂನು, ಕಟ್ಟಲೆಗಳನ್ನು ಸಂಪೂರ್ಣ ನಿರ್ಲಕ್ಷ್ಯಿಸಿ ಪರಿಸರ ನಾಶದಲ್ಲಿ ಪ್ರಮುಖ ಪಾತ್ರವಹಿಸಿರುವಿರಿ. ಆದ್ದರಿಂದ ತಾವೆಲ್ಲರೂ ಮೇಲೆ ಕಾಣಿಸಲಾದ ವಿಧ್ವಂಸಕ ಕೃತ್ಯಗಳನ್ನು ಈ ಕೂಡಲೇ ನಿಲ್ಲಿಸಬೇಕು ಹಾಗು ಇದಕ್ಕೆ ಸಂಬಂಧಿಸಿದ ನೋಟೀಸುಗಳು ತಮಗೆ ಬಂದು ತಲುಪಿದ ಕೂಡಲೇ ಕೋರ್ಟಿಗೆ ಹಾಜರಾಗಿ ಮೊಕದ್ದಮೆ ಎದುರಿಸಬೇಕಾಗಿ ವಿನಂತಿ. ತಪ್ಪಿದಲ್ಲಿ ಕಾನೂನು ರೀತಿಯಲ್ಲಿ ತಮ್ಮನ್ನು ಬಂಧಿಸಿ ವಿಚಾರಣೆಗೊಳಿಸಲಾಗುವುದು ಎಂದು ಈ ಮೂಲಕ ತಿಳಿಸಲಿಚ್ಛಿಸುತ್ತೇವೆ!” ಎಂಬ ಒಕ್ಕಣೆಯಿದ್ದ ಮತ್ತು ಸರಕಾರದ ಮುಖಮುದ್ರೆ ಹೊತ್ತ ನೋಟೀಸನ್ನು ಗುರೂಜಿಯವರಿಗೆ ಕಳುಹಿಸಲಾಯಿತು.

                                                            ***

ಅಂದು ಮುಂಜಾನೆ ಗುರೂಜಿಯವರು ಒಂದು ಗಳಿಗೆ ಮನೆ ದೇವರ ಪೂಜೆಯನ್ನು ಭಕ್ತಿಯಿಂದ ನೆರವೇರಿಸಿದವರು, ಹಿಂದಿನ ದಿನ ರಾತ್ರಿ ಉದ್ಯಮಿಯೊಬ್ಬನ ವಿರುದ್ಧ ಅವನ ಶತ್ರುವೊಬ್ಬ ಮಾಡಿಸಿದ್ದ ಕೃತ್ರಿಮ ವಿಧಿಯೊಂದರಲ್ಲಿ ಉಳಿದಿದ್ದ ಮನುಷ್ಯನ ಅಸ್ಥಿಯನ್ನು ಸಮುದ್ರದಲ್ಲಿ ವಿಸರ್ಜಿಸಲು ಹತ್ತು ಗಂಟೆಯ ಸುಮಾರಿಗೆ ಹೊರಟಿದ್ದರು. ಅದೇ ಹೊತ್ತಿಗೆ ಅಂಚೆ ಪೇದೆ ಉಮೇಶ ಅವರ ಮನೆಯೆದುರು ಬಂದು ತನ್ನ ಬೈಕು ನಿಲ್ಲಿಸಿ ಗೇಟು ತೆರೆದು ಒಳಗೆ ಬರುವುದಕ್ಕೂ ಗುರೂಜಿಯವರು ಮನೆಯಿಂದ ಹೊಸ್ತಿಲು ದಾಟುವುದಕ್ಕೂ ಸರಿ ಹೋಯಿತು. ಅವರು ಉಮೇಶನನ್ನು ಅಸಹನೆಯಿಂದ ದಿಟ್ಟಿಸಿದವರು, ‘ಥೂ, ಅಪಶಕುನದ ಮುಂಡೇಮಗ…!’ ಎಂದು ಮನಸ್ಸಿನಲ್ಲೇ ಬೈದುಕೊಂಡರು. ಆದರೆ ಮುಖದ ಮೇಲೆ ವಿಶಾಲ ನಗು ತಂದುಕೊಂಡವರು ಅವನು ನಮ್ರನಾಗಿ ನೀಡಿದ ನೋಟೀಸು ತೆಗೆದುಕೊಂಡು, ಅವನು ತೋರಿಸಿದ ಪತ್ರಕ್ಕೆ ಸಹಿ ಹಾಕಿದರು. ಬಳಿಕ ಅವನು ಕೈಮುಗಿದು ಹೊರಟು ಹೋದ. ಹೊರಡುವ ಗಡಿಬಿಡಿಯಲ್ಲಿದ್ದ ಗುರೂಜಿಯವರು, ‘ನೋಡಮ್ಮಾ ದೇವಕೀ…!’ ಎಂದು ಹೆಂಡತಿಯನ್ನು ಕರೆದರು. ಅವಳು ಆಹೊತ್ತು ನಿಲುಗನ್ನಡಿಯ ಮುಂದೆ ನಿಂತುಕೊಂಡು ತಲೆ ಕೂದಲು ಬಾಚಿಕೊಳ್ಳುತ್ತಿದ್ದವಳು ಗಂಡನ ಧ್ವನಿ ಕೇಳಿ, ‘ಹ್ಞಾಂ, ಬಂದೇರೀ…’ ಎನ್ನುತ್ತ ಹೊರಗೆ ಬಂದಳು. ಗುರೂಜಿಯವರು ತಮ್ಮ ಕೈಯಲ್ಲಿದ್ದ ಪತ್ರವನ್ನು ನಾಲ್ಕೈದು ಬಾರಿ ಹಿಂದೆ ಮುಂದೆ ತಿರುಗಿಸಿ ನೋಡಿದರಾದರೂ ತಮ್ಮ ಹಿಂದಿನ ದಿನದ ಕೃತ್ರಿಮ ವಿಧಿಗೆ ಇವತ್ತು ಪಡೆಯಲಿದ್ದ ರೂಪಾಯಿಗಳ ಬಗ್ಗೆಯೇ ಅವರ ಯೋಚನೆ ಸಾಗಿತ್ತು. ಆದ್ದರಿಂದ ಪತ್ರವನ್ನು ಹಾಗೆಯೇ ಪತ್ನಿಯ ಕೈಗೆ ಕೊಟ್ಟು, ‘ದೇವಸ್ಥಾನಕ್ಕೆ ಸಂಬಂಧಿಸಿ ಭಾಕ್ತಾದಿಗಳ ದಾನ ಪತ್ರವಿರಬಹುದು. ಟೇಬಲ್ ನ ಮೇಲಿಟ್ಟಿರು. ಹೊರಗೆ ಹೋಗಿ ಬಂದು ನೋಡುತ್ತೇವೆ’ ಎಂದು ನಗುತ್ತ ಹೇಳಿ ಕಾರು ಹತ್ತಿದರು. ದೇವಕಿಯೂ ಅದರತ್ತ ಗಮನಕೊಡದೆ ಕೊಂಡೊಯ್ದು ಟೀಪಾಯ್ ಮೇಲೆ ಎಸೆದು ಒಳಗೆ ನಡೆದಳು.

   ಸಂಜೆಯವರೆಗೆ ಪೇಟೆಯಲ್ಲಿ ತಮ್ಮ ಕೆಲವಾರು ಕೆಲಸಕಾರ್ಯಗಳನ್ನೆಲ್ಲ ಮುಗಿಸಿಕೊಂಡ ಗುರೂಜಿಯವರು ಮನೆಗೆ ಬರುವಷ್ಟರಲ್ಲಿ ಸುಸ್ತಾಗಿದ್ದರು. ಕೈಕಾಲು ತೊಳೆದು ವರಾಂಡಕ್ಕೆ ಬಂದು ನಿಟ್ಟುಸಿರು ಬಿಡುತ್ತ ಸೋಫಾದಲ್ಲಿ ಕುಳಿತು, ಟೀಪಾಯ್ ಮೇಲೆ ಕಾಲು ಚಾಚಿ ವಿಶ್ರಮಿಸಿದರು. ದೇವಕಿಯಿಂದ ಕಾಫಿ ತರಿಸಿಕೊಂಡು ಕುಡಿಯುತ್ತ ರಿಜಿಸ್ಟ್ರರ್ಡ್ ಪತ್ರವನ್ನು ಎತ್ತಿಕೊಂಡು ಓದತೊಡಗಿದರು. ಆದರೆ ಒಂದೆರಡು ಸಾಲು ಓದುತ್ತ ಹೋದಂತೆ ಅವರ ಹೃದಯ ಜೋರಾಗಿ ಬಡಿದುಕೊಳ್ಳತೊಡಗಿತು. ವಿಶ್ವಸಂಸ್ಥೆಯ ನಿರ್ಧಾರದ ಮೇರೆಗೆ ಹೊಸ ಚೈತನ್ಯ ಪಡೆದಿದ್ದ ಭಾರತದ ಅರಣ್ಯ ಮತ್ತು ವನ್ಯಜೀವಿ ಕಾನೂನು, ಕಾಯ್ದೆಗಳು ಮತ್ತು ಅವು ವಿಧಿಸಬಹುದಾದ ಘೋರ ಶಿಕ್ಷೆಗಳ ಕುರಿತು ಒಂದಷ್ಟು ಸಾಮಾನ್ಯ ಜ್ಞಾನವಿದ್ದ ಗುರೂಜಿಯವರು ಪತ್ರವನ್ನು ಪೂರ್ಣವಾಗಿ ಓದಿದವರು ತೀವ್ರ ಭಯಕ್ಕೆ ಬಿದ್ದು, ಅಯ್ಯಯ್ಯೋ ದೇವರೇ…! ಇದೆಂಥ ಅನಾಹುತವಾಗಿ ಬಿಟ್ಟಿತಪ್ಪಾ…! ಎಂದು ಉದ್ಗರಿಸಿ ತಲೆಗೆ ಕೈಹೊತ್ತು ಕುಳಿತರು. ಬಳಿಕ ಅವರನ್ನು ಅದೇ ಚಿಂತೆ ತೀವ್ರವಾಗಿ ಕಾಡತೊಡಗಿತು. ಅಲ್ಲಾ, ತಾವು ಜನರ ಅಜ್ಞಾನ, ಅಹಂಕಾರ ಮತ್ತು ಸ್ವಾರ್ಥ ಮನೋಭಾವಗಳನ್ನು ಹೋಗಲಾಡಿಸಿ ನಾಡಿನ ದೈವದೇವರುಗಳ ಮೇಲೆ ಅವರಲ್ಲಿ ಭಯಭಕ್ತಿಯನ್ನು ಹುಟ್ಟಿಸುತ್ತ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕೆಂಬ ಉದ್ದೇಶದಿಂದಲೇ ಈವರೆಗೆ ರಾತ್ರಿ ಹಗಲೆನ್ನದೆ ಶ್ರಮಿಸುತ್ತ ಪ್ರಸಿದ್ಧಿಗೆ ಬಂದವರು. ಆದ್ದರಿಂದ ಅಂಥ ಸತ್ಕಾರ್ಯಕ್ಕಾಗಿಯೇ ತಾವು ಕಷ್ಟಪಟ್ಟು ಕಟ್ಟಿಕೊಂಡಿರುವ ಭದ್ರವಾದ ಧಾರ್ಮಿಕ ಕೋಟೆಯೊಂದು ಇವತ್ತು ಸಮಾಜದ ಕೆಲವು ದುಷ್ಟಶಕ್ತಿಗಳ ಕೆಟ್ಟ ಧೋರಣೆಗೂ, ಆ ಹಾಳಾದ ಪರಿಸರ ಸಂರಕ್ಷಣೆಯ ಕಾರಣಕ್ಕೂ ಒಡೆದು ಛಿಧ್ರವಾಗಲಿದೆಯೇ…? ಅಯ್ಯೋ ದೇವರೇ…! ಇನ್ನೇನು ಮಾಡುವುದಪ್ಪಾ! ಒಂದುವೇಳೆ ಹಾಗಾಗಿ ಬಿಟ್ಟರೆ ಮುಂದೆ ಈ ಸಮಾಜದಲ್ಲಿ ತಮ್ಮ ಆಸ್ತಿ ಅಂತಸ್ತು, ಘನತೆ ಗೌರವಗಳೆಲ್ಲ ಏನಾಗಿ ಹೋದಾವು…!? ಎಂದುಕೊಂಡವರನ್ನು ಕರುಳು ಕತ್ತರಿಸುವಂಥ ಹತಾಶೆಯು ಆವರಿಸಿಕೊಂಡಿತು. ಅದರ ಹಿಂಸೆ ಸಹಿಸಲಾಗದೆ ಗಳಗಳನೇ ಅಳುತ್ತ ಸ್ಥಿಮಿತಕ್ಕೆ ಬರಲು ಹೆಣಗಿದರು. ಆದರೂ ಅವರ ಮನಸ್ಸಿನ ಕ್ಷೋಭೆ ಕಡಿಮೆಯಾಗಲಿಲ್ಲ. ಅದೇ ಹೊತ್ತಿಗೆ ಅವರನ್ನು ಮತ್ತಷ್ಟು ಹಿಂಸಿಸಲೆಂಬಂತೆ ಪೆದುಮಾಳರ ನೆನಪೂ ಅವರಲ್ಲಿ ಒತ್ತರಿಸಿ ಬಂತು. ಅಂದು ಸಾವಿನ ದಿನಗಳನ್ನೆಣಿಸುತ್ತ ಮಲಗಿದ್ದ ಪೆದುಮಾಳರು ತಮ್ಮ ಮುಖವನ್ನು ನೋಡಿ ವ್ಯಂಗ್ಯವಾಗಿ ನಕ್ಕಿದ್ದು ಕಣ್ಣಮುಂದೆ ಬಂದು ವಿಕಾರವಾಗಿ ಕುಣಿಯಿತು. ಅದರ ಬೆನ್ನಿಗೆ, ‘ಅನ್ಯಾಯವೆಂಬುದು ಬಹಳ ಕಾಲ ಬಾಳುವುದಿಲ್ಲ!’ ಎಂಬ ಯೋಚನೆಯೊಂದೂ ಅವರ ಅಂತರಾಳದಿಂದೆದ್ದು ಬಂದು ಅಣಕಿಸಿದಂತಾಯಿತು. ಅದರಿಂದ ಮತ್ತಷ್ಟು ವಿಚಲಿತರಾದರು.

   ಅಷ್ಟೊತ್ತಿಗೆ ಕಾಫಿಯ ಲೋಟವನ್ನು ಕೊಂಡೊಯ್ಯಲು ಬಂದ ದೇವಕಿ ಗಂಡನ ಸ್ಥಿತಿಯನ್ನು ಕಂಡು ಅವಕ್ಕಾದಳು. ‘ಅಯ್ಯಯ್ಯೋ ದೇವರೇ…! ಏನಾಯ್ತು ಮಾರಾಯ್ರೇ ಯಾಕೆ ಅಳುತ್ತಿದ್ದೀರಿ…?’ ಎಂದು ಅವರ ಪಕ್ಕದಲ್ಲಿ ಕುಳಿತು ಆಂತಕದಿಂದ ಪ್ರಶ್ನಿಸಿದಳು. ಹೆಂಡತಿಯನ್ನು ಕಂಡ ಗುರೂಜಿಯವರ ದುಃಖ ದುಪ್ಪಟ್ಟಾಯಿತು. ‘ಹೋಯ್ತು, ಹೋಯ್ತು ಮಾರಾಯ್ತೀ, ಎಲ್ಲಾ ಮುಗಿದು ಹೋಯಿತು…! ನಾನು ಸಂಪೂರ್ಣ ಮುಳುಗಿಬಿಟ್ಟೆ. ಜೊತೆಗೆ ನಿನ್ನನ್ನೂ ಮಕ್ಕಳನ್ನೂ ನಡುನೀರಿನಲ್ಲಿ ಕೈಬಿಟ್ಟೆ. ಅಯ್ಯೋ ಮುಖ್ಯಪ್ರಾಣಾ…!’ ಎಂದು ಬಹಳ ವರ್ಷಗಳ ನಂತರ ಮೊದಲ ಬಾರಿಗೆ ತಮ್ಮನ್ನು ತಾವು ಏಕವಚನದಲ್ಲಿ ಸಂಭೋದಿಸಿಕೊಂಡು ಸಂಕಟಪಡುತ್ತ ಮತ್ತಷ್ಟು ಅತ್ತರು. ಬಳಿಕ ಪತ್ರವನ್ನು ದೇವಕಿಯ ಕೈಗಿತ್ತು ಶೂನ್ಯದತ್ತ ದೃಷ್ಟಿ ನೆಟ್ಟು ಕುಳಿತರು. ಆಗ ಅವಳೂ ಕಣ್ಣೀರೊರೆಸಿಕೊಳ್ಳುತ್ತ ಪತ್ರವನ್ನು ಓದಿದವಳ ದೇಹವಿಡೀ ಕಂಪಿಸಿತು. ಆದರೆ ಆ ಸಮಯದಲ್ಲಿ ತಾನೂ ಧೃತಿಗೆಟ್ಟರೆ ಗಂಡ ಇನ್ನಷ್ಟು ಕುಸಿಯುತ್ತಾರೆ ಎಂದುಕೊಂಡವಳು ತಕ್ಷಣ ತನ್ನನ್ನು ಹತೋಟಿಗೆ ತಂದುಕೊಂಡು, ‘ಅರೆರೇ… ಇಷ್ಟಕ್ಕೆಲ್ಲ ಅಳುವುದಾ ಮಾರಾಯ್ರೇ…? ಇದೊಂದು ಬರೇ ನೋಟೀಸಲ್ಲವಾ…! ಆದರೆ ಈ ಕಿತಾಪತಿಯೆಲ್ಲ ಯಾರದ್ದು ಅಂತ ಒಮ್ಮೆ ತಾಳ್ಮೆಯಿಂದ ಯೋಚಿಸಿ ನೋಡಿ. ನಮ್ಮ ಏಳಿಗೆ ಮತ್ತು ಶ್ರೀಮಂತಿಕೆಯನ್ನು ಸಹಿಸಲಾಗದ ಯಾರೋ ಹಾಳು ಜನರು ನಮ್ಮ ಮೇಲೆ ಮಾಡಿರುವ ಮಸಲತ್ತಿದು. ಇಷ್ಟಕ್ಕೆಲ್ಲ ಎದೆಗುಂದಿದರೆ ಹೇಗೆ ಹೇಳಿ? ಈ ಸಮಾಜದಲ್ಲಿ ಒಳ್ಳೆಯ ಹೆಸರು ಮತ್ತು ಕೀರ್ತಿಯನ್ನು ಗಳಿಸಿದವರು ನೀವು. ಹಾಗಾಗಿ ಬಹಳಷ್ಟು ಜನರಿಗೆ ನಿಮ್ಮ ಮೇಲೆ ಭಯಭಕ್ತಿ ಇರುವಂತೆಯೇ ಒಂದಷ್ಟು ನೀಚರಿಗೆ ಮತ್ಸರವೂ ಇರಬಹುದಲ್ಲವಾ. ಆದ್ದರಿಂದ ಈ ಸಮಯದಲ್ಲಿ ನಾವು ಧೈರ್ಯಗೆಡಬಾರದು.

   ನಾಳೆಯೇ ಅರಣ್ಯ ಇಲಾಖೆಗೆ ಹೋಗಿ ಅವರನ್ನು ಮಾತಾಡಿಸಿ ಈ ವಿಷಯವನ್ನು ಅವರಿಂದ ಕೈಬಿಡಿಸಲು ಪ್ರಯತ್ನಿಸಿ. ಅವರು ನಮ್ಮ ದಾರಿಗೆ ಬರದಿದ್ದರೆ ಅವರಿಗೊಂದಷ್ಟು ದೊಡ್ಡ ಮೊತ್ತ ತಿನ್ನಿಸಿಯಾದರೂ ಸಮಸ್ಯೆಯನ್ನು ಅಲ್ಲಿಗೇ ಬಗೆಹರಿಸಿಬಿಡುವ. ಆದರೆ ಅವರು ಅದಕ್ಕೂ ಒಪ್ಪದಿದ್ದರೆ ಮುಂದೆ ಕೋರ್ಟಿಗೆ ಹೋಗುವುದಕ್ಕೂ ಸೈ! ನಾವು ಯಾವುದಕ್ಕೂ ಹಿಂಜರಿಯಬಾರದು. ಅಲ್ಲ ಮಾರಾಯ್ರೇ, ನಾವು ಅಂಥ ದೊಡ್ಡ ಅಪರಾಧವನ್ನಾದರೂ ಏನು ಮಾಡಿದ್ದೇವೆ ಅಂತ ಯೋಚಿಸಿ ನೋಡಿ! ಏನು ಊರು ಕೊಳ್ಳೆ ಹೊಡೆದಿದ್ದೇವಾ ಅಥವಾ ಸರಕಾರದ ಖಜಾನೆಗೆ ಖನ್ನಾ ಹಾಕಿದ್ದೇವಾ? ಅಂಥ ಯಾವ ತಪ್ಪನ್ನೂ ನಾವು ಮಾಡಿಲ್ಲವಲ್ಲ! ಜನರು ಅವರಾಗಿಯೇ ತಂತಮ್ಮ ಕಷ್ಟಕಾರ್ಪಣ್ಯಗಳನ್ನು ಹೊತ್ತುಕೊಂಡು ನಮ್ಮ ಮನೆಯ ಬಾಗಿಲಿಗೆ ಬರುತ್ತಾರೆ. ಅಂಥವರಿಗೆ ಸ್ವಲ್ಪ ಸಾಂತ್ವನ, ನೆಮ್ಮದಿ ತೋರಿಸುವ ರೀತಿಯಲ್ಲಿ ನಾವೂ ವ್ಯವಹರಿಸುತ್ತಿದ್ದೇವಷ್ಟೆ. ಹಾಗಾಗಿ ಅದೇನು ಬರುವುದೋ ಬರಲಿ, ಎದುರಿಸುವ!’ ಎಂದು ದೇವಕಿ ಗಂಡನಿಗೆ ಕೆಚ್ಚಿನಿಂದ ಆತ್ಮಸ್ಥೈರ್ಯ ತುಂಬಿದವಳು ಸೆರಗಿನಿಂದ ಅವರ ಕಣ್ಣೀರೊರೆಸಿದಳು. ಹೆಂಡತಿಯ ಮಾತುಗಳನ್ನು ಕೇಳಿದ ಗುರೂಜಿಯವರಿಗೆ, ತಾವು ಏಕಾಏಕಿ ಆಯ ತಪ್ಪಿ ಪ್ರಪಾತಕ್ಕೆ ಬೀಳಲಿದ್ದವರನ್ನು ಪತ್ನಿ ಧಾವಿಸಿ ಬಂದು ಹಿಡಿದೆತ್ತಿ ಆದರಿಸಿದಂತಾಯಿತು. ಆದ್ದರಿಂದ ಅವರು ಹೆಂಡತಿಯನ್ನು ಅಚ್ಚರಿ ಅಭಿಮಾನಗಳಿಂದ ದಿಟ್ಟಿಸಿದವರು, ಅಬ್ಬಾ ಇವಳ ಆತ್ಮವಿಶ್ವಾಸವೇ…! ಎಂದು ಮನಸ್ಸಿನಲ್ಲೇ ಉದ್ಗರಿಸಿ ಅವಳತ್ತ ಮೆಚ್ಚುಗೆಯ ದೃಷ್ಟಿ ಬೀರಿದರು. ಹಾಗಾಗಿ ಅವರ ಕಳೆದು ಹೋದ ಉತ್ಸಾಹವು ಮರಳಿ ತುಂಬಿಗೊಂಡಿತು.

‘ಹೌದು, ದೇವಕಿ ನೀನು ಹೇಳುವುದರಲ್ಲಿ ಅರ್ಥವಿದೆ. ಇಂಥ ಸಣ್ಣಪುಟ್ಟ ಸಮಸ್ಯೆಗಳಿಗೆಲ್ಲ ತಾವು ಇಷ್ಟೇಕೆ ಹೆದರಬೇಕು? ಇಲ್ಲ ಇನ್ನು ಮುಂದೆ ಯಾವುದಕ್ಕೂ ಸುಖಾಸುಮ್ಮನೆ ಎದೆಗುಂದಬಾರದು. ಬಹಳ ವರ್ಷಗಳ ನಂತರ ಬಂದಿರುವ ಈ ಒಂದು ಸಣ್ಣ ಕಂಟಕವನ್ನು ತಾವು ಎದುರಿಸಲು ಸಿದ್ಧರಾಗಬೇಕು ಎಂದು ನಿರ್ಧರಿಸಿ ಗೆಲುವಾದರು.

   ತನ್ನ ಮಾತಿನಿಂದ ಗಂಡನಲ್ಲಾದ ಬದಲಾವಣೆಯನ್ನು ಗಮನಿಸಿದ ದೇವಕಿ, ‘ಹೌದುರೀ…ನೀವ್ಯಾವತ್ತೂ ಕುಗ್ಗಬಾರದು. ಸದಾ ಹೀಗೆಯೇ ಗತ್ತು ಗಾಂಭೀರ್ಯದಿಂದಿರಬೇಕು!’ ಎಂದು ನಗುತ್ತ ಹೇಳಿ ಒಳಗೆ ನಡೆದಳು. ಆದರೆ ಅವಳು ಹೋದ ಸ್ವಲ್ಪಹೊತ್ತಿನ ನಂತರ ಗುರೂಜಿಯವರಲ್ಲಿ ಮತ್ತೊಂದು ನೋವಿನ ಯೋಚನೆ ಮೊಳೆಯಿತು. ಬಹಳಷ್ಟು ವರ್ಷಗಳಿಂದಲೂ ತಮ್ಮ ಪೂಜೆ ಪುನಸ್ಕಾರಗಳಂಥ ಆಚರಣೆಗಳಿಗೆ ಬಲಿಯಾಗಿ ಧರೆಗುರುಳುತ್ತ ಬಂದ ಅಪಾರ ಮರಗಿಡ ಬಳ್ಳಿಗಳು, ಬೆಟ್ಟಗುಡ್ಡಗಳು ಮತ್ತು ಅಸಂಖ್ಯಾತ ಮೂಕ ಜೀವರಾಶಿಗಳು ಹಾಗೂ ತೋಡು, ತೊರೆ, ಕೊಳ, ಮದಗಗಳೆಲ್ಲ ಬೇಡಬೇಡವೆಂದರೂ ಅವರೊಳಗೆ ವಿಕಾರವಾಗಿ ಊಳಿಡುತ್ತ ಹಿಂಸಿಸತೊಡಗಿದವು. ಅದರಿಂದ ಅವರು ಮರಳಿ ಅಶಾಂತರಾದರು. ಜೊತೆಗೆ ಅದಕ್ಕೆ ಪೂರಕವಾಗಿ ಸರಕಾರದ ಕಠೋರ ಕಾನೂನು, ಕಾಯ್ದೆಗಳ ಹೆದರಿಕೆಯೂ ಅವರನ್ನು ಮುತ್ತಿಕೊಂಡು ಇನ್ನಷ್ಟು ಹತಾಶರನ್ನಾಗಿಸಿತು. ಅಷ್ಟಾಗುತ್ತಲೇ ಇನ್ನೊಂದು ಆತಂಕವೂ ಅವರನ್ನಾವರಿಸಿತು. ತಾವು ಆತ್ಮಸಾಕ್ಷಿಯನ್ನೇ ಕೊಂದುಕೊಂಡು ಅಕ್ರಮವಾಗಿ ಸಂಪಾದಿಸಿದ ಆಸ್ತಿ ಐಶ್ವರ್ಯವನ್ನು ಸರಕಾರವು ದಿಢೀರ್ರನೇ ಮುಟ್ಟುಗೋಲು ಹಾಕಿಕೊಳ್ಳುವಂಥ ಕೆಟ್ಟ ಚಿತ್ರಣವೂ ಮತ್ತು ತಾವು ಇಷ್ಟು ವರ್ಷಗಳ ಕಾಲ ಸಂಪಾದಿಸಿದ ಘನತೆ, ಗೌರವಗಳು ಬೀದಿಪಾಲಾಗುವ ದೃಶ್ಯವೂ ಕಣ್ಣಮುಂದೆ ಕುಣಿಯಲಾರಂಭಿಸಿದ ಮೇಲೆ ಅವರು ಸಂಪೂರ್ಣ ಕುಸಿದುಬಿಟ್ಟರು. ಈಗ ತಾವು ಯೋಚಿಸಿದೆಲ್ಲವೂ ಒಂದುವೇಳೆ ನಿಜವಾಗಿಯೂ ನಡೆದು ಬಿಟ್ಟರೆ ಆಮೇಲೆ ತಾವು ಬದುಕಿದ್ದೇನು ಪ್ರಯೋಜನ? ಹಾಗಾದರೆ ಇಲ್ಲಿಯವರೆಗೆ ಇಷ್ಟೆಲ್ಲ ಯಾರಿಗಾಗಿ ಮತ್ತು ಯಾವುದಕ್ಕಾಗಿ ಒದ್ದಾಡಿಕೊಂಡು ಬದುಕಿದೆವು!? ಎಂಬ ಯೋಚನೆ, ಪ್ರಶ್ನೆಗಳು ಅವರನ್ನು ಅಸ್ವಸ್ಥಗೊಳಿಸಿಬಿಟ್ಟವು. ಆದ್ದರಿಂದ ಒಂದೇ ಸಮನೆ ಬೆವರಲಾರಂಭಿಸಿದರು. ಮತ್ತೆ ಅಲ್ಲಿ ಕೂರಲಾಗದೆ ಎದ್ದು ಕೋಣೆಗೆ ಹೋಗಿ ಹಾಸಿಗೆಯಲ್ಲಿ ಬಿದ್ದುಕೊಂಡು ಹೊರಳಾಡತೊಡಗಿದರು. ಅದರಿಂದ ಆವರೆಗೆ ಸಣ್ಣದಾಗಿ ಭಾದಿಸುತ್ತಿದ್ದ ರಕ್ತದೊತ್ತಡವು ಆ ರಾತ್ರಿ ಒಮ್ಮೆಲೇ ಉಲ್ಭಣಿಸಿಬಿಟ್ಟಿತು. ಬರಬರುತ್ತ ಅವರ ಹೃದಯ ಬಡಿತವೂ ಜೋರಾಗಿ ಭುಜ, ಕತ್ತು ಮತ್ತು ಎದೆಯ ಭಾಗಗಳೆಲ್ಲ ತೀವ್ರವಾಗಿ ನೋಯಲಾರಂಭಿಸಿದವು. ಆನಂತರದ ಸ್ವಲ್ಪಹೊತ್ತಿನಲ್ಲಿ ಅವರ ಹೃದಯವನ್ನು ಯಾರೋ ಬಲವಾಗಿ ಹಿಸುಕಿದಂಥ ನೋವೂ ಕಾಣಿಸಿಕೊಂಡಿತು. ಅದನ್ನು ಸಹಿಸಲಾಗದೆ ಎರಡು ಮೂರು ಬಾರಿ ತಣ್ಣಗೆ ಚೀರಿದವರ ಮೂಗಿನಲ್ಲಿ ತಟ್ಟನೆ ರಕ್ತದ ಹನಿಗಳು ತೊಟ್ಟಿಕ್ಕಿದವು. ಮರುಕ್ಷಣ ನೋವಿನಿಂದ ಉಸಿರುಗಟ್ಟಿದಂತಾಗಿ ತಣ್ಣಗೆ ಕಣ್ಣುಮುಚ್ಚಿದರು.

   ಗಂಡನ ನರಳಾಟದಿಂದ ದೇವಕಿಗೆ ತಟ್ಟನೆ ಎಚ್ಚರವಾಯಿತು. ದೀಪ ಬೆಳಗಿಸಿ ಗಮನಿಸಿದಳು. ಆದರೆ ಅಷ್ಟರಲ್ಲಿ ಅವರ ಸ್ಥಿತಿ ಗಂಭೀರವಾಗಿತ್ತು! ತಕ್ಷಣ ಕಾರು ಚಾಲಕನಿಗೂ, ಸಹಾಯಕ ಅಣ್ಣಪ್ಪನಿಗೂ ಕರೆ ಮಾಡಿದಳು. ಅವರು ಬಂದ ಕೂಡಲೇ ಗಂಡನನ್ನು ಆಸ್ಪತ್ರೆಗೆ ಕರೆದೊಯ್ದಳು. ಗುರೂಜಿಯವರನ್ನು ತಕ್ಷಣ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಯಿತು. ಆದರೆ ಅವರು ಅದಾಗಲೇ ಕೋಮಾಸ್ಥಿತಿಗೆ ತಲುಪಿದ್ದರು!

(ಮುಂದುವರೆಯುವುದು)


ಗುರುರಾಜ್ ಸನಿಲ್

ಗುರುರಾಜ್ಸನಿಲ್ಉಡುಪಿಇವರುಖ್ಯಾತಉರಗತಜ್ಞ, ಸಾಹಿತಿಯಾಗಿನಾಡಿನಾದ್ಯಂತಹೆಸರುಗಳಿಸಿದವರು. .‘ಹಾವುನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದಸುತ್ತಮುತ್ತ’, ‘ವಿಷಯಾಂತರ’ ‘ಕಮರಿದಸತ್ಯಗಳುಚಿಗುರಿದಸುದ್ದಿಗಳು’ ಮತ್ತುಅವಿಭಜಿತದಕ್ಷಿಣಕನ್ನಡಜಿಲ್ಲೆಗಳನೈಸರ್ಗಿಕನಾಗಬನಗಳಉಳಿವಿನಜಾಗ್ರತಿಮೂಡಿಸುವ ‘ನಾಗಬನವೆಂಬಸ್ವರ್ಗೀಯತಾಣ’ , ‘ಗುಡಿಮತ್ತುಬಂಡೆ’ ಎಂಬಕಥಾಸಂಕಲವನ್ನುಹೊರತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡುಕಾದಂಬರಿಗಳುಬಂದಿವೆ.‘ಹಾವುನಾವು’ ಕೃತಿಗೆಕರ್ನಾಟಕಸಾಹಿತ್ಯಅಕಾಡೆಮಿಯು 2010ನೇಸಾಲಿನ ‘ಮಧುರಚೆನ್ನದತ್ತಿನಿಧಿಪುಸ್ತಕಪ್ರಶಸ್ತಿ’ ನೀಡಿಗೌರವಿಸಿದೆ. ‘ ‘ಕರುಣಾಎನಿಮಲ್ವೆಲ್‍ಫೇರ್ಅವಾರ್ಡ್(2004)’ ‘ಕರ್ನಾಟಕಅರಣ್ಯಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕಕಾರ್ಮಿಕವೇದಿಕೆಯು ‘ಕರ್ನಾಟಕರಾಜ್ಯೋತ್ಸವಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತಉಡುಪಿಯಪುತ್ತೂರಿನಲ್ಲಿವಾಸವಾಗಿದ್ದಾರೆ

Leave a Reply

Back To Top