ವ್ಯಾಲಂಟೈನ್ ವಿಶೇಷ

ಪ್ರೀತಿಸುವುದು ತಪ್ಪಲ್ಲ…ಆದ್ರೆ?

ಶಿವಲೀಲಾ ಹುಣಸಗಿ

ಪ್ರೀತಿಗಾವ ಭಾಷೆಯಿದೆಯೆಂದು ಅರ್ಥೈಸಿಕೊಳ್ಳಲು ಸಾಕಷ್ಟು ಸಲ ಪ್ರಯತ್ನ ಮಾಡಿದ್ದಿದೆ.ಪ್ರೀತಿ ಅಂದ್ರೆ ಇದೇನಾ? ಹೇಗೆ ಗುರುತಿಸಿವುದು? ಅದಕ್ಕೊಂದು ಮಾನದಂಡ ಇದೆಯಾ? ನೂರಾರು ಪ್ರಶ್ನೆ ಮನದಲ್ಲಿ ಓಡಾಡುತ್ತಿದ್ದ ಸಮಯ.ಸರಿಯಾಗಿ ತಲೆಬಾಚಿಕೊಳ್ಳಲು ಅಂಗಿಹಾಕಿಕೊಳ್ಳು ಬಾರದು, ಪಕ್ಕದಲ್ಲಿ ಕೂತವಳ, ಕೂತವನ ಬಗ್ಗೆ ಯಾವುದೇ ಆತಂಕ ಅನುಮಾನ ಇಲ್ಲದೆ‌ ಬೆರೆತು ಕುಣಿದಿದ್ದೆ ಬಂತು.ಯಾವುದೇ ಬಣ್ಣದ ತಾರತಮ್ಯವಿಲ್ಲದೆ ಎಲ್ಲರ ಕಂಗಳು ನೈಜತೆಯ ಪರದೆಯ ಮೇಲೆ ಮೂಡಿದ ಬಿಂಬದಂತೆ ನಕ್ಕು ನಲಿಯುತ್ತಿದ್ದವು.ಇಲ್ಲಿ ಎಲ್ಲಿಯು ಪ್ರೀತಿಯ ಸಂಶಯ ಮೂಡಿರಲಿಲ್ಲ.

ಪ್ರೀತಿಯ ಹುಟ್ಟು ಚಿಗುರಿ ಹೆಮ್ಮರವಾಗಿ ಶತಮಾನಗಳಿಂದ ತನ್ನದೇ ಆದ ಛಾಪು ಅಚ್ಚೊತ್ತಿದೆ. ಅದರ ಬೇರು ಸಂಪರ್ಕಕ್ಕೆ ಬರುವುದೇ ಅಮ್ಮನ ಮಡಿಲು,ಅಪ್ಪನ ಹೆಗಲು,ಕರುಳ ಬಳ್ಳಿಯ ಕರೆಸೆಳೆತ. ಎಂತಹ ಮಧುರ ಕ್ಷಣಗಳಿವು.ಇಡೀ ಮನೆಯೇ ಲಾಲಿಯ ನಂದಗೋಕುಲ. ಪ್ರೀತಿಯ ಪರಿಭಾಷೆ ಸಂಬಂಧಗಳ ಬೆಸುಗೆಯಲ್ಲಿ ನಿಂತ ಸೂಕ್ಷ್ಮ ಎಳೆ. ವಾತ್ಸಲ್ಯದ ಪ್ರೇಮಕೆ ಸರಿಸಮನಾಗಿ ನಿಲ್ಲುವ ಪ್ರೀತಿ ಬೇರುಂಟೆ? ಪ್ರೀತಿಯೇಕೆ ಭೂಮಿಮೇಲಿದೆ? ಎಂಬ ಪ್ರಶ್ನೆಗೆ ಉತ್ತರ ಕೊಡುವುದು ನಮ್ಮ ಪುಟ್ಟ ಎದೆಮಿಡಿತ.

ಮರಗಿಡಗಳು ಬಳ್ಳಿಗೆ ಆಶ್ರಯಿಸಿ ಎದೆಗಪ್ಪಿಕೊಂಡು ಬೆಳೆಸುವ ಪರಿ ಕಲಿಸುವ ಹೊಸ ಚಿಂತನೆ ಮರುಹುಟ್ಟು ತನ್ನಿಂದ ತಾನೆ ನಡೆದು ಬರುತ್ತಿರುವುದು. ಹೂವೊಂದು ಬೇಕು ಬಳ್ಳಿಗೆ.ನಗುವೊಂದು ಬೇಕು ಮನಸಿಗೆ.ಗಿಡದಲಿ ಹೂ ಅರಳಿದರೆನೆ ಚಂದ.ಮೊಗದಲಿ ನಗುವಿದ್ದರೆನೆ ಲಕ್ಷಣ.ಹೊರಟಗಳ ಕೈಗೆ ಸಿಕ್ಕ ಪ್ರೀತಿಯ ಆಗರ ಅಣ್ತಮ್ಮಅಕ್ಕತಂಗಿಯತ್ತ ಸಂವೇದನೆಯ ಮಹಾಪೂರ ಹರಿದು ಬಂದಂತೆನಿಸಿ‌ ಇದ್ದರೆ ಹೀಗೆ ಇರಬೇಕು ಈ ಪ್ರೇಮ.ಕಾಳಜಿಯೆಂದು ರಕ್ಷಾಕವಚವಾಗಿ ಪರಿಶುದ್ಧ ರಕ್ಷಾ ಬಂಧನ ಸಾಕ್ಷಿಯಾದಾಗ ಸಹೋದರ ಪ್ರೇಮ ಎಲ್ಲಕ್ಕಿಂತ ಮಿಗಿಲು ಎನ್ನಿಸದಿರಲಿಲ್ಲ…

ಎಲ್ಲವೂ ರಕ್ತ ಸಂಬಂಧವೇ ಆಗಲು ಸಾಧ್ಯವಾ? ಒಮ್ಮೆ ಬಾಯಾರಿ ಬಳಲಿ ನಡೆಯಲಾರದೆ ಕುಸಿದವಳನ್ನು ಅಪರಿಚಿತರು ಉಪಚರಿಸಿದ್ದನ್ನು ಮರೆಯಲಾದಿತೇ ಅದೊಂದು ಮಾನವೀಯತೆಯ ಮೌಲ್ಯವನ್ನು ಎತ್ತಿ ಹಿಡಿದ ಕನ್ನಡಿಯಾಗಿದೆ. ಮೌಲ್ವಿಕ ಪ್ರೀತಿಯ ಎಂದಿಗೂ ಮರೆಯಲು ಸಾಧ್ಯವಿಲ್ಲ.ಪ್ರೀತಿಯ ರೆಂಬೆಕೊಂಬೆಗಳು ನಾನಾರೂಪದಲ್ಲಿ ನಮ್ಮೆದುರು‌ದುತ್ತನೆ ನಿಲ್ಲುತ್ತವೆ.ಅದನ್ನು ಗ್ರಹಿಸುವ ಮನಸ್ಸು ನಮ್ಮದಿದ್ದರೆ ಮಾತ್ರ ಪ್ರೀತಿ ಕರುಣೆಗೆ ಮಹತ್ವ ಬಂದಂತೆ.
ವಯಸ್ಸಾದ ಹಕ್ಕಿಗೆ ಆಹಾರ ಹುಡುಕಿ ತರುವ ಸಾಮರ್ಥ್ಯವಿಲ್ಲದಿರುವಾಗ ಮರಿ ಹಕ್ಕಿ ತಾನು ತನ್ನ ಪುಟ್ಟ ಕೊಕ್ಕಿನಲ್ಲಿ ಆಹಾರ ತಂದು ಗುಟುಕಾಯಿಸುವ ಕಲೆ ಎಲ್ಲರಿಗೂ ಆದರ್ಶ.

“ಪ್ರೇಮಿಗಳ ದಿನ “ಅಂದಿದ್ದೆ ತಡ ಹೃದಯ ಲಂಗು ಲಗಾಮಿಲ್ಲದೇ ಪ್ರೀತಿಸಿದ ಪ್ರೇಮಿಯ ಬಣ್ಣಬಣ್ಣದ ಆಶೋತ್ತರಗಳನ್ನು ಈಡೇರಿಸುವ ಧಾವಂತ.ಕಂಗಳಿಗೆ ಹರ್ಷದ ಕಾಮನಬಿಲ್ಲು. ಅವನ/ಳ ತೋಳಲಿ ಮೈಮರೆವ ಹೊಂಗನಸು.ದೂರದೆಲ್ಲೋ ಸ್ಥಳದಲ್ಲಿ ತಮ್ಮಿಬ್ಬರ ಹೊರತು ಬೇರಾರಿಲ್ಲ…ನಾವೇ ನಿಜವಾದ ಪ್ರೇಮಿಗಳು.ಕಾಣಿಕೆಯ ಹಸ್ತಾಂತರಕೆ ಮೈಮನಗಳು ಅರಿತೋ ಅರಿಯದೆಯೋ ಮತ್ತಿನಲಿ ತೇಲುವ ಕ್ಷಣಿಕ ಹೊತ್ತಿಗೆ ಪ್ರೇಮವೆಂಬ ಪವಿತ್ರ ಭಾವ ಕಾಮರೂಪದಲಿ ಬದಲಾಗಿದ್ದಕ್ಕೆ ಮುಂಬರುವ ಸಮಯದಲ್ಲಿ ಕೈ ಕೈ ಹಿಸುಕಿದರೆನು ಬಂತು?

ಪ್ರೀತಿಯ ಹೆಸರಲಿ ಮೋಸಹೋದವರ ಬದುಕು ಕಣ್ಮುಂದೆ ಇದ್ದರೂ ಪಾಠ ಕಲಿಯಲಾಗದವರನ್ನು ಎಚ್ಚರಿಸುವುದು ಹೇಗೆ? ಅಯ್ಯೋ ಒಬ್ಬರು ಬಾಯ್ ಫ್ರೆಂಡ್,ಗಲ್೯ ಫ್ರೆಂಡ್ ಟಾಯಮ್ ಪಾಸಿಗೆ ಇಲ್ಲಾಂದ್ರೆ ಹೇಗೆ? ಕಲಿತು ಮುಗಿದ ಮೇಲೆ ಎಲ್ಲಾ ಮುಗಿತು. ಅವರೊಂದು ದಿಕ್ಕು ಇವರೊಂದು ದಿಕ್ಕು.ಎಷ್ಟು ವಿಚಿತ್ರ ಅಲ್ವಾ? ಪ್ರೀತಿಗೆ ಮಸಿ ಬಳೆದ ಪರಿಣಾಮ ಎಲ್ಲರೂ ಕೊಂಚ ವಿಚಲಿತರಾಗಿದ್ದಾರೆ. ನಂಬಿಕೆಗಳನ್ನು ಕಳೆದುಕೊಂಡ ಮೇಲೆ ಪ್ರೀತಿ ಹೇಗೆ ಅರಳಿತು? ಆಗಾಗ ಲೈಲಾ ಮಜುನು…ನೆನಪಾಗಿ ಪ್ರೇಮದ ಕೊಂಡಿಗೆ ಹಾಗೂ ಇಂದಿನವರೆಗೂ ರೋಮಿಯೋ ಜೂಲಿಯೆಟ್‌ರ ಪ್ರೀತಿ ಶಾಶ್ವತವಾಗಿ ನಮ್ಮ ಮುಂದೆ ನಿಂತಿದ್ದು ಯಾಕೆ? ಎಂಬ ತಾರ್ಕಿಕ ಚಿಂತನೆ ಅವಶ್ಯ.

ಪ್ರೇಮಿ..ಶಹಜಾನ್’ತನ್ನ ಪ್ರೀತಿಯ ಮಡದಿ ಹಾಗೂ ಪ್ರೇಮಿ ಮುಮ್ತಾಜ್ ಳ ಪ್ರೇಮದ ಕುರುಹಿಗೆ ತಾಜ್ ಮಹಲ್ ಕಟ್ಟಿಸಿದ..ಶ್ವೇತವರ್ಣದ ತಾಜ್ ಮಹಲ್ ನಿರ್ಮಲ ಪ್ರೇಮಕೆ ಬೇರೆ ಬೇಕೆ? ಆಕರ್ಷಿಸಲಾಗುವ ವಿಜಾತಿ ದ್ರುವಗಳಿಗೆ ಪ್ರಕೃತಿಯೇ ಅಸ್ತುಯೆಂದಿದೆ. ಕಾರಣ ಸಮತೋಲನ ಕಾಯ್ದುಕೊಳ್ಳುವಿಕೆಯೇ ಮೂಲಾಧಾರ.ಹೃದಯದ ಬೆಸುಗೆಯಾಗದ ಹೊರತು ಪ್ರೇಮದ ಅನುಭೂತಿಯಾಗಲಾರದು..

ದೇಶ ಪ್ರೇಮವನ್ನು ಎದೆಗೂಡಲ್ಲಿ‌ಕಾಪಿಟ್ಟ ಮನಸಿಗೆ ಸೈನಿಕನಾಗಿ ಗಡಿಕಾಯ್ವವನನ್ನು ಗೌರವಿಸದೇ ಪ್ರೀತಿಸದೇ ಇರದವರು ಯಾರಿಹರು? ಮಾಡು ಇಲ್ಲವೇ ಮಡಿಯೆಂಬ ಜೈಕಾರದಲಿ ಪ್ರೀತಿಯ ಬಾವುಟ ಗಡಿಯೆತ್ತರದಲಿ ಹಾರಿಸಿದ್ದು ತಾಯ್ನೆಲದ ಪ್ರೇಮ. ಎಲ್ಲವನ್ನು ತ್ಯಾಗ ಮಾಡಲು ಆದಿತಾ? ಮನುಷ್ಯ ಅಂದ ಮೇಲೆ ನಾನಾ ಮನೋಭಿಲಾಷೆಗಳು.ಅವು ಸಕ್ರಮವಾ ಅಕ್ರಮವಾ ಎಂಬ ದ್ವಂದ್ವದಲ್ಲಿ ಪ್ರೇಮ ನಲುಗದಿರಲಿ.

ಅಂತೂ ಇಂತೂ ನಿಷ್ಕಲ್ಮಶ ಪ್ರೀತಿಯ ಕಂಡುಕೊಂಡವ ವರ್ಷದುದ್ದಕ್ಕೂ ಪ್ರೇಮಿಗಳ ದಿನವ ಆಚರಿಸುವ.ಅದು ಶಾಶ್ವತವಾಗಿ ಕಣ್ಣರೆಪ್ಪೆಯಂತೆ ಜೊತೆಜೊತೆಯಾಗಿರುತ್ತೆ ಪ್ರೇಮಿಗಳಾದವರು ನೈಜ ಪ್ರೇಮವ ಒರೆಗೆ ಹಚ್ಚುವ ಕಾಯಕಕ್ಕೆ ತೊಡಗಬೇಕು. ‘ಪ್ರೀತಿಸುವುದು ತಪ್ಪಲ್ಲ’ ‘ಪ್ರೀತಿಯ ಅಂಧಾನುಕರಣೆ ತಪ್ಪು’ ಪಕ್ವತೆಯ ಹಾದಿತುಳಿಯದೆ ಪ್ರೀತಿಗೆ ಬಲಿಯಾಗಿ ಭವಿಷ್ಯದಲ್ಲಿ ನರಕ ಕಂಡವರು ನಮ್ಮುಂದೆ ಇರುವಾಗ ನಂಬಿಕೆ‌ ಎಲ್ಲಿಂದ?

ಪ್ರೀತಿಸಿ ಯಾರನ್ನ? ನಿಮಗಾಗಿ ಜೀವತೇಯ್ದವರನ್ನು. ಹಗಲಿರುಳು ನಿಮ್ಮ ಭವಿಷ್ಯದ ಬಗ್ಗೆ ಚಿಂತಿಸುವವರನ್ನು ಕ್ಷಣಿಕ ಸುಖಕಾಗಿ ಮರುಳಾಗದೇ ಶಾಶ್ವತ ಸುಖದ ನಿರೀಕ್ಷೆಯಲ್ಲಿರಿ.ಬಣ್ಣದ ಜಗತ್ತು ನಂಬಿಕೆಗೆ ಅರ್ಹವಲ್ಲ. ಬಣ್ಣಗಳು ಮಾಸಿದ ಮೇಲೆ ಪ್ರೀತಿಸುವವರಾರು? ಹರೆಯದ ಹುಮ್ಮಸ್ಸು ಕೊನೆತನಕ ಉಳಿಯದು.ಕ್ಷಣಿಕ ಆಡಂಬರದ ನೋಟಕ್ಕಿಂತ ಸರಳತೆಯ ವಾಸ್ತವದಲ್ಲಿ ಮಿಂದೆದ್ದ ನಿರಾಭರಣ ಪ್ರೇಮವನ್ನು ಒಮ್ಮನದಿ ಎಲ್ಲರೂ‌ ಆರಾಧಿಸೋಣ.ಪ್ರೇಮ ಹರಿವ ಗಂಗೆಯಂತೆ ಪವಿತ್ರ.ಅಂತಹ ಪ್ರೀತಿ ಎಲ್ಲರಿಗೂ ಸಿಗಲಿಯೆಂದರೆ, ಅದನು ಗುರುತಿಸುವ ಹೃದಯ ಮಿಡಿತ ಎಲ್ಲರಿಗೂ ಬರಲೆಬೇಕು.
ಪ್ರೇಮವೆಂದರೆ ಅದೊಂದು ಅಂತಃಕರಣದ ಬಿಂದು
ಪಡೆದವರಿಗಷ್ಟೇ ದಕ್ಕುವುದು ಅದರ ಆಂತರಿಕ ಭಾವವ.ಪ್ರೇಮ ಜಗತ್ತಿನ ಜೀವಾಳ.


9 thoughts on “

  1. ಪ್ರೀತಿಗೆ ಇರುವ ವಿವಿಧ ರೂಪಗಳ ಬಗ್ಗೆ ತಿಳಿಸಿ ನಿಜವಾಗಲೂ ಪ್ರೀತಿಸೋದು ತಪ್ಪಲ್ಲೆಂಬುದನ್ನು ಸುಂದರವಾಗಿ ಅರ್ಥೈಸಿದ್ದಾರೆ.

  2. ಪ್ರಸ್ತುತ ವಾಸ್ತವಕ್ಕೆ ಬೇಕಾದ ಮೌಲ್ಯಯುತ ಲೇಖನ ರೀ ಮೇಡಂ .ಪ್ರೀತಿ ಪ್ರೇಮ ಭಾವ ದ ಎಲ್ಲಾ ಮುಖಗಳು ತುಂಬಾ ಅಚ್ಚುಕಟ್ಟಾಗಿ ಸುಂದರವಾಗಿ ಬರೆದಿದ್ದು ಹೆಮ್ಮೆ.

  3. ನಿಷ್ಕಲ್ಮಶ ಪ್ರೀತಿ ಆರಾಧಿಸುವವರಿಗೆ ನಿತ್ಯವೂ ವ್ಯಾಲೆಂಟೈನ್ ಡೆ. ಪ್ರೀತಿಗೆ ಬೇಲಿಯಿಲ್ಲ, ಗಡಿ, ಭಾಷೆ, ಜಾತಿಗಳ ಹಂಗಿಲ್ಲ. ಎದೆಗೂಡಿನಲ್ಲಿ ಕಿಂಚಿತ್ ಸಂಚಲನ ಮೂಡಿಸಿದವರ ಮೇಲೆ ಆಚಾನಕ್ ಪ್ರೀತಿಯಾಗಿಬಿಡುತ್ತದೆ. ಪ್ರೀತಿ ಮಾಡುವದಲ್ಲ, ಅದು ತನ್ನಿಂದ ತಾನೇ ಆಗುವ ಅದ್ಭುತ ಕ್ರಿಯೆ.
    ಈ ಹಿನ್ನೆಲೆಯಲ್ಲಿ ತಂದೆ ತಾಯಿ, ಗುರು ಹಿರಿಯರು, ದೇಶಕ್ಕಾಗಿ ಪ್ರಾಣ ಒತ್ತೆಯಿಡುವ ಜವಾನರು, ನಾವು ಕಲಿತ ಶಾಲೆ, ನಮ್ಮೂರು, ನಮ್ಮನ್ನು ಕರಾರು ರಹಿತವಾಗಿ ಪ್ರೀತಿಸುವ ಜೀವಿಗಳು ಇವರೆಲ್ಲರ ಮೇಲೆ ಪ್ರೀತಿ ಹುಟ್ಟುತ್ತದೆ.. ಪ್ರೀತಿಯ ಬಗ್ಗೆ ಸುಂದರವಾಗಿ ಮೂಡಿಬಂದ ಬರಹ ಮಸ್ತ..! ಮಸ್ತ..!!

  4. ಪ್ರೀತಿಯ ವೈಶಾಲ್ಯದ ಹರಿವನ್ನು ಸೊಗಸಾಗಿ ಚಿತ್ರಿಸಿದ್ದೀರಿ ಸಹೋದರಿ.

  5. ಲೇಖನ ಓದಿದಾಗ ಇನ್ನೂ ಓದಬೇಕೆನಿಸುತ್ತದೆ.ಕಾರಣ ಆ ವಿಷಯ ವಸ್ತು ಹಾಗೆಯೆ ಇರುತ್ತದೆ.ತಂದೆ ತಾಯಿಯರಿಂದ ಆರಂಭವಾದ ಪ್ರೀತಿ ತನ್ನ ತಾಯ್ನೆಲ ಪ್ರಿತಿಸುವವರೆಗೆ ತುಂಬಾ ಸೊಗಸಾಗಿ ಬರೆಯುತ್ತ ಹೋದವರು ಪ್ರೀತಿಸು ತಪ್ಪಲ್ಲ.ಹಾಗಾದರೆ ಯಾವುದು ತಪ್ಪು? ಎಂಬ ಪ್ರಶ್ನೆ ಉತ್ತರನು ನಮ್ಮಲ್ಲೇ ಇದೆ.ನಿಷ್ಕಲ್ಮಷ…ಯಾರಿಗೂ ಧಕ್ಕೆಯಾಗದ ರೀತಿಯಲ್ಲಿ ಪ್ರೀತಿ ತುಂಬಿದ ಮನಸ್ಸು ಇರಬೇಕು.ದ್ವೇಷ ದಿಂದ ಸಾಧಿಸಲಾಗದ್ದು ಪ್ರೀತಿಯಿಂದ ಸಾಧಿಸಬಹುದು.ಆ ಶೈಲಿ,ಪದಜೋಡಣೆ,ಆ ಶೀರ್ಷಿಕೆ, ಆ ವಿಷಯ ವಸ್ತು ಇಂತಹ ಇವರ ಬರಹ ಓದಿದವ ಪ್ರೀತಿಯಿಂದ ದೂರ ಇರಲಾರ ಶುಭವಾಗಲಿ ಮೆಡಮ್

  6. ಪ್ರೀತಿಯ ಪರಿಕಲ್ಪನೆ ಚೆನ್ನಾಗಿದೆ. ಅಭಿನಂದನೆಗಳು

  7. ಪ್ರೀತಿಯ ಮುಂದೆ ಯವ್ ದುಷ್ಟ ಭಾವಗಳು ನಿಲ್ಲಲು ಸಾಧ್ಯವಿಲ್ಲ…ಪ್ರೀತಿಯೆ ಆದಿ..ಪ್ರೀತಿಯೆ ಅಂತ್ಯ…superb ಗೆಳತಿ…ಒಳ್ಳೆಯ ಬರಹ

  8. ನಿಷ್ಕಲ್ಮಶ ಪ್ರೀತಿ ಎಂದಿಗೂ ಅಮರವಾದುದು. ಪ್ರೀತಿಯ ವಿಶ್ಲೇಷಣೆ ಚೆನ್ನಾಗಿದೆ .ಪ್ರೀತಿ ಎಂಬುದು ಕೇವಲ ಬಾಹ್ಯ ಸೌಂದರ್ಯಕ್ಕಷ್ಟೇ ಸೀಮಿತವಾದರೆ ಅದು ನೈಜ ಪ್ರೀತಿಯಲ್ಲ. ಪ್ರೀತಿ ಎಂಬುದು ಕೇವಲ ಪ್ರೇಮಿಗಳ ನಡುವಣ ಮಾತ್ರವಲ್ಲ ಎಂಬುದನ್ನು ಬಹಳ ಚೆಂದವಾಗಿ ಬರೆದಿರುವಿರಿ

    ಜಯಶ್ರೀ ಹಾಸನ

Leave a Reply

Back To Top