ಕಾವ್ಯ ಸಂಗಾತಿ
ಅಮಾಟೆ ಅಮಾಟೆ

ಅಮಾಟೆ ಅಮಾಟೆ
ಕಣ್ಮುಚ್ಚಿ ತಲೆಯೆತ್ತಿ
ಅಮಾಟೆ ಅಮಾಟೆ
ಎನ್ನುತ್ತಿದ್ದುದು ಅಪರಿಚಿತವೇ?
ಅಮಾಟೆ ಅಮಾಟೆ
ಆಮ್ ಐ ರೈಟ್
ಎಲ್ಲರೂ ಆಡಿರಬಹುದಾದ
ಇಲ್ಲವೇ ನೋಡಿರಬಹುದಾದ ಆಟ
ಹುಟ್ಟಿದವ ಬದುಕಿನ
ಆಟಕ್ಕೆ ಇಳಿಯಲೇಬೇಕು
ಸೋಲು-ಗೆಲುವುಗಳು
ಶತಸಿದ್ಧ ಕಾಣಲೇಬೇಕು
ಸೋತೆನೆಂಬ ಬೇಸರದಲ್ಲಿ
ಮುಳುಗದೆ ಮತ್ತೆ ಮತ್ತೆ
ಗೆಲ್ಲುವ ಕನಸು ತುಂಬುವ
ಆಟ ಕುಂಟೆಬಿಲ್ಲೆ
ಸೀಮೆಸುಣ್ಣದಿಂದ ಬರೆದ
ಆಯತಾಕಾರದ ಮನೆಗಳಿಲ್ಲಿ
ಭೂಮಿಯೊಳಗೆ
ಶಾಶ್ವತ- ಹಸಿರು
ಇವು ವಿಶ್ವಕ್ಕಾಗಿ
ಕಟ್ಟಿದ ಮನೆಗಳು
ಯಾರ ಹೆಸರಿನಲ್ಲಿಯೂ ಇಲ್ಲ
ಎಲ್ಲರ ಹೆಸರಿನಲ್ಲಿಯೂ ಇವೆ
ಯಾರು ಯಾವಾಗ ಬೇಕಾದರೂ
ಆಟ ಆರಂಭಿಸಬಹುದು
ಉಳಿದವರು ಸರತಿ ಸಾಲಲ್ಲಿ
ಕಾದು ನಿಂತಿರಬೇಕು
ಇಲ್ಲಿ ಎಸೆಯುವ ಬಿಲ್ಲೆ
ನಮಗೆ ನಾವೇ ಎಸೆದುಕೊಂಡ ಸವಾಲು
ಪ್ರತಿ ಹೆಜ್ಜೆಯನ್ನೂ ನಡೆದು ಸಾಗುವಂತಿಲ್ಲ
ಕುಂಟುತ್ತಾ ಕುಂಟುತ್ತಾ ಮುನ್ನಡೆಯಬೇಕು
ಆರಂಭದಲ್ಲಿ ಹಿಗ್ಗಿ ಸಾಗಿದರೂ
ಕಷ್ಟ, ನೋವು, ನಿರಾಸೆ
ಎದುರಾದರೂ ಗುರು ಮತ್ತು
ಗುರಿ ಕೈಹಿಡಿಯುತ್ತವೆ
ಆಯಾಸವಾಗಿರದ್ದರೂ
ನಮಗೆ ನಾವೇ ಧೈರ್ಯ
ತುಂಬಿಸಿಕೊಳ್ಳಲೆಂಬಂತೆ
ತುಸು ವಿರಾಮ ಗುಣಿಸು ಚಿನ್ಹೆಯಲ್ಲಿ
ಬಿಲ್ಲೆಯನ್ನು ಸರಿಯಾಗಿ ಮನೆಯೊಳಗೆ ಎಸೆಯದಿದ್ದರೆ
ಗೆರೆಯ ಮೇಲೆ ಹಾಕಿಬಿಟ್ಟರೆ
ಹೊರ ತಳ್ಳಿದ ಬಿಲ್ಲೆಯನ್ನು ತುಳಿಯದಿದ್ದರೆ
ಆಟ ಬೇರೆಯವರಿಗೆ ಹೋಗುತ್ತದೆ
ಕುಂಟಲು ಅಸಮರ್ಥರಾದರೂ
ಆಶ್ಚರ್ಯವಿಲ್ಲ
ಆದರೆ ಸೋತೆನೆಂದು
ಇಲ್ಲಿ ಯಾರೂ ಸೊರಗುವುದಿಲ್ಲ
ಹುಟ್ಟು ಮತ್ತು ಸಾವು
ಪ್ರಕೃತಿಯ ಎರಡು ವರಗಳು
ಮಧ್ಯದ ಬದುಕಿನ ಆಟ
ಅನಿವಾರ್ಯ ವರ
ಕುಂಟುತ್ತಲೇ ಸಾಧನೆಗೈದು
ಆಟ ಮುಗಿಸಬೇಕಾದುದು
ನಮ್ಮ ಕರ್ತವ್ಯ ವರ
——————
ಒಲವು
