ವ್ಯಾಲಂಟೈನ್ ವಿಶೇಷ

ವಿಭಾ ಪುರೋಹಿತ

ಅವನ ದೇವರು ಬೇರೆಂಬ ಕಾರಣಕ್ಕೆ

ನನ್ನ ನಿನ್ನ ಹೆಸರು
ಕಲ್ಲುಗಳ ಮೇಲೆ ಬರೆದದ್ದು
ಹೃದಯದೊಳಗೆ ಮೂಡಿದ್ದು
ಆ ವಿಹಂಗಮತೆ ಸವಿದದ್ದು

ಗಾಳಿಗೆ ಪೈಪೋಟಿಯೊಡ್ಡಿ ಓಡಿದ್ದು
ಕಾಲುಗಳಿಗೆ ಚಕ್ರಮೂಡಿತ್ತೋ
ರೆಕ್ಕೆ ಬಂದಿತ್ತೋ ನಮಗರಿಯದು!

ಹೊಸಬಾಳ್ವೆಯ ಮುನ್ನುಡಿ ಬರೆಯಬೇಕೆಂದದ್ದು
ಅಷ್ಟರಲ್ಲೇ ಅಕ್ಷರಗಳು ರೂಕ್ಷವಾಗಿ
ಅಸ್ತಂಗತವಾಗಿದ್ದು
ಆ ಇತಿಹಾಸದ ಪುಟಗಳಿಗೆ ನೆನಪಿದೆ
ಖಾಸಾ…ಖಾಸಾ…

ನೀವಿ …. ನೀವಿ…. ಜೋಡಿಸಿಟ್ಟ
ಚರಿತೆಯ ನಾಜೂಕಾದ ನಿರಿಗೆಗಳು
ನಮ್ಮೊಡಲ ತುಂಬ ಮಾಯದ ಗಾಯದ
ಗೀರುಗಳಿವೆ….

ಮನುಕುಲದ ಅಭಿಶಾಪವೋ ಏನೋ
ಅವನ ದೇವರು ಬೇರೆಂಬ ಕಾರಣಕ್ಕೆ
ಇಂದು ನಾವೇ ದೇವರಾಗಿದ್ದೇವೆ !!!
ನಮಗೆ ಪ್ರೀತಿಯೇ ದೇವರೆಂಬುದು
ಯಾರಿಗೂ ತಿಳಿಯಲೇಯಿಲ್ಲ !!!


Leave a Reply

Back To Top