ಕಾವ್ಯ ಸಂಗಾತಿ
ಆಗುತ್ತಲೇ ಇರಲಿಲ್ಲ
ಬಿ.ಶ್ರೀನಿವಾಸ
ಮೊನ್ನೆ ದಿನದ
ಹುಡುಗಿಯರಂತೆ
ಕೂಗಿದ್ದಿದ್ದರೆ…
ಸೀತೆ
ಕಾಡಿಗೆ ಹೋಗುತ್ತಿರಲಿಲ್ಲ
ಅಪಹರಣವಾಗುತ್ತಿರಲಿಲ್ಲ
ದ್ರೌಪದಿಯ
ಮಾನ
ದಿಟ್ಟೆಯಂತೆ
ಕೂಗಿದ್ದಿದ್ದರೆ..
ನಿಲ್ಲುತ್ತಲೇ ಇರಲಿಲ್ಲ
ಅಹಲ್ಯೆ
ಕಲ್ಲಾಗಿ!
ಕೇವಲದ ಬಣ್ಣಗಳು
ಆಗುತ್ತಿರಲಿಲ್ಲ
ರಕ್ತವರ್ಣ!
ಹಗಲುಗಳು
ಬಣ್ಣ ಕಳೆದುಕೊಳ್ಳುತ್ತಿರಲಿಲ್ಲ
ಬಣ್ಣ ಬಳಿದ
ರಾತ್ರಿಗಳು ಹೀಗೆ ನಿದ್ದೆ ಕಸಿಯುತ್ತಿರಲಿಲ್ಲ
ಮತಿಹೀನರಿಗೆ
ಮತ ಮಾರಾಟವಾಗಿರದಿದ್ದರೆ…
ವಸ್ತ್ರಗಳೂ
ಮುಚ್ಚಿರುತ್ತಿದ್ದವು
ಏಸೊಂದು ಜನರ
ಬೆತ್ತಲೆ ದೇಹಗಳನು
ಹಾಕಬೇಕಿರಲಿಲ್ಲ
ಧರ್ಮಗ್ರಂಥಗಳನು
ತೂಗುವ ತಕ್ಕಡಿಗೆ
ಮಾಡಬೇಕಿರಲಿಲ್ಲ
ನ್ಯಾಯಕೂ ತುಲಾಭಾರ!
ಅಸಲಿಗೆ
ಅಯೋಧ್ಯೆಯ ರಾಮ,ಪೈಗಂಬರ,ಏಸು
ದೇಶಾಂತರ ಹೋಗಿರದಿದ್ದರೆ…
ಇರುತ್ತಲೇ ಇರಲಿಲ್ಲ
ಗದ್ದಲ
ಈಗಿನಂತೆ!