
ವ್ಯಾಲಂಟೈನ್ ವಿಶೇಷ
ಗಜಲ್
ಭಾರತಿ ರವೀಂದ್ರ

ಕವಿತೆ ಬರೆಯಲು ಹೊರಟು
ಕಥೆಯಾಗಿ ಬಂದೆಯಲ್ಲ ನೀನು
ಮಮತೆ ಮೆರೆಯಲು ಪ್ರೀತಿಯ
ಸನಿಹಕೆ ತಂದೆಯಲ್ಲ ನೀನು
ಚಳಿಯ ಗಾಳಿ ಬೀಸಲು
ಬಿಸಿ ಅಪ್ಪುಗೆ ಬೇಕಾಯಿತೆ ಹೇಳು
ಸ್ನೇಹದ ಛಾಯೆ ಆವರಿಸಿ
ಮನದಲ್ಲಿ ಬೆಂದೆಯಲ್ಲ ನೀನು
ರವಿಯು ಕಾಣುವ ಕನಸಿಗೆ
ಮೋಡ ಅಡ್ಡಿಯಾಯಿತು ನೋಡು
ಕವಿಯ ಅಂತರಂಗದ ನಗೆ
ಅರಳಿಸಿ ನಿಂದೆಯಲ್ಲ ನೀನು
ಸಿಹಿ ಮಾತಿನ ಮೋಡಿಯು
ನೋವ ಹಗುರವಾಗಿಸಿದೆ ಗೆಳೆಯ
ಹೊಸ ಆಸೆಯಗಳ ಹೊತ್ತು
ಕಹಿ ಕ್ಷಣವ ಕೊಂದೆಯಲ್ಲ ನೀನು
ಸೂರ್ಯ ರಶ್ಮಿಯು ಹೊಂಬೆಳಕನು
ಮೂಡಿಸಿದೆ ನವ ಬಾಳಿಗೆ
ಆರ್ಯ ಪುತ್ರನ ನೆನಪಿನಲ್ಲಿ
ದಿನವೂ ಮಿಂದೆಯಲ್ಲ ನೀನು.
