ವ್ಯಾಲಂಟೈನ್ ವಿಶೇಷ
ಇನಿಯನ ಆಗಮನ
ರವಿಯ ಉದಯದಿ ಅರಳಿ
ನಳನಳಿಸುವ ಕಮಲದಂತೆ
ಹೂವಿನ ಅಂದಕೆ ಬೆರಗಾಗಿ
ದುಂಬಿ ಝೇಂಕರಿಸಿದಂತೆ
ವಸಂತನ ಆಗಮನಕ್ಕೆ ಉಲಿದು
ಕೋಗಿಲೆ ಕೊರಳು ಕೊಂಕಿಸಿದಂತೆ
ಬೀಸುವ ಸೂಸು ಗಾಳಿಯಲ್ಲಿ
ಮಲ್ಲಿಗೆ ಸುಗಂದ ಹರಡಿದಂತೆ
ಕಡಲ ತೀರದ ಸ್ಪರ್ಶಕ್ಕೆ ಹರ್ಷದಿ
ಅಲೆಗಳು ಹುಚ್ಚೆದ್ದು ಕುಣಿದಂತೆ
ದಿಗಂತ ಚುಂಬಿಸಿದ ನೆಸರ ನೋಡಿ
ಬಾನೆಲ್ಲ ನಾಚಿ ಕೆಂಪಾದಂತೆ
ಬೆರಳುಗಳ ತುಡಿತಕ್ಕೆ ಮಿಡಿದು
ರಾಗ ಹೊಮ್ಮಿಸುವ ವೀಣೆಯಂತೆ
ಘೃತವನುಂಡು ಪ್ರಜ್ವಲಿಸುವ
ಅಗ್ನಿಯ ಜ್ವಾಲೆಗಳಂತೆ
ಇನಿಯನ ಬರವಿಗೆ ಕಾಯ್ದ ಮನ
ಮಿಲನದ ಆತುರಕೆ ಅರಳಿದೆ
ಪ್ರೊ ರಾಜನಂದಾ ಘಾರ್ಗಿ